News

ರೇಷ್ಮೆ ಬೆಳೆಗಾರರಿಂದ ರೇಷ್ಮೆ ಕೃಷಿ ಪ್ರಶಸ್ತಿಗೆ ರೈತರಿಂದ ಅರ್ಜಿ ಆಹ್ವಾನ

18 September, 2021 3:59 PM IST By:

ರೇಷ್ಮೆ ಇಲಾಖೆ ವತಿಯಿಂದ ಪ್ರಸ್ತುತ ಸಾಲಿನ ತುಮಕೂರು ಜಿಲ್ಲೆಯ ರೇಷ್ಮೆ ಬೆಳೆಗಾರರಿಂದ ರೇಷ್ಮೆ ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಕನಿಷ್ಟ 1 ಎಕರೆ ಹಿಪ್ಪು ನೇರಳೆ ವಿಸ್ತೀರ್ಣ ಹೊಂದಿರಬೇಕು. ಪ್ರತ್ಯೇಕ ಹುಳು ಸಾಕಾಣಿಕೆ ಮನೆ ಇರಬೇಕು. 100 ಮೊಟ್ಟೆಗೆ ಸರಾಸರಿ ರೇಷ್ಮೆಗೂಡಿನ ಇಳುವರಿ 65 ಕೆಜಿಗಿಂತ ಕಡಿಮೆ ಇರಬಾರದು ಹಾಗೂ 1 ಎಕರೆ ರೇಷ್ಮೆ ಗೂಡಿನ ಉತ್ಪಾದನೆ 500 ಕೆಜಿ ಗಿಂತ ಕಡಿಮೆ ಇರಬಾರದು. ಅರ್ಜಿ ಸಲ್ಲಿಸುವ ರೇಷ್ಮೆ ಬೆಳೆಗಾರರು ರೇಷ್ಮೆ ಪಾಸ್ ಪುಸ್ತಕ, ರೇಷ್ಮೆ ಮೊಟ್ಟೆ, ಚಾಕಿ ಖರೀದಿಸುವ ಬಗ್ಗೆ ಹಾಗೂ ರೇಷ್ಮೆ ಗೂಡು ಮಾರಾಟ ಮಾಡಿರುವ ಬಗ್ಗೆ ದಾಖಲಾತಿಗಳನ್ನು ಹೊಂದಿರಬೇಕು.

ಅರ್ಹ ರೇಷ್ಮೆ ಬೆಳೆಗಾರರು ಸ್ಥಳೀಯ ರೇಷ್ಮೆ ವಿಸ್ತರಣಾಧಿಕಾರಿಗಳು/ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅಗತ್ಯ ಮಾಹಿತಿ ಮತ್ತು ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 30 ರೊಳಗೆ ಸಲ್ಲಿಸಬಹುದು ಎಂದು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ರಾಜ್ಯದಲ್ಲಿ ತುಮಕೂರು ಜಿಲ್ಲೆ ವಿಶಿಷ್ಠ ಸ್ಥಾನ ಪಡೆದಿದೆ. ರೇಷ್ಮೆ ಉತ್ಪಾದನೆಗೆ ಬೇಕಾದ ಮೂಲ ಮೈಸೂರು ಬಿತ್ತನೆ ಗೂಡು ಮತ್ತು ಬೈವೋಲ್ಟೈನ್ ಬಿತ್ತನೆ ಗೂಡುಗಳನ್ನ ಉತ್ಪಾದಿಸಿ ರಾಜ್ಯದ ಮೊಟ್ಟೆ ತಯಾರಿಕೆಗೆ ವಿತರಿಸಲಾಗುತ್ತಿದೆ. ರೇಷ್ಮೆ ಇಲಾಖೆ ಹೊರತಂದಿರುವ ನೂತನ ತಾಂತ್ರಿಕತೆಗಳ ಫಲವಾಗಿ ಮತ್ತು ಸರ್ಕಾರ ಕಾಲಕಾಲಕ್ಕೆ ನೀಡುತ್ತಿರುವ ಸಹಾಯಧನ ಸವಲತ್ತುಗಳಿಂದ ರೇಷ್ಮೆ ಗೂಡಿನ ಸರಾಸರಿ ಇಳುವರಿಯಲ್ಲಿ ಏರಿಕೆಯಾಗಿದೆ.

ರೇಷ್ಮೆ ಮತ್ತು ಶ್ರೀಗಂಧವು  ಕರ್ನಾಟಕ ರಾಜ್ಯದ ಅದ್ವಿತೀಯ ಉತ್ಪನ್ನಗಳು.  ರೇಷ್ಮೆ ಕೃಷಿಯು ಕರ್ನಾಟಕದಲ್ಲಿ ಸಾಂಪ್ರದಾಯಿಕ ಬೆಳೆಯಾಗಿದ್ದು, ಸಾಂಸ್ಕೃತಿಕವಾಗಿ ವಿಶಿಷ್ಟ ಸ್ಥಾನ ಪಡೆದಿದೆ.  ಹಿಪ್ಪುನೇರಳ ಬೇಸಾಯದಿಂದ ವಸ್ತ್ರ ತಯಾರಿಸುವವರೆಗಿನ ಎಲ್ಲಾ ಹಂತದ ರೇಷ್ಮೆ ಕೃಷಿಯ ಚಟುವಟಿಕೆಗಳು ಅತ್ಯಂತ ರೋಮಾಂಚನಕಾರಿಯಾಗಿದೆ.

ಮೈಸೂರು ರೇಷ್ಮೆ ಭೌಗೋಳಿಕ ಸೂಚಕ ಸ್ಥಾನವನ್ನು ಪಡೆದಿರುತ್ತದೆ.  ರೇಷ್ಮೆ ಕೃಷಿಯು ರೇಷ್ಮೆ ಹುಳು ಸಾಕಾಣಿಕೆ, ಹಿಪ್ಪುನೇರಳೆ ಬೇಸಾಯ ಹಾಗೂ ಕಚ್ಚಾ ರೇಷ್ಮೆ ಉತ್ಪಾದನೆಗಾಗಿ ನೂಲು ಬಿಚ್ಚಾಣಿಕೆಗಳನ್ನು ಒಳಗೊಂಡಿದ್ದು, ರಾಜ್ಯದಲ್ಲಿ 250 ವರ್ಷಗಳ ಹಿಂದಿನಿಂದಲೂ ಪ್ರಚಲಿತವಾಗಿದೆ. ಈ ಉದ್ಯಮವು ಕೃಷಿ ಮೂಲದ, ಕಾರ್ಮಿಕ ಪ್ರಧಾನ ಮತ್ತು ಆರ್ಥಿಕ ಸಬಲೀಕರಣಕ್ಕೆ ಸಹಾಯಕವಾದ ಪ್ರಮುಖ ಗುಡಿ ಕೈಗಾರಿಕೆಯಾಗಿದೆ.  ಈ ಕೈಗಾರಿಕೆಯು ಮುಖ್ಯವಾಗಿ ಗ್ರಾಮಾಂತರ ಪ್ರದೇಶಗಳ ಜನರ ಬಡತನವನ್ನು ನಿರ್ಮೂಲಗೊಳಿಸಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಹೊಂದಲು ಸಹಕರಿಸುವಲ್ಲಿ ಯಶಸ್ವಿಯಾಗಿದೆ.  ಉಪಕಸುಬಾಗಿದ್ದ ರೇಷ್ಮೆ ಕೃಷಿಯು ಇತ್ತೀಚಿಗೆ ಮುಖ್ಯ ಕಸುಬಾಗಿ ಪರಿಣಮಿಸುತ್ತಿದೆಯಲ್ಲದೆ, ರೇಷ್ಮೆ ವ್ಯವಸಾಯವನ್ನು ದೊಡ್ಡ ಪ್ರಮಾಣದಲ್ಲಿಯೂ ಕೈಗೊಳ್ಳಲು ರೈತರು ಮುಂದೆ ಬರುತ್ತಿದ್ದಾರೆ.

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ರೇಷ್ಮೆ ಕೃಷಿ ಮತ್ತು ರೇಷ್ಮೆ ಕೈಗಾರಿಕಾ ಚಟುವಟಿಕೆಗಳಿಂದ ವಾರ್ಷಿಕವಾಗಿ ಸುಮಾರು 60 ರಿಂದ 70 ಲಕ್ಷ ಜನಕ್ಕೆ ಉದ್ಯೋವಕಾಶಗಳನ್ನು ದೊರೆಯುತ್ತಿದೆ.  ಕರ್ನಾಟಕದ ಸುಮಾರು 12 ಲಕ್ಷ ಕುಟುಂಬಗಳಿಗೆ ರೇಷ್ಮೆ ಕೃಷಿ  ಮತ್ತು ರೇಷ್ಮೆ ಕೈಗಾರಿಕೆಗಳು ಉದ್ಯೋಗಾವಕಾಶಗಳನ್ನು ಕಲ್ಪಿಸುವ ಬಹುಮುಖ್ಯ ಕ್ಷೇತ್ರಗಳಾಗಿರುತ್ತವೆ.  ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರೇಷ್ಮೆ ಕೃಷಿ ಪ್ರಧಾನ ಕಸುಬಾಗಿದೆ.  ಸಮಾಜದ ಸಣ್ಣ, ಮಧ್ಯಮ ಮತ್ತು ದುರ್ಬಲ ವರ್ಗದ ಜನರಿಗೆ ಈ ಕಸುಬು ಮೂಲ ಜೀವನೋಪಾಯವಾಗಿದೆ.  ರೇಷ್ಮೆ ಉತ್ಪನ್ನಗಳ ವಹಿವಾಟಿನಿಂದ ಗ್ರಾಮೀಣ ಪ್ರದೇಶದ ರೈತರಿಗೆ ಆರ್ಥಿಕ ಸದೃಡತೆಯನ್ನು ಕಲ್ಪಿಸಿದಂತಾಗಿದೆ.  ರೇಷ್ಮೆ ಕೃಷಿಯಲ್ಲಿ ಶೇಕಡ 60ರಷ್ಟು ಕೆಲಸವನ್ನು ಮಹಿಳೆಯರು ನಿರ್ವಹಿಸುವುದರಿಂದ ಮಹಿಳೆಯ ಸಬಲೀಕರಣಕ್ಕೆ ರೇಷ್ಮೆ ಕೃಷಿ ಬಹು ಮುಖ್ಯ ಪಾತ್ರವಹಿಸಿದೆ.