ರೈತರ ಉತ್ಪಾದನೆ ಪ್ರಮಾಣ ಹೆಚ್ಚಿಸಲು ಹಾಗೂ ಆರ್ಥಿಕವಾಗಿ ಹಿಂದುಳಿದ ರೈತರಿಗೆ ನೆರವು ನೀಡುವ ಉದ್ದೇಶದಿಂದ ದೇಶಾದ್ಯಂತ 10 ಸಾವಿರ ಉತ್ಪಾದಕರ ಸಂಘಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ 750 ಸಂಘಗಳನ್ನು ಆರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದು ಶ್ಲಾಘನೀಯ ಎಂದ ಅವರು ಮುಂಬರುವ ಮೂರು ವರ್ಷಗಳಲ್ಲಿ ಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಂಕಲ್ಪದಂತೆ ಸಣ್ಣ ರೈತರನ್ನು ಸಂಘಟಿಸಿ, ಕೃಷಿ ಉತ್ಪಾದಕರ ಸಂಘಗಳನ್ನು ರಚಿಸಲಾಗುವುದು. ಈ ಸಂಘಗಳ ಮೂಲಕ ರೈತರಿಗೆ ಕೇಂದ್ರ ಸರಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ. ಈ ಸಂಘಗಳ ಮೂಲಕ ಬೀಜ ಮತ್ತು ಬಾಡಿಗೆ ಆಧಾರದ ಮೇಲೆ ಕೃಷಿ ಯಂತ್ರಗಳನ್ನು ಒದಗಿಸಲಾಗುವುದು. ಅದರಲ್ಲೂ ಮುಖ್ಯವಾಗಿ ಪಾರಂಪರಿಕ ಕೃಷಿ ಪದ್ಧತಿಯನ್ನು ಉತ್ತೇಜಿಸಲಾಗುತ್ತದೆ ಎಂದರು.
ದೇಶದಲ್ಲಿ ಈವರೆಗೆ ಎಣ್ಣೆ ಕಾಳುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಸಾಧ್ಯವಾಗಿಲ್ಲ. ಹವಾಮಾನ ವೈಪರೀತ್ಯದಿಂದ ಎಣ್ಣೆ ಕಾಳುಗಳ ಉತ್ಪಾದನೆ ಕುಂಠಿತಗೊಳ್ಳುತ್ತಿರುತ್ತದೆ. ಈ ಕಾರಣಕ್ಕೆ ಶೇ.70 ರಷ್ಟು ಎಣ್ಣೆ ಕಾಳುಗಳನ್ನು ಮಲೇಷಿಯಾ, ಇಂಡೋನೇಷ್ಯಾ ಮೊದಲಾದ ದೇಶಗಳಿಂದ ರಫ್ತು ಮಾಡಿಕೊಳ್ಳಲಾಗುತ್ತಿದೆ. ಈ ಕಾರಣಕ್ಕಾಗಿ ರೂ.7500 ಕೋಟಿ ವಿದೇಶಿ ವಿನಿಮಯ ರೂಪದಲ್ಲಿ ಹಣ ವ್ಯಯವಾಗುತ್ತಿದೆ ಎಂದರು.
ಈ ನಿಟ್ಟಿನಲ್ಲಿ ಆಸಕ್ತ ರೈತರಿಗೆ ತಾಳೆ ಸಸಿಗಳನ್ನು ವಿತರಿಸಲು ಕೇಂದ್ರ ಸರಕಾರ ಮುಂದಾಗಿದೆ. ಮುಖ್ಯವಾಗಿ ತೆಂಗು ಬೆಳೆಯುವ ಈಶಾನ್ಯ ರಾಜ್ಯಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ಸಸಿಗಳನ್ನು ವಿತರಿಸಲಾಗುತ್ತದೆ ಎಂದರು.
ಕೃಷಿ ಮೂಲ ಸೌಕರ್ಯ ನಿಧಿ ಅಡಿ ಲಭ್ಯವಿರುವ ಅನುದಾನ ಬಳಸಿಕೊಂಡು ಆಹಾರ ಸಂಸ್ಕರಣೆ, ಬ್ರಾಂಡಿಂಗ್ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು.
ರೈತರು ಉತ್ಪಾದನೆಗೆ ಸೂಕ್ತ ರಫ್ತು ವ್ಯವಸ್ಥೆ ಕಲ್ಪಸಲು ಪೂರಕವಾಗಿ ಎಕ್ಸ್ ಪೋ ಕ್ಲಸ್ಟರ್ ಗಳನ್ನು ಆರಂಭಿಸಲಾಗುವುದು. ಪ್ರತಿ ತಾಲೂಕಿಗೆ ಒಂದರಂತೆ ತೆರೆಯಲಾಗುವ ಕೃಷಿ ಉತ್ಪಾದಕರ ಸಂಘಗಳಿಂದ ಅಗತ್ಯ ಮಾಹಿತಿ ಪಡೆದು ರೈತರ ಉತ್ಪನ್ನಗಳನ್ನು ವಿಶ್ಚ ಮಾರುಕಟ್ಟೆಗೆ ಪರಿಚಯಿಸಲಾಗುತ್ತದೆ. ದೇಶದ ಪೆಟ್ರೋಲಿಯಂ ಕೊರತೆ ನೀಗಿಸಲು ಹೆಚ್ಚುವರಿ ಕಬ್ಬು ಬಳಸಿಕೊಂಡು ಎಥೆನಾಲ್ ಉತ್ಪಾದಿಸಲಾಗುತ್ತದೆ ಎಂದು ತಿಳಿಸಿದರು.
ರೈತರ ಜೊತೆ ಚರ್ಚೆಗೆ ಈಗಲೂ ಸಿದ್ಧ
ದೆಹಲಿಯಲ್ಲಿ ರೈತರ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೋರಾಟ ನಿರತ ರೈತರ ಜೊತೆ 11 ಸುತ್ತು ಮಾತುಕತೆ ಆಗಿದೆ. ರೈತರ ಜೊತೆ ಮಾತನಾಡಲು ನಾವು ಸಿದ್ಧರಿದ್ದೇವೆ. ಆದರೆ ಕೃಷಿ ಕಾಯ್ದೆ ಬಿಲ್ ಯಾಕೆ ಮಾಡಿದ್ದೇವೆ ಎನ್ನುವುದನ್ನು ಹೋರಾಟ ನಿರತ ರೈತರು ಅರ್ಥ ಮಾಡಿಕೊಳ್ಳಬೇಕು ಎಂದರು.
ಈಗಾಗಲೇ ಕಾಫಿ, ಮೆಣಸು, ರೋಸ್ ಈರುಳ್ಳಿಗೆ ಸೃಷ್ಟಿಯಾದಂತೆ ರೈತರ ಇತರೆ ಉತ್ಪನ್ನಗಳಿಗೆ ಕ್ಲಸ್ಟರ್ ಆಧಾರಿತ ಮಾರುಕಟ್ಟೆಯನ್ನು ಸೃಷ್ಟಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಜಿಪಿಡಿಯಲ್ಲಿ ಒಟ್ಟಾರೆ ಕೃಷಿ ಪಾಲು ಮುಂಚೆ ಶೇ. 13 ರಷ್ಟಿತ್ತು. ಅದಕ್ಕೆ ಶೇಕಡಾ 25ಕ್ಕೆ ಹೆಚ್ಚಿಸುವ ಗುರು ಹೊಂದಲಾಗಿದೆ ಎಂದರು.
ರಫ್ತುದಾರರ ಸಮ್ಮೇಳನ: ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳನ್ನು ಜಗತ್ತಿನ ಬೇರೆ ಬೇರೆ ದೇಶಗಳಿಗೆ ರಫ್ತು ಮಾಡುವ ರಫ್ತುದಾರರ ಬೃಹತ್ ಸಮ್ಮೇಳನ ಇದೇ ಸೆಪ್ಟೆಂಬರ್ 22ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದರು.