ಜಾಗತಿಕ ಆಹಾರವಾಗಿ ಹಾಲಿನ ಮಹತ್ವವನ್ನು ಗುರುತಿಸಲು ಮತ್ತು ಹೈನುಗಾರಿಕೆ ಕ್ಷೇತ್ರವನ್ನು ಅಭಿವೃದ್ದಿ ಪಡಿಸಲು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ 2001 ರಲ್ಲಿ ವಿಶ್ವ ಕ್ಷೀರ ದಿನವನ್ನು ಪ್ರತಿ ವರ್ಷ ಜೂನ್ 1 ರಂದು ಪರಿಚಯಿಸಿತು.
ಪ್ರತಿಯೋಬ್ಬರ ಆರೋಗ್ಯಕರ, ಸಮತೊಲನ ಆಹಾರದಲ್ಲಿ ಹಾಲು ಒಂದು ಪ್ರಮುಖ ಪಾತ್ರವಹಿಸಿದೆ. ಹಾಲು ಎಲ್ಲಾ ಹೆಣ್ಣು ಸಸ್ತನಿಗಳು ತಮ್ಮ ಹಸುಗೂಸುಗಳ ಪೋಷಣೆಗಾಗಿ ಸ್ರವಿಸುವ ಪೋಷಕಾಂಶಯುಕ್ತ ದ್ರವ. ತಾಯಿ ನೀಡುವ ಮೊದಲ ಕೊಡುಗೆ ಎಂದರೆ ತಪ್ಪಾಗಲಾರದು. ಹಾಲು ಒಂದು ಪರಿಪೂರ್ಣ ಆಹಾರ.
ಹಾಲು ಜಾಗತಿಕ ಆಹಾರವಾಗಿದ್ದು, ಭಾರತೀಯರ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನ ಪಡೆದು, ದಿನನಿತ್ಯದ ಅಹಾರದ ಅವಿಭಾಜ್ಯ ಅಂಗವಾಗಿದೆ. ಆಹಾರ ಮತ್ತು ಪಾನೀಯಗಳಲ್ಲಿ ಹಾಲಿನ ಬಳಕೆ ಸಾವಿರಾರು ವರ್ಷಗಳಿಂದ ನಡೆಯುತ್ತಿದೆ. ಹಾಲು ಕೇವಲ ಪೋಷಣೆಗೆ ಮಾತ್ರ ಸೀಮಿತವಾಗಿರದೆ ಪ್ರಪಂಚದಾದ್ಯಂತ ಸುಮಾರು 1 ಬಿಲಿಯನ್ ಜನರ ಜೀವನೋಪಾಯಕ್ಕೆ ಕಾರಣವಾಗಿದೆ. ವಿಶ್ವದಾದ್ಯಂತ ಆರು ಶತಕೋಟಿ ಜನರು ಹಾಲು ಮತ್ತು ಹಾಲಿನ ಪದಾರ್ಥಗಳನ್ನು ಸೇವಿಸುತ್ತಾರೆ ಎಂಬ ಅಂಶವನ್ನು ಗಮನಿಸಿದರೆ, ಈ ಆರೋಗ್ಯಕರ, ರುಚಿಕರವಾದ ಹಾಲಿನ ಬಗ್ಗೆ ಅರಿವು ಮೂಡಿಸುವುದು ಅತೀ ಅವಶ್ಯಕ.
ಹಾಲಿನ ಮೂಲಗಳು : ಹಸು, ಎಮ್ಮೆ, ಆಡು, ಒಂಟೆ, ಕತ್ತೆ.
ಹಾಲಿನ ಪೌಷ್ಠಿಕತೆ : ಹಾಲಿನಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಜೀವಸತ್ವಗಳು ಮತ್ತು ಖನಿಜಾಂಶಗಳು ಅಪಾರ ಪ್ರಮಾಣದಲ್ಲಿ ಲಭ್ಯವಿದ್ದು, ಆರೋಗ್ಯವಂತ ಮತ್ತು ಸದೃಢರಾಗಿ ಮಾಡುವಲ್ಲಿ ವಿಶೇಷ ಪಾತ್ರ ವಹಿಸುತ್ತದೆ.
ಹಾಲು, ಪ್ರೋಟೀನ್ ಒದಗಿಸುವ ಮೂಲವಾಗಿದ್ದು, ಒಂದು ಕಪ್ ಹಾಲಿನಲ್ಲಿ 8 ಗ್ರಾಂ ಪ್ರೋಟೀನ್ ಒದಗಿಸುತ್ತದೆ. ಇದು ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ, ಜೀವಕೋಶಗಳ ರಿಪೇರಿ ಮತ್ತು ಪ್ರತಿರಕ್ಷಣಾ ವ್ಯವಸ್ಥೆಗೆ ಸಹಕಾರಿ. ಹಾಲನ್ನು ಸಂಪೂರ್ಣ ಪ್ರೋಟೀನ್ ಎಂದು ಪರಿಗಣಿಸಲಾಗಿದ್ದು, ಅಗತ್ಯವಾದ ಎಲ್ಲಾ 9 ಅಮೈನೋ ಆಮ್ಲಗಳನ್ನು ಹೊಂದಿದೆ. ಇದು ವಯಸ್ಸಿಗೆ ಸಂಬಂಧಿಸಿದ ಸ್ನಾಯು ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ವ್ಯಾಯಾಮದ ನಂತರ ಸ್ನಾಯುಗಳ ದುರಸ್ಥಿಗೆ ಉತ್ತೇಜನ ನೀಡುತ್ತದೆ.
ಮೂಳೆಯ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಕ್ಯಾಲ್ಷಿಯಂ, ರಂಜಕ, ಮೆಗ್ನೀಷಿಯಂ ಮತ್ತು ಜೀವಸತ್ವ ‘ಡಿ’ ನಂತಹ ವಿವಿಧ ಪೋಷಕಾಂಶಗಳು ಹಾಲಿನಲ್ಲಿವೆ. ಹಾಲು ಹಾಗೂ ಹಾಲಿನ ಉತ್ಪನ್ನಗಳ ಸೇವನೆಯಿಂದ ಅಸ್ಪಿಯೋಪೊರೋಸಿಸ್ ತಡೆಗಟ್ಟಿ, ಮೂಳೆ ಮುರಿತದ ಅಪಾಯವನ್ನು ಕಡಿಮೆ ಮಾಡಬಹುದು. ಆದ್ದರಿಂದ ಬಲವಾದ ಮೂಳೆಗಳಿಗಾಗಿ ಹಾಲು ಅತೀ ಅವಶ್ಯಕ.
ಹಾಲಿನಲ್ಲಿರುವ ವಿಟಮಿನ್ ‘ಡಿ’ ಮೂಳೆಗಳ ಗಟ್ಟಿತನವನ್ನು ಹೆಚ್ಚು ಮಾಡುವುದಲ್ಲದೇ ರೋಗ ನಿರೋಧಕತೆಯನ್ನು ವೃದ್ಧಿಸುತ್ತದೆ ಹಾಗೂ ಸೆರೆಟೋನಿನ್ ಹಾರ್ಮೋನಿನ ಉತ್ಪತ್ತಿಯಲ್ಲಿ ಕೂಡ ಸಹಾಯ ಮಾಡಲಿದ್ದು, ಮಾನಸಿಕ ಸ್ಥಿತಿ ಅತ್ಯುತ್ತಮಗೊಳಿಸಲು ಮತ್ತು ಅತ್ಯುತ್ತಮ ನಿದ್ರೆಗೆ ಸಹಕಾರಿ.
ಹಾಲಿನಲ್ಲಿ ವಿಟಮಿನ್ ‘ಎ’ ಮತ್ತು ವಿಟಮಿನ್ ‘ಬಿ’ ಅಂಶ ಸಿಗುವ ಕಾರಣದಿಂದ ಕಣ್ಣುಗಳ ದೃಷ್ಟಿ ಹೆಚ್ಚಾಗುವುದಲ್ಲದೇ ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಕೂಡ ಹೆಚ್ಚಾಗಲಿದೆ. ಹಾಲಿನಲ್ಲಿ ದೇಹದ ರಕ್ತದ ಒತ್ತಡವನ್ನು ನಿಯಂತ್ರಣಕ್ಕೆ ತರುವ ಪೊಟ್ಯಾಶಿಯಂ ಅಂಶವಿದ್ದು, ಹೃದಯ ರಕ್ತನಾಳದ ಖಾಯಿಲೆಗಳು ಸಹ ವಾಸಿಯಾಗಿ ಆರೋಗ್ಯವಾಗಿರಲು ಸಹಾಯಕ.
ಈ ರೀತಿ ಅಗತ್ಯ ಪೋಷಕಾಂಶಗಳನ್ನು ಹೊಂದಿದ ಹಾಲು ಕೇವಲ ಮಕ್ಕಳಿಗೆ ಮಾತ್ರ ಸೀಮಿತವಾಗದೆ, ಯಾವುದೇ ವಯಸ್ಸಿನಲ್ಲಿ ಹಾಲನ್ನು ಕುಡಿದು ಆರೋಗ್ಯ ವೃದ್ಧಿಸಿಕೊಳ್ಳಬಹುದು. ಪ್ರತಿದಿನ ಪ್ರತಿಯೊಬ್ಬರಿಗೆ 300 ಮಿ.ಲೀ. ಹಾಲಿನ ಅಗತ್ಯತೆ ಇದೆ.
ಹಾಲಿನ ಬಳಕೆ: ಹಾಲನ್ನು ಕೇವಲ ಹಾಲಿನ ರೂಪದಲ್ಲೇ ಉಪಯೋಗಿಸದೆ, ವೈವಿದ್ಯಮಯವಾಗಿ ಬಳಸಬಹುದು. ಹಾಲಿನಲ್ಲಿಯೇ ತಾಜಾ ಹಾಲು, ಪಾಶ್ಚೀಕರಿಸಿದ ಹಾಲು, ಕೆನೆರಹಿತ ಹಾಲು, ಟೋನ್ಡ ಮತ್ತು ಡಬಲ್ ಟೋನ್ಡ ಹಾಲು, ಪ್ರಮಾಣಿಕೃತÀ ಹಾಲು, ಪುರ‍್ರಚಿಸಿದ ಹಾಲು, ಅಲ್ಟಾç ಹೈ ಟೆಂಪರೇಚರ್ ಹಾಲು(UHT), ಬಲವರ್ಧಿತ ಹಾಲು, ಹಾಲಿನ ಪುಡಿ, ಹಾಲಿನ ಕ್ರೀಮ್ ಮತ್ತು ಸುವಾಸಿತ ಹಾಲು ಮುಂತಾದ ವಿಧಗಳಿವೆ. ಹಾಗೆಯೇ ಹಾಲನ್ನು ಹುದುಗುಗೊಳಿಸಿ ಮೊಸರು, ಯೋಗರ್ಟ, ಮಜ್ಜಿಗೆ ಮತ್ತು ಹಾಲಿನ ಪ್ರೋಟೀನ್‌ನಿಂದ ಚೀಸ್, ಪನ್ನಿರ್, ಹಾಲಿನ ಕೊಬ್ಬಿನಿಂದ ಬೆಣ್ಣೆ, ತುಪ್ಪ, ಹಾಲಿನ ವೇ ಪ್ರೋಟೀನ್ ಬಳಸಿದ ಬೇಕರಿ ಉತ್ಪನ್ನಗಳು, ಸಂಸ್ಕರಿಸಿದ ಉತ್ಪನ್ನಗಳಾದ ಐಸ್ ಕ್ರೀಮ್, ಪೇಡಾ, ಕಲಾಕಂದ, ಖೋವ ಹಾಗೂ ವಿವಿಧ ಸುವಾಸಿತ ಬರ್ಫಿ ಹೀಗೆ ಅನೇಕ ಹಾಲಿನ ಪದಾರ್ಥಗಳು ಲಭ್ಯವಿದ್ದು, ದಿನನಿತ್ಯ ವೈವಿಧ್ಯಮಯವಾಗಿ ಬಳಸಬಹುದು.
ಹಾಲು ದಿನನಿತ್ಯದ ಪಾನೀಯಗಳಾದ ಟೀ, ಕಾಫಿ ತಯಾರಿಕೆ, ವೈವಿದ್ಯಮಯ ಖಾದ್ಯ ಮತ್ತು ಸಿಹಿತಿನಿಸುಗಳ ತಯಾರಿಕೆ, ಬೇಕರಿ ಪದಾರ್ಥಗಳ ತಯಾರಿಕೆ ಹಾಗೂ ಸೌಂದರ್ಯವರ್ಧಕ ತಯಾರಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಹಾಲು ಆಧಾರಿತ ಉತ್ಪನ್ನಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದೊಂದು ಜೀವನೋಪಾಯಕ್ಕೆ ದಾರಿದೀಪವಾಗಿದೆ. ಗ್ರಾಮೀಣ ವಲಯದಲ್ಲಿ ಹಾಲಿನ ಉತ್ಪಾದನೆಯೊಂದಿಗೆ, ಹಾಲಿನ ಆಧಾರಿತ ಉದ್ಯೋಗಗಳು ಹೆಚ್ಚಾಗುತ್ತಿದ್ದು, ಆರ್ಥಿಕ ಭದ್ರತೆಗೆ ಅನುಕೂಲವಾಗಿದೆ.
ಆದ್ದರಿಂದ ಹಾಲು ಪೌಷ್ಠಿಕಾಂಶವಿರುವ ಆಹಾರವಾಗಿದ್ದು, ಕೇವಲ ಆರೋಗ್ಯಕ್ಕಾಗಿ ಮಾತ್ರವಲ್ಲದೇ, ಜೀವನೋಪಾಯಕ್ಕೆ ದಾರಿಯಾಗಿದೆ. ದಿನನಿತ್ಯ ತಪ್ಪದೇ ಒಂದು ಲೋಟ ಹಾಲು ಸೇವನೆ ಮಾಡಿ, ಆರೋಗ್ಯ ವೃದ್ಧಿಸಿಕೊಳ್ಳುವುದರೊಂದಿಗೆ ಗ್ರಾಮೀಣ ಜನತೆಯ ಆರ್ಥಿಕ ಅಭಿವೃದ್ಧಿಯಲ್ಲಿ ಕೈಜೋಡಿಸೋಣ.
ಲೇಖನ: ಡಾ. ಲತಾ ಆರ್. ಕುಲಕರ್ಣಿ, ಡಾ. ಸವಿತಾ ಎಸ್. ಮಂಗಾನವರ ಮತ್ತು ಡಾ. ದಿನೇಶ ಎಸ್. ಎಮ್. ಕೃಷಿ ವಿಜ್ಞಾನ ಕೇಂದ್ರ, ರಾಮನಗರ