ಬೆಳಗಾವಿಯ ಸುವರ್ಣಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ನಡೆಯಲಿದ್ದು, ಪ್ರತಿಭಟನೆ ಚುರುಕು ಪಡೆದುಕೊಂಡಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4 ರಿಂದ ಡಿಸೆಂಬರ್ 15 ರವರೆಗೆ ಚಳಿಗಾಲದ ಅಧಿವೇಶನ ನಡೆಯಲಿದೆ.
ಈ ಸಂದರ್ಭದಲ್ಲಿ ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿವೆ.
ಇನ್ನು ಅಧಿವೇಶನದ ಮೊದಲ ದಿನದಂದೇ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ ಎಂದು ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಕೊಡಿಹಳ್ಳಿ ಚಂದ್ರಶೇಖರ್ ಅವರು, ಬೆಳಗಾವಿಯಲ್ಲಿ ಸೋಮವಾರದಂದು ನಡೆಯುವ ಅಧಿವೇಶನದ ಮೊದಲ ದಿನವೇ
ಬೆಳಿಗ್ಗೆ 11 ಗಂಟೆಗೆ ಚೆನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಸಾಗಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದಿದ್ದಾರೆ.
ಈ ವೇಳೆ ರಾಜ್ಯದ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಲಿದ್ದೇವೆ.
ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು ವಾಪಸ್ ಪಡೆದಿದೆಯಾದರೂ, ರಾಜ್ಯ ಸರ್ಕಾರ ಕೃಷಿ ಕಾಯ್ದೆಯನ್ನು ಇದುವರೆಗೂ ವಾಪಸ್ ಪಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
36 ಲಕ್ಷ ಮತದಾರರಿಗೆ ನೋಟಿಸ್ ಜಾರಿ
ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಚುನಾವಣಾ ಆಯೋಗವು ರಾಜ್ಯದ 36 ಲಕ್ಷ ಮತದಾರರಿಗೆ ನೋಟಿಸ್ ಜಾರಿ ಮಾಡುತ್ತಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ನಕಲು ಇಲ್ಲವೇ ಒಬ್ಬ ವ್ಯಕ್ತಿ ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿರುವುದಕ್ಕೆ
ಸಂಬಂಧಿಸಿದಂತೆ 36 ಲಕ್ಷ ಮತದಾರರಿಗೆ ಕರ್ನಾಟಕ ಚುನಾವಣಾ ಆಯೋಗದಿಂದ ಭಾರತೀಯ ಅಂಚೆ ಕಚೇರಿ ಮೂಲಕ ನೋಟಿಸ್ ಜಾರಿ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ.
ಇನ್ನು ಕರ್ನಾಟಕದ ಮತದಾರರ ಯಾವುದೇ ಮಾದರಿಯ ನಕಲು ತೆಗೆದುಹಾಕಲು ಸಿದ್ಧವಿರುವುದಾಗಿ ರಾಜ್ಯ ಚುನಾವಣಾ ಆಯೋಗ ಮಾಧ್ಯಮಗಳಿಗೆ ತಿಳಿಸಿದೆ.
ವಿವಿಧ ಕೋ ಅಪರೇಟಿವ್ ಬ್ಯಾಂಕ್‌ಗಳ ತನಿಖೆ ಸಿಬಿಐಗೆ
ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್, ವಸಿಷ್ಠ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಬ್ಯಾಂಕ್‌ಗಳ ಹಗರಣವನ್ನು
ಸಿಬಿಐ ತನಿಖೆಗೆ ಒಪ್ಪಿಸಲು ಅನುಮೋದನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಸಾವಿರಾರು ಜನ ಠೇವಣಿದಾರರು ತಮ್ಮ ನಿವೃತ್ತಿ ಜೀವನಕ್ಕೆ ಆಧಾರವಾಗಲೆಂದು ಉಳಿತಾಯವನ್ನೆಲ್ಲ ಬ್ಯಾಂಕಿನಲ್ಲಿ ಹೂಡಿಕೆ ಮಾಡಿದ್ದರು.
ಬ್ಯಾಂಕಿನವರ ವಂಚನೆಯಿಂದಾಗಿ ಅವರೆಲ್ಲರೂ ಮುಂದಿನ ತಮ್ಮ ಜೀವನದ ಬಗ್ಗೆ ದಿಕ್ಕು ತೋಚದಂತಾಗಿದ್ದಾರೆ.
ಈ ಹಿಂದೆಯೂ ಈ ಬಗ್ಗೆ ಧ್ವನಿ ಎತ್ತಿದ್ದೆ ಎಂದಿದ್ದಾರೆ.