News

ಫೆಬ್ರವರಿ 22 ರಿಂದ 6ನೇ ತರಗತಿಯಿಂದ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭ-ಸುರೇಶ ಕುಮಾರ

16 February, 2021 8:00 PM IST By:

ರಾಜ್ಯದಲ್ಲಿ ಶಾಲೆಗಳ ಪುನರಾರಂಭಕ್ಕೆ ಮುಹೂರ್ತ ನಿಗದಿಯಾಗಿದ್ದು, ಬೆಂಗಳೂರು ನಗರ ಹಾಗೂ ಕೇರಳ ಗಡಿಭಾಗ ಹೊರತುಪಡಿಸಿ ರಾಜ್ಯದ ಉಳಿದ ಎಲ್ಲೆಡೆ ಇದೇ ಫೆ. 22 ಸೋಮವಾರದಿಂದ 6 ರಿಂದ 8 ರವರೆಗಿನ ತರಗತಿಗಳು ಪುನರಾರಂಭವಾಗಲಿವೆ.

ರಾಜ್ಯದಲ್ಲಿ ಇದೇ 22 ರಿಂದಲ 6ನೇ ತರಗತಿಯಿಂದಲೇ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಆರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ತಿಳಿಸಿದರು.

ರಾಜ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ವಿಧಾನಸೌಧದಲ್ಲಿಂದು ನಡೆದ ರಾಜ್ಯದ ಕೋವಿಡ್ ಸಲಹಾ ಸಮಿತಿ ಸದಸ್ಯರು, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಬೆಂಗಳೂರು ನಗರ ಮತ್ತು ಕೇರಳದ ಗಡಿಭಾಗದಲ್ಲಿ 8ನೇ ತರಗತಿ ಮಾತ್ರ ಆರಂಭವಾಗಲಿದ್ದು, ಇಲ್ಲಿ 6 ಮತ್ತು 7ನೇ ತರಗತಿಗಳು ಪುನರಾರಂಭವಾಗುತ್ತಿಲ್ಲ. 1 ರಿಂದ 5ನೇ ತರಗತಿಗೆ ವಿದ್ಯಾಗಮ ಆರಂಭಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಕೇರಳ ಭಾಗದಿಂದ ಬರುವ ಪ್ರತಿಯೊಬ್ಬ ವಿದ್ಯಾರ್ಥಿ, ಶಿಕ್ಷಕ ಕೋವಿಡ್ ಪರೀಕ್ಷೆಗೆ ಒಳಪಡಬೇಕು. ನೆಗೆಟಿವ್ ವರದಿ ಇದ್ದರೆ ಮಾತ್ರ ತರಗತಿಗೆ ಹಾಜರಾಗಲು ಅನುಮತಿ ನೀಡಲಾಗುವುದು. ಆಯಾ ಶಾಲೆಗಳಲ್ಲಿ ಇರುವ ಕೊಠಡಿಗಳ ಲಭ್ಯತೆ, ವಿದ್ಯಾರ್ಥಿಗಳ ಸಂಖ್ಯೆಯನ್ನು ಅವಲಂಬಿಸಿ ಪಾಳಿಯಲ್ಲಿ ತರಗತಿ ನಡೆಸಲು ಅವಕಾಶವಿದೆ. ಹಾಜರಾತಿ ಕಡ್ಡಾವಿಲ್ಲ ಎಂದು ತಿಳಿಸಿದರು..
1 ರಿಂದ 5ನೇ ತರಗತಿವರೆಗೆ ಸೋಮವಾರದಿಂದಲೇ ವಿದ್ಯಾಗಮ ಆರಂಭವಾಗಲಿದ್ದು, ಈ ವಿದ್ಯಾಗಮದ ಯಶಸ್ಸನ್ನು ನೋಡಿಕೊಂಡು 1 ರಿಂದ 5ನೇ ತರಗತಿಯವರೆಗೆ ಪೂರ್ಣಪ್ರಮಾಣದಲ್ಲಿ ಶಾಲೆ ಆರಂಭಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಸದ್ಯ 1 ರಿಂದ 5ನೇ ತರಗತಿಗಳನ್ನು ಆರಂಭಿಸುವ ತೀರ್ಮಾನ ಆಗಿಲ್ಲ ಎಂದರು.

ಶಾಲೆಗಳ ಪುನರಾರಂಭದ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳು ಪುನರಾರಂಭವಾಗಲಿವೆ. ಇದಕ್ಕಾಗಿ ಸಿದ್ಧತೆ ನಡೆದಿದೆ ಎಂದ ಅವರು, ಸಾರಿಗೆ ಇಲಾಖೆಗೂ ವಿದ್ಯಾರ್ಥಿಗಳಿಗೆ ಹೆಚ್ಚು ಬಸ್‌ಗಳನ್ನು ಓಡಿಸುವಂತೆ ಕೋರಲಾಗಿದೆ ಎಂದು ಅವರು ಹೇಳಿದರು.