News

ಸೆಪ್ಟೆಂಬರ್ 21 ರಿಂದ ಶಾಲೆ ಆರಂಭ, ತರಗತಿಗಳಲ್ಲ: ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸ್ಪಷ್ಟನೆ

18 September, 2020 5:59 PM IST By:

ಪ್ರಸಕ್ತ ವರ್ಷದ ಶಾಲೆಗಳು ಸೆಪ್ಟೆಂಬರ್ 21 ರಿಂದ ಆರಂಭವಾಗಲಿದ್ದು, ಶಿಕ್ಷಕರು ಮಾತ್ರವೇ ಶಾಲೆಗೆ ಬರಬೇಕು. ಆದರೆ, ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭವಾಗುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ

ಅವರು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೂನ್ನಲ್ಲೇ ಮಕ್ಕಳ ದಾಖಲಾತಿ ಆಗಬೇಕಿತ್ತು. ಕೊರೊನಾ ಕಾರಣಕ್ಕೆ ತಡವಾಗಿದೆ. ಸೆ.21ರಿಂದ 30ರೊಳಗೆ 1ರಿಂದ 10ನೇ ತರಗತಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಮುಗಿಯಬೇಕು. ದಾಖಲಾತಿ ಎಂಬುದು ಆ ವರ್ಷದಲ್ಲಿ ನಿಗದಿತ ಅವಧಿಯಲ್ಲೇ ಮುಗಿಯಬೇಕು ಎಂದರು.

ಖಾಸಗಿ ಶಾಲೆಗಳು ಸರ್ಕಾರದ ಆದೇಶದಂತೆ ಕೇವಲ ಒಂದು ಟರ್ಮ್ ಫೀಸ್ ಮಾತ್ರ ತೆಗೆದುಕೊಳ್ಳಬೇಕು. ಕಳೆದ ವರ್ಷಕ್ಕಿಂತ ಈ ಬಾರಿ ಫೀಸ್ ಜಾಸ್ತಿ ಮಾಡಬಾರದು. ಸಾಧ್ಯವಾದರೆ ಶುಲ್ಕವನ್ನು ಇನ್ನೂ ಕಡಿಮೆ ಮಾಡಬೇಕು. ಯಾವ ಶಾಲೆಯಲ್ಲಾದರೂ ಹೆಚ್ಚಿನ ಫೀಸ್ ತೆಗೆದುಕೊಂಡರೆ ಪೋಷಕರು ಸ್ಥಳೀಯ ಬಿಇಒ ಅಥವಾ ಡಿಡಿಪಿಐಗೆ ದೂರು ಕೊಡಬೇಕು. ಈ ಸೂಚನೆಯನ್ನು ಉಲ್ಲಂಘಿಸಿರುವುದು ಕಂಡುಬಂದರೆ ಶಾಲೆಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.