News

ಡಿಸೆಂಬರ್ ಅಂತ್ಯದವರೆಗೂ ಶಾಲಾ, ಪಿಯು ಕಾಲೇಜುಗಳನ್ನು ತೆರೆಯುವುದಿಲ್ಲ

23 November, 2020 5:29 PM IST By:

ರಾಜ್ಯದಲ್ಲಿ ಆವರಿಸಿರುವ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಡಿಸೆಂಬರ್ ತಿಂಗಳ ಅಂತ್ಯದವರೆಗೆ ಶಾಲೆ ಹಾಗೂ ಪಿಯು ತರಗತಿ ತೆರೆಯದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಸಚಿವ ಸುರೇಶಕುಮಾರ ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಕೋವಿಡ್ ಕಾರಣದಿಂದ ಎಂಟು ತಿಂಗಳಿಂದ ಮುಚ್ಚಿರುವ ಶಾಲೆಗಳನ್ನು ಮತ್ತೆ ಆರಂಬಿಸುವ ಕುರಿತು ಶಿಕ್ಷ ಇಲಾಖೆಯ ಅಧಿಕಾರಿಗಳೂ ಸೇರಿದಂತೆ ದ ಪ್ರಾಥಮಿಕ, ಆರೋಗ್ಯ ಇಲಾಖೆ ಅಧಿಕಾರಿಗಳ ಮುಖ್ಯಸ್ಥರೊಂದಿಗೆ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.

ಶಾಲೆ ಆರಂಭಿಸುವ ಕುರಿತು ಸಾಧಕ – ಬಾಧಕಗಳ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡೆಸಿ, ತಜ್ಞರ ಸಮಿತಿ ನೀಡಿರುವ ವರದಿ ಆಧರಿಸಿ ಡಿಸೆಂಬರ್ ಅಂತ್ಯದವರೆಗೂ ಶಾಲಾ – ಕಾಲೇಜು ಆರಂಭಿಸದಿರಲು ನಿರ್ಧಾರ ಕೈಗೊಳ್ಳಲಾಗಿದೆ .

ಡಾ. ಸುದರ್ಶನ್ ನೇತೃತ್ವದ ತಜ್ಞರ ಸಮಿತಿ ಡಿಸಂಬರ್ ಮೂರನೇ ವಾರದಲ್ಲಿ ಮತ್ತೆ ಸಭೆ ಸೇರಿ ಪರಿಸ್ಥಿತಿಯನ್ನು ಅವಲೋಕನ ನಡೆಸಲಿದೆ. ಬಳಿಕ ಶಾಳೆ ಆರಂಭಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಗೆ ಪರೀಕ್ಷೆ ನಡೆಸುವ ಸಂಬಂಧ ಶೀಘ್ರದಲ್ಲೇ ದಿನಾಂಕವನ್ನು ಪ್ರಕಟ ಮಾಡಲು ನಿರ್ಧರಿಸಲಾಗಿದೆ. ಬೋರ್ಡ್ ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆನ್ ಲೈನ್ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮುಂದುವರೆಯಲಿದೆ ಎಂದರು.

ಡಿಸೆಂಬರ್ ನಲ್ಲಿ ಶಾಲಾ – ಕಾಲೇಜುಗಳನ್ನು ಆರಂಭ ಮಾಡಿದರೆ, ಚಳಿಗಾಲದ ಸಮಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆಗಳಿವೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಬಹುದು ಎಂಬ ಕೋವಿಡ್ – ೧೯ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸಿನ ಅನ್ವಯ ಸರ್ಕಾರ ಈ ಕ್ರಮ ಕೈಗೊಂಡಿದೆ.
ಈ ವರ್ಷ 1 ರಿಂದ 8ನೇ ತರಗತಿಯವರೆಗಿನ ಮಕ್ಕಳಿಗೆ ಈ ವರ್ಷ ಶಾಲೆ ಆರಂಭಿಸುವ ಯೋಚನೆ ಇಲಾಖೆಗೆ ಇಲ್ಲ ಎಂದು ಮಾಹಿತಿ ನೀಡಿದರು. ರಾಜ್ಯದಲ್ಲಿ ಬಹಳ ಕಡಿಮೆ ಕೋವಿಡ್ ಪರಿಣಾಮ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯುವ ಅಭಿಪ್ರಾಯಕ್ಕೂ ತಜ್ಞರು ಅನುಮತಿ ನೀಡಿಲ್ಲ. ಡಿಸೆಂಬರ್ ಮೂರನೇ ವಾರದಲ್ಲಿ ಸಭೆ ಸೇರಿ ಅವಲೋಕನ ತೆಗೆದುಕೊಳ್ಳೋಣ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ

ಮಕ್ಕಳ ಹಿತಕ್ಕಾಗಿ ನಿರ್ಧಾರ ಸಧ್ಯಕ್ಕೆ ಡಿಸೆಂಬರ್ ತಿಂಗಳಿನಲ್ಲಿ ಯಾವುದೇ ಶಾಲೆ-ಪದವಿಪೂರ್ವ ಕಾಲೇಜು ತೆರೆಯುವುದಿಲ್ಲ. ಶಾಲೆಗಳು ಮುಚ್ಚಿದ್ದರಿಂದ ಗ್ರಾಮೀಣ ಭಾಗದಲ್ಲಿ ಬಾಲಕಾರ್ಮಿಕ ಪದ್ದತಿ ಹೆಚ್ಚಿದೆ ಎಂಬ ಮಾಹಿತಿಯೂ ಬಂದಿದೆ. ಆದರೂ ಮಕ್ಕಳ ಹಿತ ಹಾಗೂ ಯೋಗಕ್ಷೇಮ ಗಮನದಲ್ಲಿಟ್ಟುಕೊಂಡು ಶಾಲೆ ಆರಂಭಿಸದೆ ಇರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.