ಕೃಷಿ ಜಾಗರಣ ಅಗ್ರಿನ್ಯೂಸ್‌ಗೆ ಸ್ವಾಗತ. ಈ ವಾರದ ಪ್ರಮುಖ ಸುದ್ದಿಗಳು ಹೀಗಿವೆ.
ಕೇರಳದ ಕೊಟ್ಟಾಯಂನಲ್ಲಿ ಹಕ್ಕಿಜ್ವರ: ರಾಜ್ಯದ ಗಡಿ ಜಿಲ್ಲೆಯಲ್ಲಿ ಆತಂಕ!
ಮಹಿಳೆಯರಿಗೆ ಸಿಹಿಸುದ್ದಿ: ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ
ಪ್ರತಿ ಗ್ರಾಮದಲ್ಲಿ ಸ್ತ್ರೀ ಶಕ್ತಿ ಸಂಘಕ್ಕೆ 5ಲಕ್ಷ ಆರ್ಥಿಕ ನೆರವು
ಕೃಷಿ ಜಾಗರಣದಿಂದ 12 ಭಾಷೆಗಳಲ್ಲಿ ಸಿರಿಧಾನ್ಯದ ವಿಶೇಷ ಮಾಸಪತ್ರಿಕೆ ಬಿಡುಗಡೆ
2030ರ ವೇಳೆಗೆ ಶ್ರೀಲಂಕಾದ ಸೇನಾ ಸಾಮರ್ಥ್ಯ ಅರ್ಧಕ್ಕೆ ಇಳಿಕೆ
ಜನವರಿ 31ರಿಂದ ಕೇಂದ್ರ ಬಜೆಟ್ ಅಧಿವೇಶನ: ಪ್ರಹ್ಲಾದ ಜೋಶಿ
Leopard| ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಚಿರತೆ ಪ್ರತ್ಯಕ್ಷ!
ವರ್ಷದವರೂ ಇನ್ಮುಂದೆ ಮದ್ಯ ಖರೀದಿಸಬಹುದು!
*ಲಕ್ಷ ಜನರಿಗೆ ಸ್ವಯಂ ಉದ್ಯೋಗ ನೀಡಲು ಯೋಜನೆ
*ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ
*ರಾಜ್ಯದ 25 ತಾಲ್ಲೂಕುಗಳಲ್ಲಿ ಮಿನಿಟೆಕ್ಸ್ ಪಾರ್ಕ್
*ಬೆಳೆ ರಕ್ಷಿಸಲು ನಾಯಿಗೆ ಹುಲಿ ಬಣ್ಣ: ಬೆಚ್ಚಿಬಿದ್ದ ಜನ
*ಮಡಿಕೇರಿಯಲ್ಲಿ ಕಾರ್ಯಾಚರಣೆ ವೇಳೆ ಆನೆ ಸ್ಥಳದಲ್ಲೇ ಸಾವು
*ಚಿಕ್ಕಬಳ್ಳಾಪುರದಲ್ಲಿ ಬೆಂಬಲ ಬೆಲೆಯಡಿ ರಾಗಿ ಖರೀದಿ
*ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ನಾಫೆಡ್ ಕೇಂದ್ರ
-------------------
ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಬೆನ್ನಲ್ಲೇ ರಾಜ್ಯದ ಗಡಿ ಜಿಲ್ಲೆಗಳಲ್ಲೂ ಹಕ್ಕಿಜ್ವರದ ಆತಂಕದ ವಾತಾವರಣ ಸೃಷ್ಟಿ ಆಗಿದೆ. ಚಾಮರಾಜನಗರದ ತಾಲ್ಲೂಕಿನ ಗಡಿಭಾಗದ ಕೆಲವೆಡೆ ಸಾಕು ಕೋಳಿಗಳು ಮೃತಪಡುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಕಾಡಂಚಿನ ಗ್ರಾಮ ಮೇಲುಕಾಮನಹಳ್ಳಿ, ಗಿರಿಜನ ಕಾಲೊನಿ, ಸವಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಆರೋಗ್ಯವಂತ ಕೋಳಿಗಳು ಮೃತಪಡುತ್ತಿವೆ. ಹತ್ತು ದಿನಗಳಿಂದ ಕೋಳಿಗಳು ಅಲ್ಲಲ್ಲಿ ಸಾಯುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಈಚೆಗೆ ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ನಂತರ ಕೇರಳದಿಂದ ರಾಜ್ಯವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 766ರ ಚೆಕ್‌ಪೋಸ್ಟ್‌ನಲ್ಲಿ ಪಶುಪಾಲನಾ ಇಲಾಖೆ ಕಟ್ಟೆಚ್ಚರ ವಹಿಸಿದೆ. ಗೂಡ್ಸ್ ವಾಹನಗಳಿಗೆ ಸೋಂಕು ನಿವಾರಕ ಸಿಂಪಡಿಸಲಾಗುತ್ತಿದೆ. ಆದರೆ, ರಾಷ್ಟ್ರೀಯ 212ನಲ್ಲಿ ತಮಿಳುನಾಡಿನ ಕೆಕ್ಕನಹಳ್ಳ ಚೆಕ್‌ಪೋಸ್ಟ್ ಕಡೆಯಿಂದ ಬರುವ ಕೇರಳದ ವಾಹನಗಳಿಗೆ ತಪಾಸಣೆ ನಡೆಯದೆ ಇರುವುದು ಲೋಪಕ್ಕೆ ಕಾರಣವಾಗಿದೆ. ಮೇಲುಕಾಮನಹಳ್ಳಿ ಗ್ರಾಮಸ್ಥರು ಮೃತಪಟ್ಟ ಕೋಳಿಯೊಂದನ್ನು ಗುಂಡ್ಲುಪೇಟೆಯ ಪಶುವೈದ್ಯಾಧಿಕಾರಿಗಳ ಬಳಿಗೆ ಕೊಂಡು ಹೋಗಿದ್ದಾರೆ. ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್ ಮರಣೋತ್ತರ ಪರೀಕ್ಷೆ ನಡೆಸಿ ಅಂಗಾಂಗಗಳನ್ನು ಮೈಸೂರಿನ ಪ್ರಯೋಗಾಲಕ್ಕೆ ಕಳುಹಿಸಿದ್ದಾರೆ.
-------------------
Self-Employment| 5 ಲಕ್ಷ ಜನರಿಗೆ ಸ್ವಯಂ ಉದ್ಯೋಗ ನೀಡಲು ಯೋಜನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
-------------------
ದೇಶದ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಸರ್ಕಾರ “ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆ”ಯಡಿ ಉಚಿತ ಹೊಲಿಗೆ ಯಂತ್ರವನ್ನು ನೀಡುತ್ತಿದೆ. ದೇಶದ ಮಹಿಳೆಯರು ಸಬಲರಾಗಬೇಕೆಂಬುದು ಸರ್ಕಾರದ ಪ್ರಯತ್ನವಾಗಿದೆ. ಈ ಯೋಜನೆಯಡಿ ದೇಶದ ಮಹಿಳೆಯರಿಗೆ ಸರ್ಕಾರ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡುತ್ತಿದೆ. ಪಿಎಂ ಉಚಿತ ಹೊಲಿಗೆ ಯಂತ್ರ ಯೋಜನೆ ಪುಸ್ತುತ ದೇಶದ ಕೆಲವೇ ರಾಜ್ಯಗಳಲ್ಲಿ ಚಾಲನೆಯಲ್ಲಿದೆ. ಈ ರಾಜ್ಯಗಳಲ್ಲಿ ಕರ್ನಾಟಕ, ಹರಿಯಾಣ, ಗುಜರಾತ್, ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡ್ ಸೇರಿವೆ. ಈ ರಾಜ್ಯಗಳ ಮಹಿಳೆಯರು ಈ ಯೋಜನೆಯ ಲಾಭ ಪಡೆಯಬಹುದು.
-------------------
ಜನಕಲ್ಯಾಣ ಕಾರ್ಯಕ್ರಮಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ದುಡಿಯುವ ವರ್ಗಕ್ಕೆ ಹೆಚ್ವಿನ ಅನುಕೂಲ ಮಾಡುವ ಚಿಂತನೆ ಮಾಡಲಾಗುತ್ತಿದೆ. ರೈತರು, ಕಾರ್ಮಿಕರು, ಮಹಿಳೆಯರು ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಜನಾಂಗದವರ ಶ್ರೇಯೋಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಯುವಕರಿಗೆ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಒಂದು ಲಕ್ಷ ಕಾರ್ಯಕ್ರಮ ಪರಿಚಯಿಸಲಾಗುತ್ತಿದೆ. ಅಲ್ಲದೇ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಇದೇ ತಿಂಗಳು ಪ್ರಾರಂಭ ಮಾಡಲಾಗುತ್ತಿದೆ. ಪ್ರತಿ ಗ್ರಾಮದಲ್ಲಿ ಎರಡು ಸ್ತ್ರೀ ಶಕ್ತಿ ಸಂಘಕ್ಕೆ 5 ಲಕ್ಷ ರೂಪಾಯಿವರೆಗೆ ಸಹಾಯಧನ ನೀಡಲಾಗುವುದು ಎಂದಿದ್ದಾರೆ.
-------------------
2023ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ಎಂದು ಘೋಷಿಸಲಾಗಿದೆ. ಕೃಷಿ ಜಾಗರಣವು 2023ರ ಜನವರಿಯ ಮಾಸಪತ್ರಿಕೆಯನ್ನು ವಿಶೇಷವಾಗಿ ಸಿರಿಧಾನ್ಯದ ಜಾಗೃತಿ ಹಾಗೂ ಮಾಹಿತಿಗೆ ಮೀಸಲಿರಿಸಿದ್ದು, 12 ಭಾಷೆಗಳಲ್ಲಿ ಸಿರಿಧಾನ್ಯ ಮಾಸ ಪತ್ರಿಕೆಯ ವಿಶೇಷ ಆವೃತ್ತಿಯನ್ನು ಹೊರತಂದಿದೆ. ಕೃಷಿ ಜಾಗರಣ ಹೊರ ತಂದಿರುವ ಸಿರಿಧಾನ್ಯ ಮಾಸಪತ್ರಿಕೆಯನ್ನು ಗುರುವಾರ ಕೇಂದ್ರ ಮೀನುಗಾರಿಕೆ ಮತ್ತು ಪಶುಸಂಗೋಪನೆ ಸಚಿವ ಪರುಶೋತ್ತಮ್ ರುಪಾಲಾ ಅವರು ನವದೆಹಲಿಯ ಕೃಷಿ ಜಾಗರಣ ಪ್ರಧಾನ ಕಚೇರಿಯಲ್ಲಿ ವರ್ಚ್ಯೂಲ್ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಿರಿಧಾನ್ಯದ ಜಾಗೃತಿ ಹಾಗೂ ಮಾಹಿತಿಗೆ ಕೃಷಿ ಜಾಗರಣ ಆದ್ಯತೆ ನೀಡುತ್ತಿರುವುದು ವಿಶೇಷವಾಗಿದೆ. ಕೃಷಿ ಕ್ಷೇತ್ರದಲ್ಲಿ ಕೃಷಿ ಜಾಗರಣದ ಪ್ರಯತ್ನ ಶ್ಲಾಘಿನೀಯ ಎಂದರು. ಕೃಷಿ ಜಾಗರಣ ಮಹತ್ವದ ಹೆಜ್ಜೆ ಇರಿಸಿದ್ದು, ರೈತರನ್ನು ಫಾರ್ಮರ್ ದಿ ಜರ್ನಲಿಸ್ಟ್ ಆಗಿ ಪರಿವರ್ತಿಸುವ ಯೋಜನೆಯಡಿ 900 ರೈತರಿಗೆ ತರಬೇತಿ ನೀಡಿರುವುದು ನಿಜಕ್ಕೂ ಅಭಿನಂದನೀಯ ಎಂದರು.
-------------------
ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಶ್ರೀಲಂಕಾ 2030ರ ವೇಳೆಗೆ ತನ್ನ ಸೇನಾ ಸಾಮರ್ಥ್ಯವನ್ನು ಈಗ ಇರುವುದಕ್ಕಿಂತ ಅರ್ಧಕ್ಕೆ ಇಳಿಸುವುದಾಗಿ ತಿಳಿಸಿದೆ. 2023ರ ಬಜೆಟ್‌ನಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕಿಂತ ಹೆಚ್ಚಿನ ಅನುದಾನವನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಿರಿಸಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದೀಗ ಶ್ರೀಲಂಕಾದ ಸೇನಾ ಸಾಮರ್ಥ್ಯ 2 ಲಕ್ಷಕ್ಕೂ ಹೆಚ್ಚಾಗಿದ್ದು, ಇದನ್ನು ಮುಂದಿನ ವರ್ಷದ ವೇಳೆಗೆ 1.35 ಲಕ್ಷಕ್ಕೆ ಮತ್ತು 2030ರ ವೇಳೆ 1 ಲಕ್ಷಕ್ಕೆ ತಗ್ಗಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಇನ್ನು ಶ್ರೀಲಂಕಾ 2023ರ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ 539 ಬಿಲಿಯನ್ ರೂಪಾಯಿ ಮೀಸಲಿಟ್ಟಿದ್ದರೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ 300 ಬಿಲಿಯನ್ ರೂಪಾಯಿ ಅನುದಾನ ಮೀಸಲಿರಿಸಿದೆ.
-------------------
ಮಡಿಕೇರಿಯಲ್ಲಿ ಕಾರ್ಯಾಚರಣೆ ವೇಳೆ ಆನೆ ಸ್ಥಳದಲ್ಲೇ ಸಾವು
-------------------
ಸಂಸತ್ತಿನ ಬಜೆಟ್ ಅಧಿವೇಶನ ಈ ಬಾರಿ ಜನವರಿ 31ರಿಂದ ಆರಂಭವಾಗಲಿದೆ. ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಇನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಬಜೆಟ್ ಮಂಡಿಸಲಿದ್ದಾರೆ. ಏಪ್ರಿಲ್ 6ರ ವರೆಗೆ ಅಧಿವೇಶನ ನಡೆಯಲಿದ್ದು, ಅಧಿವೇಶನದ ಮೊದಲ ಭಾಗವು ಫೆಬ್ರುವರಿ 14ಕ್ಕೆ ಅಂತ್ಯಗೊಳ್ಳಲಿದೆ. ಮಾರ್ಚ್ 12ಕ್ಕೆ ಎರಡೇ ಭಾಗದ ಅಧಿವೇಶನವು ಪ್ರಾರಂಭವಾಗಲಿದೆ ಎಂದಿದ್ದಾರೆ.
-------------------
ಮುಂದಿನ ದಿನಗಳಲ್ಲಿ 18 ವರ್ಷದವರೂ ಸಹ ಮದ್ಯ ಖರೀದಿ ಮಾಡಬಹುದು. ಹೌದು, ಈಗ ಇರುವ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ನಿರ್ಬಂಧಕ್ಕೆ ಸರ್ಕಾರ ತಿದ್ದುಪಡಿ ತರುತ್ತಿದೆ. ಮದ್ಯ ಖರೀದಿ ವಯಸ್ಸಿನ ಮಿತಿಯನ್ನು 18 ವರ್ಷಗಳಿಗೆ ಇಳಿಸುವ ನಿಟ್ಟಿನಲ್ಲಿ ಕರ್ನಾಟಕ ಅಬಕಾರಿ ಪರವಾನಿಗೆ ನಿಯಮಕ್ಕೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ನಿಯಮ ಈಗ ಜಾರಿಯಲಿದೆ. ಅದನ್ನು ಬದಲಿಸಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಹೊಸದಾಗಿ ಪ್ರಸ್ತಾವನೆಯನ್ನು ಸೇರಿಸಲಾಗಿದೆ. ಅಬಕಾರಿ ನಿಯಮಗಳಿಗೆ ತಿದ್ದುಪಡಿ ತರಲು ಇಲಾಖೆ ಸಿದ್ಧಪಡಿಸಿರುವ ಕರಡು ಪ್ರತಿಯನ್ನು ಈಚೆಗೆ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಇನ್ನು ರಾಜ್ಯದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು 5 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ, ಇನ್ನುಳಿದ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳ ಅಂಚಿನಿಂದ 500 ಮೀಟರ್‌ವರೆಗಿನ ಪ್ರದೇಶದಲ್ಲಿ ಹೊಸ ಮದ್ಯದಂಗಡಿ ತೆರೆಯುವುದನ್ನು ನಿರ್ಬಂಧಿಸಿರುವುದನ್ನು ಅಬಕಾರಿ ನಿಯಮಗಳ ವ್ಯಾಪ್ತಿಗೆ ತರಲಾಗುತ್ತಿದೆ. 20 ಸಾವಿರ ಅಥವಾ ಅದಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೆದ್ದಾರಿಯ ಅಂಚಿನಿಂದ 220 ಮೀಟರ್ ನಂತರದಲ್ಲಿ ಮದ್ಯದಂಗಡಿಗಳಿಗೆ ಪರವಾನಿಗೆ ಪಡೆಯಲು ಅರ್ಹವಾಗಿದೆ.
-------------------
ರಾಜ್ಯದ 5 ಲಕ್ಷ ಜನರಿಗೆ ಸ್ವಯಂ ಉದ್ಯೋಗ ನೀಡುವ ಸ್ವಾಮಿ ವಿವೇಕಾನಂದ ಯೋಜನೆಯನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ದೇಶದಲ್ಲಿಯೇ ಮೊಟ್ಟ ಮೊದಲು ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದ ಕೀರ್ತಿ ನಮ್ಮ ರಾಜ್ಯದ್ದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಮುಂದಿನ ಓಲಂಪಿಕ್ ಕ್ರೀಡಾಕೂಟಕ್ಕಾಗಿ ರಾಜ್ಯವು ಸಿದ್ಧತೆ ಮಾಡಿಕೊಳ್ಳುತ್ತಿದೆ. 75 ಜನ ಕ್ರೀಡಾಪಟುಗಳನ್ನು ಅಣಿಗೊಳಿಸಲು ಪ್ರತಿಭಾವಂತರನ್ನು ದತ್ತು ಪಡೆದು ತರಬೇತಿ ನೀಡಲಾಗುವುದು ಎಂದಿದ್ದಾರೆ. ಯುವಜನರನ್ನು ಸ್ವಯಂ ಉದ್ಯೋಗಿಗಳನ್ನಾಗಿಸಲು ರಾಜ್ಯ ಸರ್ಕಾರವು ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಯೋಜನೆ ಜಾರಿಗೊಳಿಸಲಿದೆ. ಸ್ವಾಮಿ ವಿವೇಕಾನಂದರು ಯುವಕರಿಗೆ ಪ್ರೇರಣೆಕೊಟ್ಟ ಧೀಮಂತ ಯೋಗಿಯಾಗಿದ್ದಾರೆ ಎಂದು ಹೇಳಿದ್ದಾರೆ.
-------------------
ದೆಹಲಿಯಲ್ಲಿ ನಡೆಯುವ ಗಣರೋಜ್ಯೋತ್ಸವದ ಪರೇಡ್‌ಗೆ ಕೊನೆಗೂ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶ ನೀಡಲಾಗಿದೆ. ಈಚೆಗೆ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಪದ್ಮಶ್ರಿ ಪ್ರಶಸ್ತಿ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ, ಸಾಲುಮರದ ತಿಮ್ಮಕ್ಕ ಮತ್ತು ತುಳಸಿಗೌಡ ಹಾಲಕ್ಕಿ ಅವರ ಸಾಧನೆಗಳನ್ನು ಬಿಂಬಿಸುವ ಕರ್ನಾಟಕದ ನಾರಿ ಶಕ್ತಿ ವಿಷಯದ ಸ್ತಬ್ಧ ಚಿತ್ರವನ್ನು ಅಂತಿಮ ಹಂತದಲ್ಲಿ ಕೇಂದ್ರ ಸರ್ಕಾರ ಕೈ ಬಿಟ್ಟಿತ್ತು. ಈ ನಡೆಗೆ ರಾಜ್ಯದ ಜನತೆ ಹಾಗೂ ವಿರೋಧ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ನಡೆದ ನಾಲ್ಕು ಸಭೆಗಳಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಸಂಬಂಧ ಒಪ್ಪಿಗೆ ಸೂಚಿಸಿದ ಕೇಂದ್ರ ಸರ್ಕಾರ, ಐದನೇ ಸಭೆಯಲ್ಲಿ ಕರ್ನಾಟಕವನ್ನು ಕೈಬಿಟ್ಟಿತ್ತು. ಇತರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ ಕರ್ನಾಟಕವನ್ನು ಕೈ ಬಿಡಲಾಗಿದೆ ಎಂದು ಹೇಳಲಾಗಿತ್ತು. ಕರ್ನಾಟಕದ ಸ್ತಬ್ಧಚಿತ್ರ ಕೈಬಿಟ್ಟ ನಡೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿತ್ತು. ಟೀಕೆಯ ನಂತರ ಇದೀಗ ಕೊನೆ ಕ್ಷಣ ಕ್ಷಣದಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶ ನೀಡಲಾಗಿದೆ.
-------------------
ಹುಬ್ಬಳ್ಳಿಗೆ ಮೋದಿ: ಬ್ಯಾರಿಕೇಡ್ ಹಾರಿ ಹೂ ಮಾಲೆ ಹಾಕಲು ಬಂದ ಬಾಲಕ
-------------------
ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ರಾಜ್ಯದ 25 ತಾಲ್ಲೂಕುಗಳಲ್ಲಿ ಮಿನಿ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ ಮಾಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ದೇಶನ ನೀಡಿದ್ದಾರೆ. ವಿದ್ಯುತ್ ಮಗ್ಗ ನೇಕಾರರು ಮತ್ತು ಕಾರ್ಮಿಕರಿಗೆ ಡಿಬಿಟಿ ಮೂಲಕ ನೇಕಾರ್ ಸಮ್ಮಾನ್ ಯೋಜನೆಯ ಸಹಾಯಧನ ವರ್ಗಾವಣೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಹತ್ತಿ ಸಂಸ್ಕರಣೆಯಿಂದ ವಸ್ತ್ರ, ಸಿದ್ಧ ಉಡುಪು ತಯಾರಿಕೆ ಮತ್ತಿತರ ಹಂತಗಳನ್ನು ಒಳಗೊಂಡ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸುವ ಮೂಲಕ ನೇಕಾರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಲಾಗಿದೆ ಎಂದರು. ಅಲ್ಲದೇ, ಡಿಜಿಟಲ್ ವೇದಿಕೆಯ ಮೂಲಕ ಮಾರುಕಟ್ಟೆ ವಿಸ್ತರಿಸಬೇಕು. ಉತ್ಪನ್ನಗಳ ಗುಣಮಟ್ಟ ವೃದ್ಧಿಯಾದರೆ ರಫ್ತಿಗೂ ಅನುಕೂಲವಾಗುತ್ತದೆ. ಇದಕ್ಕೆ ಕೈಮಗ್ಗ ಮತ್ತು ಜವಳಿ ಇಲಾಖೆ ಸಹಕಾರ ನೀಡಲಿದೆ ಎಂದು ತಿಳಿಸಿದರು.
-------------------
12.ಕೋತಿಗಳ ಉಪಟಳದಿಂದ ಬೆಳೆಗಳನ್ನು ರಕ್ಷಿಸಲು ಚಾಮರಾಜನಗರದ ಅಜ್ಜೀಪುರದ ರೈತ ಮಂಜು ಎಂಬವರು ಸಾಕು ನಾಯಿಗೆ ಹುಲಿಯ ಬಣ್ಣ ಬಳಿದು ಕೋತಿಗಳ ಹಾವಳಿಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಅವರು ಅನುಸರಿಸಿದ ಹುಲಿಯ ವೇಷದ ನಾಯಿಯ ಚಿತ್ರ ಹಾಗೂ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಾಲ್ಲೂಕಿನ ಅಜ್ಜೀಪುರದ ಹೊರವಲಯದಲ್ಲಿರುವ ತೋಟಗಳಿಗೆ ಕೋತಿಗಳ ಉಪಟಳ ವಿಪರೀತವಾಗಿದ್ದು, ಅವುಗಳನ್ನು ಕಾಯುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು. ಕೋತಿಗಳನ್ನು ಓಡಿಸಲು ಮಂಜು ಕಂಡುಕೊಂಡ ಉಪಾಯ ಫಲ ನೀಡುತ್ತಿದೆ. ಜಮೀನಿನಲ್ಲಿ ಬೆಳೆದಿದ್ದ ಬೆಳೆ, ತೆಂಗಿನ ಕಾಯಿಗಳನ್ನು ಹಾಳು ಮಾಡುತ್ತಿದ್ದ ಕೋತಿಗಳು ಈಗ ನಾಯಿ ನೋಡಿ ಹೆದರಿ ದೂರ ಸರಿದಿವೆ. ಬೆಳೆ ರೈತನ ಕೈ ಸೇರುತ್ತಿದೆ. ಕಾಡಿನ ಸಮೀಪದ ಜಮೀನುಗಳಲ್ಲಿ ನಾಯಿ ಓಡಾಡುತ್ತಿದ್ದು, ಹುಲಿ ವೇಷದ ನಾಯಿ ಕಂಡು ಬೆಚ್ಚಿಬಿದಿದ್ದಾರೆ. ನಂತರ ನಾಯಿಗೆ ಬಣ್ಣ ಬಳಿದಿರುವುದು ತಿಳಿದ ಮೇಲೆ ನಿಟ್ಟುಸಿರು ಬಿಟ್ಟಿದ್ದಾರೆ.
-------------------
ಮಡಿಕೇರಿಯ ಕುಶಾಲನಗರ ತಾಲ್ಲೂಕಿನ ಅತ್ತೂರು ನಲ್ಲೂರು ಗ್ರಾಮದಲ್ಲಿ ಶುಕ್ರವಾರ ಕಾಡಾನೆಯೊಂದನ್ನು ಸೆರೆ ಹಿಡಿಯುವ ವೇಳೆ ಅದು 32 ಅಡಿ ಆಳದ ಹಳ್ಳಕ್ಕೆ ಬಿದ್ದು ಮೃತಪಟ್ಟಿದೆ. ಆನೆ ಕಾರ್ಯಪಡೆಯ ಡಿಸಿಎಫ್ ಪೂವಯ್ಯ ಅವರು ಮಾತನಾಡಿ, ಅರಿವಳಿಕೆ ಚುಚ್ಚುಮದ್ದು ನೀಡಿದ ನಂತರ ಆನೆಯು ಸ್ಥಳದಿಂದ ಓಡಿತು. ಸ್ವಲ್ಪ ದೂರ ಸಾಗಿದ ನಂತರ ಆಕಸ್ಮಿಕವಾಗಿ 32 ಅಡಿ ಆಳದ ಹಳ್ಳಕ್ಕೆ ಬಿದ್ದು, ತೀವ್ರವಾಗಿ ಗಾಯಗೊಂಡಿತು. ಬಿದ್ದ ರಭಸಕ್ಕೆ ಆನೆಯ ಅಂಗಾಂಗಗಳಿಗೆ ತೀವ್ರವಾದ ಹಾನಿಯಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದೆ. ಇದರ ಬಲಗಣ್ಣು ದೃಷ್ಟಿ ಕಳೆದುಕೊಂಡಿದ್ದರಿಂದ 32 ಅಡಿ ಆಳದ ಸಿಮೆಂಟ್ ಗುಂಡಿ ಬಹುಶಃ ಇದಕ್ಕೆ ಕಾಣಿಸದೆ ಇರುವ ಸಾಧ್ಯತೆ ಇದೆ ಎಂದಿದ್ದಾರೆ. ಸದ್ಯ, ಮೀನುಕೊಲ್ಲಿಯಲ್ಲಿ ಇದರ ಮರಣೋತ್ತರ ಪರೀಕ್ಷೆ ನಡೆಸಿ, ಅಂಗಾಂಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ
ಕೊಡಲಾಗುವುದು. 20 ವರ್ಷ ವಯಸ್ಸಿನ ಗಂಡಾನೆ ಇದಾಗಿದ್ದು, ಸುತ್ತಮುತ್ತಲ ಪ್ರದೇಶದ ರೈತರ ಮೇಲೆ ದಾಳಿ ನಡೆಸುತ್ತಿತ್ತು. ವ್ಯಕ್ತಿಯೊಬ್ಬರು ಇದರ ದಾಳಿಯಿಂದ ಈಚೆಗೆ ಮೃತಪಟ್ಟಿದ್ದರು.
-------------------
ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲು ಚಿಕ್ಕಬಳ್ಳಾಪುರದ ರೈತರು ನೋಂದಣಿ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಗೆ ರಾಗಿ ಖರೀದಿಸಲು ಜಿಲ್ಲೆಯಲ್ಲಿ ನೋಂದಣಿ ಕೇಂದ್ರಗಳನ್ನು ತೆರೆದಿದ್ದು, ಈವರೆಗೆ 8,545 ರೈತರು ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಪ್ರತಿ ಕ್ವಿಂಟಲ್‍ಗೆ 3,578 ರೂಪಾಯಿನಂತೆ ಪ್ರತಿ ಹೆಕ್ಟೇರ್‌ಗೆ 10 ಕ್ವಿಂಟಲ್‍ನಂತೆ ಗರಿಷ್ಠ 20 ಕ್ವಿಂಟಲ್ ರಾಗಿ ಖರೀದಿಸಲು ಸರ್ಕಾರ ಆದೇಶಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಚಿಂತಾಮಣಿ, ಶಿಡ್ಲಘಟ್ಟ ಮತ್ತು ಗುಡಿಬಂಡೆ ತಾಲ್ಲೂಕು ಕೇಂದ್ರಗಳಲ್ಲಿ ರಾಗಿ ಮಾರಾಟಕ್ಕೆ ನೋಂದಣಿ ಪ್ರಕ್ರಿಯೆಗಳು ನಡೆಯುತ್ತಿವೆ.
-------------------
ರಾಜ್ಯದಲ್ಲಿ ಕೊಬ್ಬರಿ ಬೆಳೆಗಾರರ ಸಂಕಷ್ಟವನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಶೀಘ್ರ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ ಕೇಂದ್ರ ಆರಂಭಿಸಲಿದೆ ಎಂದು ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ. ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರದ ಪ್ರೋತ್ಸಾಹಧನ ಯೋಜನೆ ಅಡಿ ನಾಫೆಡ್‌ನಿಂದ ಬೆಳೆಗಾರರಿಂದ ಕೊಬ್ಬರಿ ಖರೀದಿಸಲಿದೆ. ಕೆಲವು ವರ್ಷಗಳಿಂದ ಕ್ವಿಂಟಲ್‌ಗೆ 15 ಸಾವಿರ ರೂಪಾಯಿ ಅಸುಪಾಸಿನಲ್ಲಿದ್ದ ಕೊಬ್ಬರಿ ದರವು ಮೂರು ತಿಂಗಳಿನಿಂದ ಕುಸಿದಿದೆ. ಇದರಿಂದ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ಎರಡು ವರ್ಷದಿಂದ ಕೊಬ್ಬರಿ ಸಕಾಲದಲ್ಲಿ ಸಿಗದೆ ಹಸಿ ಅಂಶ ಉಳಿದುಕೊಂಡು ಬೆಳೆಗಾರರಿಗೆ ನಷ್ಟವಾಗುತ್ತಿದೆ. ಹೀಗಾಗಿ, ಆರ್ಥಿಕ ತಜ್ಞರೊಂದಿಗೆ ಅಧಿಕಾರಿಗಳು ಸಮಾಲೋಚನೆ ನಡೆಸಿದ ನಂತರ ಉಂಡೆ ಕೊಬ್ಬರಿ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 11,750 ರೂಪಾಯಿ ನಿಗದಿಪಡಿಸಲಾಗಿದೆ. ಇದರ ಜೊತೆಗೆ ರಾಜ್ಯ ಸರ್ಕಾರದ ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು.
-------------------