ಸಿರಿಧಾನ್ಯಗಳಲ್ಲಿ ಒಂದಾದ ಸಜ್ಜೆ ಹೈದರಾಬಾದ್ ಕರ್ನಾಟಕದ ಪ್ರಮುಖ ಆಹಾರ ಬೆಳೆಯಾಗಿದೆ. ಸಜ್ಜೆ- ಪೌಷ್ಟಿಕತೆ ಮತ್ತು ಮೌಲ್ಯವರ್ಧಿತ ಪದಾರ್ಥಗಳ ತಯಾರಿಕೆಯ ವಿವರ ಇಲ್ಲಿದೆ.
ಸಿರಿಧಾನ್ಯಗಳಲ್ಲಿ ಒಂದಾದ ಸಜ್ಜೆಯ ಪೌಷ್ಟಿಕತೆ ಮತ್ತು ಮೌಲ್ಯವರ್ಧಿತ ಪದಾರ್ಥಗಳ ತಯಾರಿಕೆಯ ಬಗ್ಗೆ ವಾಣಿಶ್ರೀ ಎಸ್ ರೇಣುಕಾ ಬಿರಾದಾರ
ಮತ್ತು ಅರವಿಂದ ರಾಥೋಡ್ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಲಿಂಗಸುಗೂರು ಅವರು ವಿವರಿಸಿದ್ದಾರೆ.
ಸಿರಿಧಾನ್ಯಗಳಲ್ಲಿ ಒಂದಾದ ಸಜ್ಜೆ ಹೈದರಾಬಾದ್ ಕರ್ನಾಟಕದ ಪ್ರಮುಖ ಆಹಾರ ಬೆಳೆಯಾಗಿದೆ.
ಗ್ರೇನಿನೀ ಸಸ್ಯ ಕುಟುಂಬಕ್ಕೆ ಸೇರಿದ ಸಜ್ಜೆಯ ವೈಜ್ಞಾನಿಕ ಹೆಸರು ‘ಪೆನ್ನಿಸೆಟಮ್ ಗ್ಲಾಕಮ್’. ಆಂಗ್ಲ ಭಾಷೆಯಲ್ಲಿ ‘ಪರ್ಲಮಿಲ್ಲೆಟ್’ ಎಂದು, ಹಿಂದಿಯಲ್ಲಿ ಬಾಜ್ರ,
ಮರಾಠಿಯಲ್ಲಿ ಬಾಜ್ರಿ, ತೆಲುಗಿನಲ್ಲಿ ಸಜ್ಜಲು, ತಮಿಳಿನಲ್ಲಿ ಕಂಬು ಎಂತಲೂ ಕರೆಯುತ್ತಾರೆ. ಸಜ್ಜೆಯನ್ನು ‘ವಿಸ್ಮಯ ಧಾನ್ಯ’ ಎಂದು ಕರೆಯಲಾಗುತ್ತಿದೆ.
ಇದು ಜಗತ್ತಿನ ಆರನೇ ಪ್ರಮುಖ ಆಹಾರಧಾನ್ಯವಾಗಿದ್ದು, ಜಗತ್ತಿನ ಮೂರನೇ ಒಂದಂಶ ಜನರನ್ನು ಸಲಹುತ್ತಿದೆ.
ಉತ್ತರ ಕರ್ನಾಟಕದ ಪ್ರಮುಖ ಹಬ್ಬವಾದ ಎಳ್ಳು ಅಮಾವಾಸ್ಯೆ ದಿನ ಎಳ್ಳು ಹಚ್ಚಿ ತಯಾರಿಸಿದ ಸಜ್ಜೆ ರೊಟ್ಟಿಗೆ ಹೆಚ್ಚು ಬೇಡಿಕೆ.
ಸಜ್ಜೆ ಉಂಡೆ, ಸಜ್ಜೆ ಮಾದಲಿ, ಸಂಡಿಗೆ, ಕಡುಬು, ಸಂಗ್ಟಿ ಹೀಗೆ ಹಲವಾರು ಸಜ್ಜೆ ಪದಾರ್ಥಗಳನ್ನು ತಯಾರಿಸುತ್ತಾರೆ. ಆದರೆ, ದಿನಕಳೆದಂತೆ ಸಾಂಪ್ರದಾಯಿಕ
ಹಬ್ಬಗಳು, ಅಡುಗೆಗಳು ಮಾಯವಾಗಿ ಸುಲಭವಾಗಿ ಸಿಗುವ ಸಿದ್ಧ ಆಹಾರಗಳಿಗೆ ಮಾರುಹೋಗಿದ್ದೇವೆ.
ಪ್ರಸ್ತುತ ದಿನಗಳಲ್ಲಿ ಇರುವ ಆರೋಗ್ಯ ಸಮಸ್ಯೆಗಳಿಗೆ ಸಿರಿಧಾನ್ಯಗಳಲ್ಲಿರುವ ಚಿಕಿತ್ಸಾತ್ಮಕ ಗುಣಗಳು ಸಿರಿಧಾನ್ಯಗಳನ್ನು ಬಳಸುವಂತೆ ಮಾಡುತ್ತಿವೆ.
ಅಂತಹ ಸಿರಿಧಾನ್ಯಗಳಲ್ಲಿ ಒಂದಾದ ಸಜ್ಜೆಯ ಬಗ್ಗೆ ಮಾಹಿತಿ ಇಲ್ಲಿ ತಿಳಿಸಲಾಗಿದೆ.
ಸಜ್ಜೆ ಪೌಷ್ಟಿಕತೆ
ಸಜ್ಜೆ ಒಂದು ಪೌಷ್ಟಿಕ ಧಾನ್ಯವಾಗಿದೆ. ಸಜ್ಜೆಯಲ್ಲಿರುವ ಪೋಷಕಾಂಶಗಳನ್ನು ಗಮನಿಸಿದಾಗ ಏಕದಳ ಧಾನ್ಯಗಳ ಮತ್ತು ಕಿರುಧಾನ್ಯಗಳಲ್ಲೇ ಅತಿಹೆಚ್ಚು
ಕಬ್ಬಿಣಾಂಶ ಹೊಂದಿರುವುದು ಗಮನಕ್ಕೆ ಬರುತ್ತದೆ. ಅಲ್ಲದೆ, ದಿನ ನಿತ್ಯ ಬಳಸುವ ಅಕ್ಕಿ, ಗೋಧಿ, ಜೋಳಕ್ಕಿಂತ ಹೆಚ್ಚಿನ ಸಸಾರಜನಕ ಮತ್ತು ಕೊಬ್ಬು ಹೊಂದಿದೆ
ಹಾಗೂ ಗೋಧಿಯಲ್ಲಿರುವಷ್ಟು ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಅಂಶವನ್ನು ಒಳಗೊಂಡಿದೆ.
ಸಜ್ಜೆಯಲ್ಲಿರುವ ಸಾರಜನಕವು ಎಲ್ಲ ಅವಶ್ಯಕ ಅಮೈನೋ ಆಮ್ಲಗಳನ್ನು ಹೊಂದಿದೆ.
ಉತ್ತುಮ ಪ್ರಮಾಣದ ‘ಬಿ’ ಜೀವಸತ್ವಗಳನ್ನು ಸಹ ಇದು ಹೊಂದಿದೆ.
ಲಘು ಖನಿಜಗಳಾದ ಜಿಂಕ್ ಮತ್ತು ಮ್ಯಾಗನೀಸಿಯಂ ಸಹ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತವೆ.
ಸಜ್ಜೆಯಲ್ಲಿರುವ ಲ್ಯೂಸಿನ ಎಂಬ ಅಮೈನೋ ಆಮ್ಲ ಐಸೋಲ್ಯೂಸಿನ ಜೊತೆ ಸೇರಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿರ್ವಹಿಸಲು ಸಹಾಯ ಮಾಡುತ್ತದೆ.
ಸಜ್ಜೆ ಇಷ್ಟೆಲ್ಲಾ ಪೋಷಕಾಂಶಗಳನ್ನು ಹೊಂದಿದ್ದರೂ ಇದರ ಬಳಕೆ ಕೇವಲ ಸಾಂಪ್ರದಾಯಿಕ ಖಾದ್ಯಗಳಿಗೆ ಮಾತ್ರ ಸೀಮಿತವಾಗಿದೆ.
ಇದಕ್ಕೆ ಕಾರಣ ಬದಲಾಗುತ್ತಿರುವ ಜೀವನ ಶೈಲಿ ಸುಧಾರಿತ ಸಂಸ್ಕರಣಾ ಪದ್ಧತಿಯ ಕೊರತೆ ಹಾಗೂ ತಂತ್ರಜ್ಞಾನದ ಬಗ್ಗೆ ಕಡಿಮೆ ತಿಳವಳಿಕೆ ಇರುವುದು.
ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಸಮಸ್ಯೆಗಳಾದ ಅಪೌಷ್ಟಿಕತೆ, ಮಧುಮೇಹ, ಬೊಜ್ಜುತನ, ಹೃದಯ ರೋಗಗಳು ಹೆಚ್ಚುತ್ತಿರುವುದರಿಂದ ಜನರು ಸಿರಿಧಾನ್ಯಗಳತ್ತ
ವಾಲುತ್ತಿರುವುದು ಕಂಡುಬರುತ್ತಿದೆ. ಇಷ್ಟೇ ಅಲ್ಲದೆ ಸಜ್ಜೆ ಬೆಳೆಗೆ ಯಾವುದೇ ರಸಾಯನಿಕ ಗೊಬ್ಬರ, ಕೀಟನಾಶಕದ ಅವಶ್ಯಕತೆ ಇಲ್ಲವಾದ್ದರಿಂದ
ರಸಾಯನಿಕ ಮುಕ್ತ ಆರೋಗ್ಯಕರ ಧಾನ್ಯವಾಗಿದೆ. ಸಜ್ಜೆ ಮಾತ್ರವಲ್ಲ ಎಲ್ಲಾ ಸಿರಿಧಾನ್ಯಗಳೂ ಕೂಡ ನೈಸರ್ಗಿಕವಾಗಿ ಬೆಳೆದು ಆರೋಗ್ಯ ಕಾಪಾಡುವಲ್ಲಿ
ಮಹತ್ತರ ಪಾತ್ರ ವಹಿಸುತ್ತವೆ. ಇವು ಕೇವಲ ಹಸಿವನ್ನು ಇಂಗಿಸದೆ ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಕೊಡುತ್ತವೆ.
ಕೆಲವು ರೋಗಗಳ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿಯೇ ಕೇಂದ್ರ ಸರ್ಕಾರವು 2023ನೇ ವರ್ಷವನ್ನು ಸಿರಿಧಾನ್ಯ ವರ್ಷವೆಂದು ಘೋಷಿಸಿದೆ.
ಕೃಷಿ ವಿಶ್ವ ವಿದ್ಯಾಲಯಗಳು ಮತ್ತು ಕೃಷಿ ಇಲಾಖೆಗಳು ತಮ್ಮ ಎಲ್ಲಾ ಕೃಷಿ ತರಬೇತಿಗಳು ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ಸಿರಿಧಾನ್ಯಗಳ ಮಹತ್ವ
ಮತ್ತು ಅವುಗಳಲ್ಲಿರುವ ಪೋಷಕಾಂಶಗಳ ಬಗ್ಗೆ ಮಾಹಿತಿಯನ್ನು ರೈತರಿಗೆ ಮತ್ತು ರೈತ ಮಹಿಳೆಯರಿಗೆ ತಿಳಿಸಲು ಪ್ರಯತ್ನ ಮಾಡುತ್ತಿದೆ.
ಆದ್ದರಿಂದ ಸಿರಿಧಾನ್ಯಗಳಲ್ಲಿ ಒಂದಾದ ಸಜ್ಜೆಯ ಸೂಕ್ತ ಸಂಸ್ಕರಣಾ ವಿಧಾನಗಳನ್ನು(ಮಾಲ್ಟಿಂಗ್, ಮಿಲ್ಲಿಂಗ್, ಎಕ್ಸಟ್ರ್ಯೂಡಿಂಗ್ ಇತ್ಯಾದಿ)
ಬಳಸಿಕೊಂಡು ವಿವಿಧ ಆಹಾರ ಪದಾರ್ಥಗಳನ್ನು ತಯಾರಿಸುವ ರೀತಿಯನ್ನು ಇಲ್ಲಿ ತಿಳಿಸಲಾಗಿದೆ.
ಮೊಳಕೆ ಬರಿಸಿ ತಯಾರಿಸಿದ ಸಜ್ಜೆಯ ಹಿಟ್ಟಿನ ಜೊತೆಗೆ ದ್ವಿದಳ ಧಾನ್ಯ ಹಾಗೂ ಇತರ ಏಕದಳ ಧಾನ್ಯಗಳೊಟ್ಟಿಗೆ ತಯಾರಿಸುವ ಮಾಲ್ಟ್
ಅಪೌಷ್ಟಿಕ ಮಕ್ಕಳಿಗೆ ಸೂಕ್ತ ಪೂರಕ ಆಹಾರವಾಗುತ್ತದೆ. ಇಂತಹ ಮಾಲ್ಟ್ ತಯಾರಿಸುವ ವಿಧಾನ ಹಾಗೂ ಇತರೆ ಪೌಷ್ಟಿಕಭರಿತ ಸಜ್ಜೆ ಖಾದ್ಯಗಳನ್ನು ಇಲ್ಲಿ ವಿವರಿಸಲಾಗಿದೆ.
ಮಾಲ್ಟ್ :
ಬೇಕಾದ ಸಾಮಗ್ರಿಗಳು:
ಸಜ್ಜೆ – 1 ಕಪ್ (30 ಗ್ರಾಂ.)
ರಾಗಿ – 1/4 ಕಪ್
ರಾಜಗೀರಾ ಕಾಳು – 1 ಟೀ .ಚ.
ಸೋಯಾ ಹಿಟ್ಟು – 1 ಟೀ. ಚ.
ವಿಧಾನ:
- ಸಜ್ಜೆಯನ್ನು 18 ಗಂಟೆಗಳ ಕಾಲ ನೆನೆಸಬೇಕು (ಪ್ರತಿ ಎಂಟು ತಾಸಿನ ಅಂತರದಲ್ಲಿ ನೀರನ್ನು ಬದಲಾಯಿಸಬೇಕು) ನೆನೆಸಿದ ಸಜ್ಜೆಯನ್ನು 48 ಗಂಟೆಗಳ ಕಾಲ ಮೊಳಕೆ ಬರಿಸಲು ಮಸ್ಲಿನ್ ಬಟ್ಟೆಯಲ್ಲಿ ಕಟ್ಟಿ ಇಡಬೇಕು
- ಮೊಳಕೆ ಬಂದ ಸಜ್ಜೆಯನ್ನು 36 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಬೇಕು ಒಣಗಿದ ಮೊಳಕೆ ಕಾಳುಗಳನ್ನು ಹಿಟ್ಟು ಮಾಡಿಕೊಳ್ಳಬೇಕು.
- ಹಿಟ್ಟನ್ನು ಸೋಸಿ ತವಡಿನಿಂದ ಬೇರ್ಪಡಿಸಬೇಕು ಸೋಸಿದ ಸಜ್ಜೆ ಹಿಟ್ಟಿಗೆ ಇದೇ ರೀತಿ ತಯಾರಿಸಿದ ರಾಗಿ ಹಿಟ್ಟು, ಸೋಯಾ ಹಿಟ್ಟು, ಸಕ್ಕರೆ,
- ಹಾಲಿನ ಪುಡಿ, ರಾಜಗೀರ ಕಾಳಿನ ಪುಡಿ ಸೇರಿಸಿ ಮಿಶ್ರಣ ಮಾಡಿಟ್ಟುಕೊಳ್ಳಬೇಕು ಈ ರೀತಿ ತಯಾರಾದ ಮಿಶ್ರಣದಿಂದ ಗಂಜಿ ತಯಾರಿಸಬಹುದು.
ಬಿಸಿ ಬೇಳೆ ಬಾತ್
ಬೇಕಾದ ಸಾಮಗ್ರಿಗಳು:
ಸಜ್ಜೆ – 1 ಕಪ್ (30 ಗ್ರಾಂ.)
ತೊಗರಿ ಬೇಳೆ – 1 ಕಪ್ (30 ಗ್ರಾಂ.)
ಕ್ಯಾರೇಟ್ – 1
ಬೀನ್ಸ್ – 4
ಆಲೂಗಡ್ಡೆ – 1
ಹೂ ಕೋಸು – 1 ಹಿಡಿ
ಬಟಾಣಿ – ಸ್ವಲ್ಪ
ಬಿಸಿ ಬೇಳೆ ಬಾತ್ ಮಸಾಲೆ – 2 ಟೇ.ಚ.
ಖಾರದ ಪುಡಿ – 1 ಟೇ.ಚ.
ಸಾಸುವೆ – 1 ಟೀ.ಚ.
ಅರಿಶಿಣ – 1 ಟೀ.ಚ.
ಎಣ್ಣೆ – 1 1/2 ಟೇ.ಚ.
ಕರಿಬೇವು, ಕೊತ್ತಂಬರಿ – ಸ್ವಲ್ಪ
ಹುಣಸೆ ಹಣ್ಣು – 1 ಲಿಂಬೆ ಗಾತ್ರ
ಉಪ್ಪು – ರುಚಿಗೆ ತಕ್ಕಷ್ಟು
ವಿಧಾನ:
- ತೊಗರಿ ಬೇಳೆ ಹಾಗೂ ಎರಡು ತಾಸು ನೆನೆಸಿದ ಸಜ್ಜೆಯನ್ನು ಬೇರೆ ಬೇರೆಯಾಗಿ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಬೇಕು.
- ಬಾಣಲೆಯಲ್ಲಿ ಸಾಸುವೆ ಹಾಗೂ ಕರಿಬೇವು ಒಗ್ಗರಣೆ ಮಾಡಿಕೊಂಡು ಉಳಿದ ತರಕಾರಿಗಳನ್ನು ಇದಕ್ಕೆ ಸೇರಿಸಿ.
- ಸ್ವಲ್ಪ ಬೆಂದ ನಂತರ ಮಸಾಲೆ ಪುಡಿ, ಖಾರ, ಉಪ್ಪು, ಹುಣಸೆ ರಸ ಮತ್ತು ಬೇಯಿಸಿಕೊಂಡ ಬೇಳೆ ಹಾಕಿ ಸ್ವಲ್ಪ ಹೊತ್ತು ಕುದಿಸಿ
- ನಂತರ ಈ ಮಿಶ್ರಣಕ್ಕೆ ಬೇಯಿಸಿಕೊಂಡ ಸಜ್ಜೆ ಸೇರಿಸಿ 5-10 ನಿಮಿಷ ಕುದಿಸಿ ಕೊತ್ತಂಬರಿ ಸೇರಿಸಿ ಕೆಳಗಿಳಿಸಿ.
- ಸೂಚನೆ: ಬಿಸಿ ಬೇಳೆ ಮಸಾಲೆ ತಯಾರಿಸಲು ಜೀರಿಗೆ, ಸಾಸುವೆ, ಉದ್ದಿನಬೇಳೆ, ಕಡ್ಲೆಬೇಳೆ, ಮೆಂತೆಕಾಳು ಮತ್ತು ಧನಿಯಾ ತಲಾ ಒಂದು ಚಮಚದಂತೆ ಹಾಗೂ ಸ್ವಲ್ಪ ಚಕ್ಕೆ, ಕಾಳು ಮೆಣಸು, 2 ಟೀಚಮಚ ಕೊಬ್ಬರಿ ಜೊತೆ ಹುರಿದು ಪುಡಿ ಮಾಡಿಕೊಳ್ಳುವುದು.