News

ಕೋವಿಡ್ನಿಂದ ಮೃತಪಟ್ಟ ಕುಟುಂಬಕ್ಕೆ ವೈಯಕ್ತಿಕವಾಗಿ 50ಸಾವಿರ ರೂ.ಪರಿಹಾರ! ಬಿ.ಸಿ.ಪಾಟೀಲ್ ಘೋಷಣೆ

17 May, 2021 1:32 PM IST By:
Agri Minister B.C Patil

ಕೋವಿಡ್ ಎರಡನೇ ಅಲೆ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 50ಸಾವಿರ ರೂ.ಪರಿಹಾರ ಧನ ನೀಡುವುದಾಗಿ ಕೃಷಿ ಸಚಿವರೂ ಆಗಿರುವ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ್  ಘೋಷಿಸಿದ್ದಾರೆ.

ಹೌದು, ಹಿರೇಕರೂರು ಮತಕ್ಷೇತ್ರದ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಕೋವಿಡ್ ಎರಡನೇ ಅಲೆ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 50 ಸಾವಿರ ರೂ.ಪರಿಹಾರ ಧನ ನೀಡುವುದಾಗಿ ಘೋಷಿಸಿದ್ದಾರೆ.

ಹಿರೇಕೆರೂರು ಮತಕ್ಷೇತ್ರದಲ್ಲಿ ಇಲ್ಲಿಯವರೆಗೆ ಸುಮಾರು ಹದಿನೆಂಟು ಮಂದಿ‌ ಸೋಂಕಿನಿಂದ ಮೃತಪಟ್ಟಿದ್ದು,ಮೃತಪಟ್ಟವರ ಕುಟುಂಬದ ಸದಸ್ಯರನ್ನು ಬಿ.ಸಿ.ಪಾಟೀಲ್ ಭೇಟಿಯಾಗಿ ಪರಿಹಾರ ಧನ ವಿತರಿಸಲಿದ್ದಾರೆ.

ಈ ಕುರಿತಂತೆ ವಿಡಿಯೋ ಮಾಡಿ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಬಿ.ಸಿ.ಪಾಟೀಲ್ ಅವರು,  'ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿನಲ್ಲಿ ಕೋವಿಡ್ ಎರಡನೇ ಅಲೆ ಸೋಂಕಿನಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ ವೈಯಕ್ತಿಕವಾಗಿ 50 ಸಾವಿರ ರೂ. ಧನ ಸಹಾಯ ಮಾಡಲು ನಿರ್ಧರಿಸಿದ್ದು, ನಾಳೆಯಿಂದ ಕ್ಷೇತ್ರದಲ್ಲಿ ಸಂಚರಿಸಿ ಈ ಕಾರ್ಯ ಕೈಗೊಳ್ಳಲಿದ್ದೇನೆ ಎಂದು  ಹೇಳಿದ್ದಾರೆ.

ಇನ್ನು ಕೆಲವು ದಿನಗಳ ಹಿಂದೆ ಹಿರೇಕೆರೂರು ಮತಕ್ಷೇತ್ರ ವ್ಯಾಪ್ತಿಯಲ್ಲಿನ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರು ಹಿರೇಕೆರೂರು ಸೇರಿದಂತೆ ಹಾವೇರಿ ಜಿಲ್ಲೆಯ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿಗೆ ದಾಖಲಾಗಿ ಚಿಕಿತ್ಸೆ ಪಡೆದಲ್ಲಿ ಅವರ ಚಿಕಿತ್ಸಾ ವೆಚ್ಚವನ್ನು ವೈಯಕ್ತಿಕವಾಗಿ ಭರಿಸುವುದಾಗಿ ಬಿ.ಸಿ ಪಾಟೀಲ್ ಘೋಷಿಸಿದ್ದರು.