News

ಕೊಡಗು ಮರು ನಿರ್ಮಾಣಕ್ಕೆ 25 ಕೋಟಿ ರೂ. ನೆರವು: ಸುಧಾಮೂರ್ತಿ

10 October, 2018 8:25 PM IST By:

ಮೈಸುರು: ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರು ಬುಧವಾರ ಚಾಮುಂಡಿಬೆಟ್ಟದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬಕ್ಕೆ ಚಾಲನೆ ನೀಡಿದ ನಂತರ ಮಾತನಾಡುತ್ತ, ಕೊಡಗು ಮರು-ನಿರ್ಮಾಣಕ್ಕೆ ಪ್ರತಿಷ್ಠಾನದ ವತಿಯಿಂದ 25 ಕೋಟಿ ರೂಪಾಯಿ ನೆರವು ನೀಡುವುದಾಗಿ ಘೋಷಿಸಿದರು.

ಸರಕಾರ ನಮಗೆ ಜಾಗ ತೋರಿಸಿ, ಸಹಕರಿಸಿದಲ್ಲಿ ಮನೆ ನಿರ್ಮಿಸಿ ಕೊಡುತ್ತೇವೆ. ಇದು ನಾವು ಮಾಡುತ್ತಿರುವ ಉಪಕಾರವಲ್ಲ. ನಮ್ಮ ಕರ್ತವ್ಯ ಎಂದು ಸುಧಾಮೂರ್ತಿ ತಿಳಿಸಿದರು.

ಆಡದೆ ಮಾಡುವವನು ಉತ್ತಮನು, ಆಡಿ ಮಾಡುವವನು ಮಧ್ಯಮನು, ಆಡಿಯೂ ಮಾಡದವನು ಅಧಮನು ಎಂಬ ಸುಧಾಮೂರ್ತಿ ಮಾತುಗಳಿಗೆ ದಸರಾ ಹಬ್ಬದಲ್ಲಿ ನೆರೆದಿದ್ದ ಭಕ್ತಾಭಿಮಾನಿಗಳು ತಲೆದೂಗಿದರು.

ಆರಂಭದಿಂದಲೂ ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗೆ ಮೈಸೂರು ದೊರೆಗಳ ಕೊಡುಗೆಯನ್ನು ಶ್ಲಾಘಿಸುತ್ತಲೇ ಬಂದಿರುವ ಸುಧಾಮೂರ್ತಿ, ದಸರಾ ಇಂದು ನಿನ್ನೆ ಹುಟ್ಟಿಕೊಂಡ ಹಬ್ಬವಲ್ಲ. ನೂರಾರು ವರ್ಷಗಳ ಇತಿಹಾಸವಿದೆ. ಮೈಸೂರು ದೊರೆಗಳು ಕನ್ನಡ ಉಳಿಸಲು, ಬೆಳೆಸಲು ಶ್ರಮಿಸಿದವರು.



ಅವರ ಧಾರ್ಮಿಕ ಕಾರ್ಯಗಳು ವಿಖ್ಯಾತವಾಗಿವೆ. ಕರ್ನಾಟಕ ಸರಕಾರವು ದಸರೆಯನ್ನು ನಾಡಹಬ್ಬವಾಗಿ ಸರ್ವ ಜನಾಂಗಗಳಿಗೂ ಸಮರ್ಪಿಸಿದೆ. ಇದು ನಮ್ಮ ರಾಜ್ಯದ ಶ್ರೇಷ್ಠ ಆಚರಣೆ. ಅತಿದೊಡ್ಡ ಗೌರವವಾದ ದಸರಾ ಉದ್ಘಾಟಿಸುವ ಅವಕಾಶ ನೀಡಿದ್ದಕ್ಕೆ ಕೃತಜ್ಞತೆಗಳು ಎಂದರು.