ಪಿಎಂ-ಕಿಸಾನ್ ಯೋಜನೆಯಡಿ 10.75 ಕೋಟಿ ರೈತರಿಗೆ 1.15 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ವಿತರಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.
ಅವರು ಪಿಎಂ-ಕಿಸಾನ್ ಯೋಜನೆಯ ಎರಡನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಯೋಜನೆಯಡಿ ರೈತರಿಗೆ ವಾರ್ಷಿಕ 6 ಸಾವಿರ ರೂಪಾಯಿ ನೀಡಲಾಗುತ್ತಿದೆ. ಪ್ರತಿ ನಾಲ್ಕು ತಿಂಗಳಿಗೆ ಒಮ್ಮೆ 2000 ರೂಪಾಯಿಯಂತೆ ಪಿಎಂ ಕಿಸಾನ್ ಯೋಜನೆಯಡಿ ನೋಂದಾಯಿತ ರೈತರ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ ಎಂದರು.
ಈ ಯೋಜನೆಯನ್ನು ಪ್ರಧಾನಿ ಮೋದಿ ಅವರು 2019ರ ಫೆಬ್ರವರಿ 24ರಂದು ಉತ್ತರ ಪ್ರದೇಶದ ಗೋರಖ್ ಪುರದಿಂದ ಆರಂಭಿಸಿದ್ದರು ಎಂಬುದನ್ನು ನಾವು ಮರೆಯಬಾರದು. ಈವರೆಗೆ ಸುಮಾರು 10.75 ಕೋಟಿ ರೈತರು ಈ ಯೋಜನೆಯ ಲಾಭ ಪಡೆದಿದ್ದಾರೆ ಮತ್ತು ಕೇಂದ್ರ ಸರ್ಕಾರ 1.15 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಿದೆ ಎಂದರು.
ಈ ಯೋಜನೆಯ ಪ್ರಯೋಜನ ಪಡೆಯಲು ಇನ್ನೂ ರೈತರು ನೋಂದಾಯಿಸಿಕೊಳ್ಳಬಹುದು.ಅರ್ಹ ಫಲಾನುಭವಿಗಳು ಈ ಯೋಜನೆಯಲ್ಲಿ ಸೇರ್ಪಡೆಗೊಳ್ಳುವಂತೆ ನೋಡಿಕೊಳ್ಳಬೇಕು ಎಂದ ಅವರು. ಪಿಎಂ-ಕಿಸಾನ್ ಯೋಜನೆಯ ಲಾಭ ಪಡೆಯುತ್ತಿಲ್ಲ ಎಂದು ಅನೇಕ ರೈತರು ದೂರುತ್ತಿದ್ದಾರೆ. ಅಧಿಕಾರಿಗಳು ರೈತರಿಗೆ ಪಿಎಂ ಕಿಸಾನ್ ಯೋಜನೆಯ ಕುರಿತು ಮನವರಿಕೆ ಮಾಡಬೇಕೆಂದರು.
ಪಿಎಂ-ಕಿಸಾನ್ ಯೋಜನೆಗೆ ಬಜೆಟ್ ನಲ್ಲಿ ಸಾಕಷ್ಟು ಅನುದಾನ ಒದಗಿಸಲಾಗಿದೆ ಎಂದು ಉಲ್ಲೇಖಿಸಿದ ಅವರು, ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು.
ದೇಶದ 14.5 ಕೋಟಿ ರೈತರಿಗೆ ಆರಂಭಿಕ ಗುರಿ ಇದ್ದು, ಹೆಚ್ಚಿನ ಫಲಾನುಭವಿಗಳನ್ನು ಸೇರಿಸುವ ಪ್ರಯತ್ನ ಗಳು ನಡೆಯುತ್ತಿವೆ.
ಇನ್ನೂ ಯೋಜನೆಗೆ ಸೇರ್ಪಡೆಯಾಗಿಲ್ಲದ ಪಶ್ಚಿಮ ಬಂಗಾಳದ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಫಲಾನುಭವಿಗಳ ಪಟ್ಟಿ ನೀಡಿದ ನಂತರ ಕೇಂದ್ರ ಸರ್ಕಾರ ಅನುದಾನ ನೀಡಲಿದೆ ಎಂದರು.
ಪಿಎಂ-ಕಿಸಾನ್ ಯೋಜನೆ, 10 ಸಾವಿರ ಎಫ್ ಪಿಓಗಳ ರಚನೆ ಮತ್ತು 1 ಲಕ್ಷ ಕೋಟಿ ರೂ.ಗಳ ಕೃಷಿ ಮೂಲಸೌಕರ್ಯ ನಿಧಿ ಸೇರಿದಂತೆ ಕಳೆದ ಆರೂವರೆ ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ತೋಮರ್ ಬೆಳಕು ಚೆಲ್ಲಿದರು.