News

ಅಡಿಕೆ ಟಾಸ್ಕ್ ಫೋರ್ಸ್ ಗೆ 10 ಕೋಟಿ ರೂಪಾಯಿ ಬಿಡುಗಡೆ

01 December, 2020 9:12 AM IST By:

ಅಡಿಕೆ ಬೆಳೆಗಾರರ ರಕ್ಷಣೆಗೆಂದೇ ಅಸ್ತಿತ್ವಕ್ಕೆ ಬಂದಿರುವ ಅಡಿಕೆ ಕಾರ್ಯಪಡೆಗೆ  (ಟಾಸ್ಕ್ ಫೋರ್ಸ್) ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪನವರು  10 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ ಎಂದು ಅಡಿಕೆ ಕಾರ್ಯಪಡೆ (ಅರೆಕಾ ಟಾಸ್ಕ್ ಫೋರ್ಸ್) ಅಧ್ಯಕ್ಷ ಆರಗ ಜ್ಞಾನೇಂದ್ರ ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಳದಿ ರೋಗ ಬಾಧೆ ಜತೆಗೆ ಕೆಲವು ಹೊಸ ರೋಗಗಳು ಅಡಿಕೆ ಬೆಳೆಯನ್ನು ಕಾಡುತ್ತಿವೆ. ಅಡಿಕೆ ಬೆಳೆಗಾರರು ಬಹಳ ಸಂದಿಗ್ಧ ಸ್ಥಿತಿಯಲ್ಲಿದ್ದರೂ ಬೆಲೆಯಲ್ಲಿ ಅಸ್ತಿರತೆ, ನ್ಯಾಯಾಲಯದ ಕಾಯ್ದೆಗಳು, ಅತೀವೃಷ್ಟಿ, ಅನಾವೃಷ್ಟಿ ಹೀಗೆ ಹಲವರು ಕಾರಣಗಳಿಂದ ಸಂಕಷ್ಟಕ್ಕೆ ಒಳಗಾಗಿದ್ದರೂ ಸರ್ಕಾರ ಇದನ್ನು ಗಮನಿಸಿ ಅಡಕೆ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ರೋಗ ತಡೆಗಟ್ಟಲು ಸೂಕ್ತ ಔಷಧಗಳ ಸಂಶೋಧನೆಗೆ ಒತ್ತು ನೀಡಲಾಗುವುದು.ಈ ಎಲ್ಲ ಕಾರ್ಯಗಳಿಗೆ ಅವಶ್ಯಕತೆ ಇದ್ದ  10 ಕೋಟಿಯನ್ನು ರಾಜ್ಯ ಸರ್ಕಾರ ನೀಡಿದೆ. ಈಗಾಗಲೇ ತೋಟಗಾರಿಕೆ ಇಲಾಖೆಯ ಮೂಲಕ ಹಣ ಬಿಡುಗಡೆಯಾಗಿದೆ ಎಂದರು.

ಸರ್ಕಾರ ನೀಡಿದ ಹಣವನ್ನು ಅಡಿಕೆ ಬೆಳೆಗಾರರ ಹಿತಕ್ಕಾಗಿ ಬಳಸಿಕೊಳ್ಳಲಾಗುವುದು. ಹಲವು ಪ್ರಕರಣಗಳು ಸುಪ್ರೀಂ ಕೋರ್ಟ್‌ನಲ್ಲಿವೆ. ಪ್ರಕರಣಗಳಿಂದ ಶೀಘ್ರ ಹೊರಬರಬೇಕಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಗುಣಗಳಿವೆ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು. ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಸಾಬೀತುಪಡಿಸಬೇಕಿದೆ. ಅದಕ್ಕಾಗಿ ಕಾರ್ಯಪಡೆಯಿಂದಲೇ ತಜ್ಞ ವಕೀಲರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.