News

ಆಧುನಿಕ ಕೃಷಿಯಲ್ಲಿ ರಂಜಕ ಗೊಬ್ಬರಗಳನ್ನು ಮೂಲ ಗೊಬ್ಬರವನ್ನಾಗಿ ಬಳಸಲಾಗುತ್ತದೆ... ಇಲ್ಲಿದೆ ಮಾಹಿತಿ

18 May, 2021 9:04 PM IST By:

ಆಧುನಿಕ ಕೃಷಿಯಲ್ಲಿ ರಸಗೊಬ್ಬರ ಮಹತ್ವದ ಪಾತ್ರವನ್ನುವಹಿಸುತ್ತಿವೆ. ಅದರಲ್ಲೂ ರಂಜಕ ಬೇರುಗಳ ಬೆಳವಣಿಗಿಗೆ ಸಹಕಾರಿಯಾಗಿದ್ದು, ಆಧುನಿಕ ಕೃಷಿಯಲ್ಲಿ  ರಂಜಕ ಗೊಬ್ಬರಗಳನ್ನು ಮೂಲ ಗೊಬ್ಬರವನ್ನಾಗಿ ಬಳಸಲಾಗುತ್ತಿದೆ. ಈ ರಂಜಕ ಗೊಬ್ಬರಗಳನ್ನು ತಯಾರಿಸಲು ರಾಕ್ ಫಾಸ್ಪೇಟ್ ಅದಿರನ್ನು ಉಪಯೋಗಿಸಲಾಗುತ್ತದೆ.

ಸಾಮಾನ್ಯವಾಗಿ ಮಣ್ಣಿಗೆ ಸೇರಿಸುವ ಎಲ್ಲ ಗೊಬ್ಬರಗಳನ್ನು ಬೆಳೆಯು ಸಂಪೂರ್ಣವಾಗಿ ಬಳಸಿಕೊಳ್ಳುವುದಿಲ್ಲ. ಉದಾ:- 100ಕಿ.ಗ್ರಾಂ. ಯುರಿಯಾ ಗೊಬ್ಬರವನ್ನು ಬೆಳೆಗೆ ನೀಡಿದಾಗ ಯುರಿಯಾದಲ್ಲಿ ಲಭ್ಯವಿರುವ ಶೇ.46 ಸಾರಜನಕದಲ್ಲಿ ಕೇವಲ 18-20 ಕಿ.ಗ್ರಾಂ ನಷ್ಟು ಮಾತ್ರ ಬೆಳೆಯು ಉಪಯೋಗಿಸಿಕೊಳ್ಳುತ್ತದೆ.  ಈ ಪ್ರಕ್ರಿಯೆಗೆ ಗೊಬ್ಬರದ ಬಳಕೆ ಸಾಮರ್ಥ್ಯ ಎಂದು ಕರೆಯಲಾಗುವುದು.ರಂಜಕ ಗೊಬ್ಬರದ ಬಳಕೆ ಸಾಮರ್ಥ್ಯ 20% ಇದೆ.

ಅಲಭ್ಯ ರಂಜಕವನ್ನು ಬೆಳೆಗಳಿಗೆ ಒದಗಿಸುವುದರಲ್ಲಿ ಸೂಕ್ಷ್ಮಾಣುಜೀವಿಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.ಜೈವಿಕ ಗೊಬ್ಬರದಲ್ಲಿರುವ ಸೂಕ್ಷ್ಮಾಣುಜೀವಿಗಳು ಸ್ಥಿರಗೊಂಡಿರುವ ಅಲಭ್ಯ ರಂಜಕವನ್ನು ಕರಗಿಸಿ ಬೆಳೆಗಳಿಗೆ ದೊರೆಯುವಂತೆ ಮಾಡುತ್ತದೆ.ರಂಜಕ ಕರಗಿಸುವ ಸೂಕ್ಷ್ಮಾಣುಜೀವಿಗಳು ಸಾಮಾನ್ಯವಾಗಿ ಮಣ್ಣಿನಲ್ಲಿ ಇರುತ್ತವೆ. ಆದರೆ ಬೇರೇ ಬೇರೇ ಸೂಕ್ಷ್ಮಾಣುಜೀವಿಗಳ ರಂಜಕ ಕರಗಿಸುವ ಪ್ರಮಾಣ ಬೇರೆಯಾಗಿರುತ್ತದೆ. ಹೆಚ್ಚು ಪ್ರಮಾಣದಲ್ಲಿ ರಂಜಕವನ್ನು ಕರಗಿಸುವ ಸೂಕ್ಷ್ಮಾಣುಜೀವಿಗಳಾದ ಬೆಸಿಲಸ್,ಸುಡೋಮೊನಾಸ್,ಅಸ್ಫರಜಿಲ್ಲಸ್,ಮೈಕೊರಾಜಾ ಮತ್ತು ಪೆನಿಸಿಲಿಯಂಗಳನ್ನು ಜೈವಿಕ ಗೊಬ್ಬರ ತಯಾರಿಸಲು ಬಳಸಲಾಗುತ್ತಿದೆ.

ರಂಜಕ ಕರಗಿಸುವ ಜೈವಿಕ ಗೊಬ್ಬರವು ರಾಸಾಯನಿಕ ಗೊಬ್ಬರಗಳಿಗಿಂತ ಪೂರಕ ಹಾಗೂ ಎಲ್ಲಾ ಬೆಳೆಗಳಲ್ಲಿಯೂ ಬಳಸಬಹುದು. ಕೊಟ್ಟಿಗೆ ಗೊಬ್ಬರ ಅಥವಾ ಎರೆಹುಳು ಗೊಬ್ಬರದೊಂದಿಗೆ ಜೈವಿಕ ಗೊಬ್ಬರಗಳನ್ನು ಮಿಶ್ರಣ ಮಾಡಿ ಬೆಳೆಗಳಿಗೆ ನೀಡುವುದು ಹೆಚ್ಚು ಪರಿಣಾಮಕಾರಿ.

ರಂಜಕ ಕರಗಿಸುವ ಜೈವಿಕ ಗೊಬ್ಬರವನ್ನು ಮೂರು ವಿಧಾನಗಳಲ್ಲಿ ಬಳಕೆ ಮಾಡಬಹುದು.

1.ಬೀಜೋಪಚಾರ (Seed treatment) :

 ಒಂದು ಎಕರೆಗೆ ಬೇಕಾಗುವಷ್ಟು ಬೀಜಗಳನ್ನು 200ಗ್ರಾಂ.ಜೈವಿಕ ಗೊಬ್ಬರ ಹಾಗೂ ಅಂಟಿನ ದ್ರಾವಣದಿಂದ ಬೀಜೋಪಚಾರ ಮಾಡಬೇಕು. ಜೈವಿಕ ಗೊಬ್ಬರಗಳ ಬಳಕೆಯ ಪ್ರಮಾಣ ಬೀಜದ ಗಾತ್ರದ ಮೇಲೆ ನಿರ್ಧರಿಸಲಾಗುತ್ತದೆ‌. ಅಂಟಿನ ಪದಾರ್ಥದ ಬದಲು ಬೆಲ್ಲದ ಪಾಕವನ್ನು ಕೂಡ ಬಳಸಬಹುದು. ಬೀಜಗಳನ್ನು ಹರಡಿ ಜೈವಿಕ ಗೊಬ್ಬರ ಮತ್ತು ಅಂಟಿನ ಪದಾರ್ಥವನ್ನು ಬೀಜಗಳ ಮೇಲೆ ಚಿಮುಕಿಸಬೇಕು. ಸರಿಯಾಗಿ ಬೀಜಗಳ ಮೇಲೆ ಜೈವಿಕ ಗೊಬ್ಬರ ಅಂಟುವಂತೆ ಲೇಪನ ಮಾಡಬೇಕು. ಇದಾದನಂತರ ಲೇಪನ ಮಾಡಿದ ಬೀಜಗಳನ್ನು ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು.

2.ಸಸಿಗಳ ಬೇರುಗಳಿಗೆ ಉಪಚಾರ (Nursery root treatment) :

 ನಾಟಿ ಮಾಡುವಂತಹ ಬೆಳೆಗಳಿಲ್ಲಿ ರಂಜಕ ಕರಗಿಸುವ ಜೈವಿಕ ಗೊಬ್ಬರವನ್ನು‌ಸಸಿಗಳ ಬೇರುಗಳಿಗೆ ಉಪಚರಿಸಬೇಕು 1ಕಿ.ಗ್ರಾಂ. ಜೈವಿಕ ಗೊಬ್ಬರವನ್ನು 10ಲೀಟರ್ ನೀರಿನಲ್ಲಿ ಕರಗಿಸಿ ನಾಟಿ ಮಾಡುವ ಸಸಿಗಳನ್ನು ಈ ತಯಾರಿಸಿದ ದ್ರಾವಣದಲ್ಲಿ  ಸುಮಾರು 5 ನಿಮಿಷಗಳವರೆಗೆ ಅದ್ದ ಬೇಕು. ಅದ್ದುವ ಕಾರ್ಯ ಮುಗಿದ ಬಳಿಕ ಆದಷ್ಟು ಬೇಗ  ಸಸಿಗಳನ್ನು ನಾಟಿ ಮಾಡಬೇಕು.

3.ಮಣ್ಣಿಗೆ ಸೇರಿಸುವುದು (Adding to the soil) :

 ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರದೊಂದಿಗೆ ಎಕರೆಗೆ 6-8 ಕಿ.ಗ್ರಾಂ ಜೈವಿಕ ಗೊಬ್ಬರವನ್ನು ಬೆರೆಸಬೇಕು. ಈ ರೀತಿಯ ಮಿಶ್ರಣವನ್ನೂ ಬೆಳೆಯ ಬಿತ್ತನೆಗಿಂತ ಮುಂಚೆಯೇ ಮಣ್ಣಿನಲ್ಲಿ ಸೇರಿಸಬೇಕು. ಇನ್ನೂ ನಾಟಿ ಮಾಡುವಂತಹ ಬೆಳೆಗಳಲ್ಲಿ ನಾಟಿ ಮಾಡುವ ಸಾಲಿನಲ್ಲಿ ಈ ಮಿಶ್ರಣವನ್ನು ಹಾಕಬೇಕು.