News

ಜುಲೈ 3 ರಂದು ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ವಿವಿಧ ಸಾಮಗ್ರಿಗಳ ಬಿಡುಗಡೆ

02 July, 2021 9:01 PM IST By:

ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಡಿ ಗ್ರಾಮೀಣ ಪ್ರದೇಶದಲ್ಲಿನ ಸಮುದಾಯಕ್ಕೆ ಸೂಕ್ತ ವೈಯಕ್ತಿಕ ಶೌಚಾಲಯ ಬಳಕೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಮತ್ತು ಶುದ್ಧ ಕುಡಿಯುವ ನೀರಿನ (ಜಲ ಜೀವನ ಮಿಷನ್) ಕುರಿತು ಅರಿವು ಮೂಡಿಸಲು ಇಲಾಖೆಯು ಮುದ್ರಣ ಮಾಡಿರುವ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ವಿವಿಧ ಮುದ್ರಿತ ಐ.ಇ.ಸಿ. ಸಾಮಗ್ರಿಗಳನ್ನು ಇದೇ ಜುಲೈ 3 ರಂದು ಕಲಬುರಗಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಮಟ್ಟದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯಿತಿಯಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಎಲ್ಲಾ ಜನ ಪ್ರತಿನಿಧಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಪುಸ್ತಕ ಸಾಮಗ್ರಿಗಳನ್ನು ಬಿಡುಗಡೆಗೊಳಿಸಲು ಜಿಲ್ಲಾ ಪಂಚಾಯಿತಯಿಂದ  ತಿಳಿಸಲಾಗಿದೆ.

ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರು ನಮ್ಮ ನಡೆ ಸ್ವಚ್ಛತೆಯ ಕಡೆ ಎಂಬ ಧ್ಯೇಯೋದ್ದೇಶದೊಂದಿಗೆ ಭಾಗವಹಿಸಿ ನಮ್ಮ ಕಲಬುರಗಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿಕೊಂಡು ಹೋಗಲು ಹಾಗೂ ಈ ಕುರಿತು ಅರಿವು ಮೂಡಿಸಲು ಸ್ವತ: ಮುಂದೆ ಬರಲು ಹಾಗೂ ಪ್ರತಿಯೊಬ್ಬರು ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಜಿಲ್ಲೆಯನ್ನು ಬಯಲು ಶೌಚಮುಕ್ತ, ಕಸ ಮುಕ್ತ, ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲು ಎಲ್ಲರೂ ಸಹಕರಿಸಬೇಕು.

ಇದೇ ಜುಲೈ 3 ರಂದು “ಪ್ಲಾಸ್ಟಿಕ್ ಚೀಲ ರಹಿತ” ದಿನವಾಗಿದ್ದು, ಈ ದಿನದಂದು ಎಲ್ಲಾ ಕೈಪಿಡಿ, ಪುಸ್ತಕಗಳನ್ನು ಬಿಡುಗಡೆ ಮಾಡಲು ಕ್ರಮ ವಹಿಸಬೇಕು. ಇಲಾಖೆಯ ವಿವಿಧ ಕೈಪಿಡಿಗಳನ್ನು ಸರಬರಾಜು ಮಾಡುವ ಮುನ್ನ ತಮ್ಮ ತಾಲೂಕಿನ ಶಾಸಕರು, ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳ ಮುಖಾಂತರ ಬಿಡುಗಡೆ ಮಾಡಬೇಕು.

ಕರ್ನಾಟಕ ರಾಜ್ಯ ಗ್ರಾಮೀಣ ನೈರ್ಮಲ್ಯ ನೀತಿ ಕಾರ್ಯತಂತ್ರ ಮತ್ತು ಉಪನಿಧಿಗಳ ಹಾಗೂ ಇತರೆ ಕೈಪಿಡಿ, ಪುಸ್ತಕಗಳಲ್ಲಿನ ಮಾಹಿತಿಯನ್ನು ಇಲಾಖೆಯ ವಿವಿಧ ಕಾರ್ಯಾಗಾರ ಹಾಗೂ ಸಮಾರಂಭಗಳಲ್ಲಿ ಹಂಚಿಕೊಳ್ಳಬೇಕೆಂದು  ಅವರು ತಿಳಿಸಿದ್ದಾರೆ.