News

ಹವಾಮಾನ ಆಧಾರಿತ ತೋಟಗಾರಿಕೆ ಬೆಳೆ ವಿಮೆ ನೋಂದಣಿಗೆ ಸೂಚನೆ

10 June, 2021 5:04 PM IST By:
crop insurance

ಪ್ರತಿ ವರ್ಷದಂತೆಯೇ ಈ ವರ್ಷವೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅಡಿಯಲ್ಲಿ 2021 22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆದಿರುವ ರೈತರು, ಕಟಾವು ಹಂತ ತಲುಪಿರುವ ತಮ್ಮ ಬೆಳೆಗಳಿಗೆ ವಿಮಾ ನೋಂದಣಿ ಮಾಡಿಸುವಂತೆ ತೋಟಗಾರಿಕೆ ಇಲಾಖೆಯು ಸೂಚನೆ ನೀಡಿದೆ.

ಈ ಸಂಬಂಧ ವಿಮೆ ವ್ಯಾಪ್ತಿಗೆ ಒಳಪಡಲಿರುವ ಬೆಳೆಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಇಲಾಖೆಯು ಅಧಿಸೂಚನೆ ಹೊರಡಿಸಿದೆ. ಅದರಂತೆ ತೋಟಗಾರಿಕೆ ಬೆಳೆಗಳಾದ ಅಡಿಕೆ, ದಾಳಿಂಬೆ, ವೀಳ್ಯೆದೆಲೆ, ಕಾಳುಮೆಣಸು ಮತ್ತು ಮಾವು ಬೆಳೆಗಳನ್ನು ಬೆಳೆದಿರುವ ರೈತರು ವಿಮಾ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ವಿಮೆ ವ್ಯಾಪ್ತಿಗೆ ಒಳಪಡಲಿರುವ ಬೆಳೆಗಳು ಆಯಾ ಜಇಲ್ಲೆಗೆ ಅನುಗುಣವಾಗಿ ಬದಲಾಗಲಿವೆ.

ಪ್ರಸ್ತುತ ದಾವಣಗೆರೆ ಜಿಲ್ಲೆ ವ್ಯಾಪ್ತಿಯಲ್ಲಿ ಅಡಿಕೆ, ವೀಳ್ಯೆದೆಲೆ ಹಾಗೂ ದಾಳಿಂಬೆ ಬೆಳೆ ಬೆಳೆದಿರುವ ರೈತರು ಮಾತ್ರ ಬೆಳೆ ವಿಮೆ ಯೋಜನೆ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಈ ಸಂಬAಧ ಎಸ್.ಬಿ.ಐ ಜನರಲ್ ಇನ್ಸುರೆನ್ಸ್ ಕಂಪನಿ ಜೊತೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ರೈತರು ಬೆಳೆ ವಿಮೆಗಳು ಎಸ್.ಬಿ.ಐ ಜನರಲ್ ಇನ್ಸುರೆನ್ಸ್ ಸಂಸ್ಥೆ ಅಡಿಯಲ್ಲಿ ಬರಲಿವೆ.

ದಾವಣಗೆರೆ ಜಿಲ್ಲೆಯ ಹರಿಹರ, ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ ಮತ್ತು ಜಗಳೂರು ತಾಲೂಕುಗಳಲ್ಲಿ ಅಡಿಕೆ, ದಾಳಿಂಬೆ, ವೀಳ್ಯೆದೆಲೆ ಬೆಳೇದಿರುವ ರೈತರು ವಿಮಾ ಯೋಜನೆಯಡಿ ನೋಂದಣಿ ಮಾಡಿಕೊಳ್ಳುವಂತೆ ತೋಟಗಾರಿಕಾ ಉಪನಿರ್ದೇಶಕ ಲಕ್ಮೀಕಾಂತ್ ಬೊಮ್ಮಣ್ಣನವರ್ ತಿಳಿಸಿದ್ದಾರೆ.

 ಪ್ರೀಮಿಯಂ ವಿವರ

ಪ್ರತಿ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿರುವ ಅಡಿಕೆ ಬೆಳೆಗೆ 1,28,000 ರೂಪಾಯಿ ವಿಮಾ ಮೊತ್ತವನ್ನು ಸರ್ಕಾರ ನಿಗದಿಪಡಿಸಿದ್ದು, ಇದಕ್ಕಾಗಿ ಅಡಕೆ ಬೆಳೆಗಾರರು ಪ್ರೀಮಿಯಂ ಮೊತ್ತವಾಗಿ 6400 ರೂ.ಗಳನ್ನು ಪಾವತಿಸಬೇಕು. ಒಂದು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿರುವ ದಾಳಿಂಬೆ ಬೆಳೆಗೆ 1,27,000 ರೂಪಾಯಿ ವಿಮಾ ಮೊತ್ತ ನಿಗದಿ ಮಾಡಲಾಗಿದ್ದು, ಇಲ್ಲಿ ರೈತರು ಪ್ರೀಮಿಯಂ ಮೊತ್ತವಾಗಿ

 6350 ರೂ.ಗಳನ್ನು ಪಾವತಿಸಬೇಕು. ಇನ್ನು ಒಂದು ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿರುವ ವೀಳ್ಯದೆಲೆ ಬೆಳೆಗೆ 1,17,000 ರೂ. ವಿಮಾ ಮೊತ್ತವನ್ನು ಸರ್ಕಾರ ನಿಗದಿ ಮಾಡಿರುತ್ತದೆ. ವೀಳ್ಯೆದೆಲೆ ಬೆಳೆಗಾರರು ಪ್ರೀಮಿಯಂ ಮೊತ್ತದ ರೂಪದಲ್ಲಿ 5850 ರೂಪಾಯಿಗಳನ್ನು ಪಾವತಿ ಮಾಡಬೇಕಿರುತ್ತದೆ. ಇನ್ನು ಕಾಳುಮೆಣಸು ಬೆಳೆಗೆ ಪ್ರತಿ ಹೆಕ್ಟೇರ್ ಪ್ರದೇಶಕ್ಕೆ 47,000 ರೂಪಾಯಿ ವಿಮಾ ಮೊತ್ತವನ್ನು ನಿಗದಿ ಮಾಡಲಾಗಿದೆ. ಪ್ರೀಮಿಯಂ ಮೊತ್ತವಾಗಿ ರೈತರು 2350 ರೂಪಾಯಿಗಳನ್ನು ಪಾವತಿಸಬೇಕು. ಒಂದು ಕ್ಟೇರ್ ಭೂಮಿಯಲ್ಲಿ ಬೆಳೆದಿರುವ ಮಾವು ಬೆಳೆಗೆ 80,000 ರೂಪಾಯಿ ವಿಮಾ ಮೊತ್ತವನ್ನು ಸರ್ಕಾರ ನಿಗದಿ ಮಾಡಿದ್ದು, ಮಾವು ಬೆಳೆಗಾರರು ಪ್ರೀಮಿಯಂ ಮೊತ್ತದ ರೂಪದಲ್ಲಿ ಎಸ್.ಬಿ.ಐ ಜನರಲ್ ಇನ್ಸುರೆನ್ಸ್ ಕಂಪನಿಗೆ 4000 ರೂಪಾಯಿಗಳನ್ನು ಪಾವತಿ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ವಾರ್ಷಿಕ ಬೆಳೆ ವಿಮೆ ಯೋಜನೆಯಾಗಿದ್ದು, ಪ್ರಸ್ತುತ ಯೋಜನೆಯಡಿ ನೋಂದಣಿ ಮಾಡಿಕೊಳ್ಳುವ ರೈತರು ಪಾವತಿಸುವ ಪ್ರೀಮಿಯಂ ಮೊತ್ತವು ಒಂದು ವರ್ಷದ ಅವಧಿಯವರೆಗೆ ಚಾಲನೆಯಲ್ಲಿರುತ್ತದೆ. ವರ್ಷದ ನಂತರ ಮತ್ತೆ ಪ್ರೀಮಿಯಂ ಪಾವತಿಸಿ ಬೆಳೇ ವಿಮೆ ಮಾಡಿಸಬೇಕಾಗುತ್ತದೆ. ವಿಮೆ ಮಾಡಿಸಲು ಇಂತಿಷ್ಟೇ ಜಮೀನು ಹೊಂದಿರುವವರು ಮಾತ್ರ ವಿಮೆ ಮಾಡಿಸಬೇಕು ಎಂಬ ನಿರ್ಬಂಧಗಳು ಇಲ್ಲದ ಕಾರಣ, ರೈತರು ಎಷ್ಟು ಎಕರೆ ಜಮೀನಿನ ಬೆಳೆಗಾದರೂ ವಿಮೆ ಮಾಡಿಸಬಹುದು ಎಂದು ತೋಟಗಾರಿಕೆ ಇಲಾಖೆ ದಾವಣಗೆರೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾಗಿರುವ ಶಶಿಕಲಾ ಅವರು ಮಾಹಿತಿ ನೀಡಿದ್ದಾರೆ.

ಮರುವಿನ್ಯಾಸಗೊಳಿಸಲಾಗಿರುವ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ 2021-22ನೇ  ಸಾಲಿನ ಮುಂಗಾರು ಹಂಗಾಮಿನಲ್ಲಿ ತೋಟಗಾರಿಕೆ ಬೆಳೆಗಳಾಗಿರುವ ಅಡಿಕೆ, ದಾಳಿಂಬೆ, ವೀಳ್ಯೆದೆಲೆ, ಕಾಳುಮೆಣಸು ಬೆಳೆಗಳನ್ನು ನೋಂದಣಿ ಮಾಡಿಸಲು ಜೂನ್ 30 ಕೊನೆಯ ದಿನವಾಗಿರುತ್ತದೆ. ಹಾಗೇ, ಮಾವು ಬೆಳೆಗಾರರು ಬೆಳೆ ವಿಮೆ ಅಡಿ ನೋಂದಣಿ ಮಾಡಿಸಲು ಜುಲೈ 31 ಕೊನೆಯ ದಿನವಾಗಿರುತ್ತದೆ.

ಇವರನ್ನು ಸಂಪರ್ಕಿಸಿ:

ಆಸಕ್ತ ರೈತರು ಸಮೀಪದ ಬ್ಯಾಂಕ್ ಶಾಖೆ, ಗ್ರಾಮ ಪಂಚಾಯಿತಿ ಕಚೇರಿ, ಸಾಮಾನ್ಯ ಸೇವಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳನ್ನು ಹಾಗೂ ಆಯಾ ಜಿಲ್ಲಾ ತೋಟಕಾರಿಕೆ ಇಲಾಖೆ ಕಚೇರಿಗಳನ್ನು ಸಂಪರ್ಕಿಸಿ ವಿಮೆ ಹಾಗೂ ನೋಂದಣಿಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ದಾವಣಗೆರೆ ತೋಟಗಾರಿಕೆ ಉಪನಿರ್ದೇಶಕರು ದೂ: 08192-297090, ದಾವಣಗೆರೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು: 9482129648 ಹಾಗೂ ದೂರವಾಣಿ ಸಂಖ್ಯೆ: 08192-250153, ಚನ್ನಗಿರಿ: 9449759777 ಹಾಗೂ ದೂರವಾಣಿ ಸಂಖ್ಯೆ: 08192228170. ಹೊನ್ನಾಳಿ: 8296358345 ಹಾಗೂ ದೂರವಾಣಿ ಸಂಖ್ಯೆ: 08188252990, ನ್ಯಾಮತಿ: 8296358345 ಹಾಗೂ ದೂರವಾಣಿ ಸಂಖ್ಯೆ: 08188252990, ಹರಿಹರ: 7625078054 ಹಾಗೂ ದೂರವಾಣಿ ಸಂಖ್ಯೆ: 08192-242803, ಜಗಳೂರು: 9353175240 ಹಾಗೂ ದೂರವಾಣಿ ಸಂಖ್ಯೆ: 08196 227389 ಸಂಪರ್ಕಿಸಬಹುದು.