News

ಬೆಂಬಲ ಬೆಲೆಯಲ್ಲಿ ಕಡಲೆ ನೋಂದಣಿಗೆ ಬೇಕಾಗುವ ದಾಖಲೆಗಳು.... ಇಲ್ಲಿದೆ ಮಾಹಿತಿ

17 February, 2021 6:02 AM IST By:

2020-21 ನೇ ಸಾಲಿನ ಹಿಂಗಾರು ಹಂಗಾಮಿನ ಎಫ್.ಎ.ಕ್ಯೂ.ಗುಣಮಟ್ಟದ ಕಡಲೆಕಾಳನ್ನು ಪ್ರತಿ ಕ್ವಿಂಟಾಲ್‍ಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ 5,100 ರಂತೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಫೆ. 22 ರಿಂದ ಖರೀದಿಸಲಾಗುತ್ತಿದೆ.

ಕಡಲೆ ಬೆಳೆದ ರೈತರು ಖರೀದಿ ಕೇಂದ್ರಗಳಲ್ಲಿ ಫೆಬ್ರುವರಿ 15 ರಿಂದ ಏ. 30 ವರೆಗೆ ನೋಂದಣಿ ಮಾಡಿಸಿಕೊಳ್ಳಬೇಕು. ಫೆ. 22 ರಿಂದ ಮೇ 14 ವರೆಗೆ ರೈತರಿಂದ ಖರೀದಿ ಕೇಂದ್ರಗಳಲ್ಲಿ ಕಡಲೆಕಾಳನ್ನು ಖರೀದಿಸಲಾಗುತ್ತದೆ.

 ಪ್ರತಿ ರೈತರಿಂದ ಪ್ರತಿ ಏಕರೆಗೆ ಗರಿಷ್ಠ 4 ಕ್ವಿಂಟಾಲ್‍ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಟ 15 ಕ್ವಿಂಟಾಲ್ ಕಡಲೆಕಾಳನ್ನು ಖರೀದಿಸಲಾಗುತ್ತದೆ.  ರೈತರು ಯಾವುದೇ ಸಂದರ್ಭದಲ್ಲಿ ಮಧ್ಯವರ್ತಿಗಳ ಮೊರೆ ಹೋಗಬಾರದು. ಇದರ ಉಪಯೋಗವನ್ನು ರೈತರೇ ನೇರವಾಗಿ ಪಡೆಯಬೇಕು.

ನೋಂದಣಿಗೆ ಅಗತ್ಯವಿರುವ ದಾಖಲೆಗಳು:

ನೋಂದಣಿಗೆ ಆಗಮಿಸುವ ರೈತರು ತಮ್ಮ ಆಧಾರ ಗುರುತಿನ ಚೀಟಿಯ ಮೂಲ ಪ್ರತಿ ಹಾಗೂ ಅದರ ನಕಲು ಪ್ರತಿ, 2020-21 ನೇ ಸಾಲಿನ ಪಹಣಿ ಪತ್ರ (ಪಹಣಿ ಪತ್ರದಲ್ಲಿ ಕಡಲೆಕಾಳು ಬೆಳೆದಿರುವ ಬಗ್ಗೆ ನಮೂದಾಗಿರಬೇಕು). ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳಿಂದ ಕಡಲೆಕಾಳು ಬೆಳೆದ ಬಗ್ಗೆ ಧೃಢೀಕರಣ ಪತ್ರ, ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲು ಪ್ರತಿ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು. 

ಖರೀದಿಸಲು ಅನುಸರಿಸುವ ಕ್ರಮಗಳು:

ಕಡಲೆಕಾಳು ಉತ್ಪನ್ನದ ಎಫ್.ಎ.ಕ್ಯೂ ಗುಣಮಟ್ಟದ್ದಾಗಿರಬೇಕು. ಚೆನ್ನಾಗಿ ಒಣಗಿರಬೇಕು. ತೇವಾಂಶವು ಶೇ.12 ಕ್ಕಿಂತ ಕಡಿಮೆ ಇರಬೇಕು. ಕಡಲೆಕಾಳು ಉತ್ಪನ್ನದ ಗುಣಮಟ್ಟದ ಗಾತ್ರ, ಬಣ್ಣ ಮತ್ತು ಆಕಾರವನ್ನು ಹೊಂದಿರಬೇಕು. ಗಟ್ಟಿಯಾಗಿರಬೇಕು ಮತ್ತು ಮಣ್ಣಿನಿಂದ ಬೇರ್ಪಡಿಸಲ್ಪಟ್ಟು ಸ್ವಚ್ಛವಾಗಿರಬೇಕು, ಸಾಣಿಗೆಯಿಂದ ಸ್ವಚ್ಛಗೊಳಿಸಿರಬೇಕು. ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು.