ಈ ವರ್ಷದ ಮುಂಗಾರು ಅವಧಿ ಜೂನ್-ಸೆಪ್ಟೆಂಬರ್ ಈ ನಾಲ್ಕು ತಿಂಗಳ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಈ ವರ್ಷ ದಾಖಲೆಯ ಮಳೆಯಾಗಿದೆ. ಕಳೆದ ಮೂರು ದಶಕದ ಮುಂಗಾರಿನ ಅವಧಿಯಲ್ಲಿ ಇದು ಮೂರನೇ ಗರಿಷ್ಠ ಪ್ರಮಾಣದ ಮಳೆಯಾಗಿದೆ. ಕಳೆದ ಎರಡು ದಿನಗಳಿಂದ ಕೆಲವು ಕಡೆ ಅಬ್ಬರಿಸಿದ ಮುಂಗಾರು ಮಳೆ ಅಕ್ಟೋಬರ್ 1 ರ ನಂತರ ರಾಜ್ಯದೆಲ್ಲೆಡೆ ದುರ್ಬಲವಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿಯಲ್ಲಿ ಮುಂಗಾರು ಕೊಂಚ ದುರ್ಬಲವಾಗಿದ್ದು, ಉತ್ತರ ಒಳನಾಡಿನಲ್ಲಿ ಚುರುಕಾಗಿದೆ. ಆದರೆ, ಇನ್ನೂ ಮೂರು ದಿನಗಳ ನಂತರ ಒಳನಾಡು ಕರಾವಳಿಯಲ್ಲಿ ಮಳೆ ದುರ್ಬಲವಾಗಲಿದ್ದು, ಆಗಾಗ ತುಂತುರು ಮಳೆ ಇಲ್ಲವೆ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗುವುದನ್ನು ಬಿಟ್ಟರೆ ಭಾರಿ ಮಳೆಯಾಗುವ ಲಕ್ಷಣಗಳಿಲ್ಲ.
ಮುಂಗಾರು ಮಳೆಯ ಆರ್ಭಟ ಸೆಪ್ಟೆಂಬರ್ 30ಕ್ಕೆ ಮುಗಿಯುತ್ತಿದ್ದು, ಸದ್ಯಕ್ಕೆ ಹೆಚ್ಚಿನ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿಲ್ಲ. ಅಕ್ಟೋಬರ್ 15 ರ ವೇಳೆಗೆ ಮುಂಗಾರು ಮಾರುತಗಳ ಮರಳುವಿಕೆ ಪ್ರಾರಂಭವಾಗಲಿದ್ದು, ಆ ವೇಳೆಗೆ ಮತ್ತೊಂದು ಸುತ್ತಿನ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.
ಜೂನ್ ತಿಂಗಳಲ್ಲಿ ಶೇ. 118, ಜುಲೈ ತಿಂಗಳಲ್ಲಿ ಶೇ. 90, ಆಗಸ್ಟ್ ತಿಂಗಳಲ್ಲಿ 127 ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಶೇ. 104 ರಷ್ಟು ಮಳೆಯಾಗಿದೆ. ಒಟ್ಟಾರೆ ನಾಲ್ಕು ತಿಂಗಳ ಅವಧಿಯಲ್ಲಿ ಶೇ. 109 ರಷ್ಟು ಮಳೆಯಾಗಿದೆ. ಶೇ. 96 ರಿಂದ ಶೇ. 104ರವರೆಗೆ ವಾಡಿಕೆ ಪ್ರಮಾಣದ ಮಳೆಯಾಗಿದೆ. ಆದರೆ ಈ ವರ್ಷ ಶೇ. 109 ರಷ್ಟು ಮಳೆಯಾಗಿದೆ.19 ರಾಜ್ಯಗಳಲ್ಲಿ ವಾಡಿಕೆ ಮಳೆ ಸುರಿದಿದ್ದು, ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.