News

ಬ್ಯಾಡಗಿ ಮೆಣಸಿಗೆ ಬಂಪರ್‌ ಬೆಲೆ, ಮಾರುಕಟ್ಟೆ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ದರ

29 December, 2020 8:22 AM IST By:
Record Price for Chilly

ಮಾರುಕಟ್ಟೆಯಲ್ಲಿ ರೈತರೊಬ್ಬರು ಬೆಳೆದಿದ್ದ ಮೆಣಸಿನಕಾಯಿಗೆ 50,111 ರೂ.ಗಳ (ಕ್ವಿಂಟಲ್‌ಗೆ) ದಾಖಲೆ ಬೆಲೆ ದೊರೆತಿದೆ.

ಹೌದು, ಅಂತಾರಾಷ್ಟ್ರೀಯ ಖ್ಯಾತಿಗೆ ತಕ್ಕಂತೆ ವ್ಯಾಪಾರ ವಹಿವಾಟು ನಡೆಸುತ್ತಿರುವ ಬ್ಯಾಡಗಿ ಪಟ್ಟಣದ  ಮಾರುಕಟ್ಟೆಯಲ್ಲಿ ಸೋಮವಾರ ಟೆಂಡರ್‌ಗಿಟ್ಟ ಪ್ರತಿ ಕ್ವಿಂಟಲ್‌ ಡಬ್ಬಿ ಮೆಣಸಿನಕಾಯಿಗೆ  50,111 ಹಾಗೂ ಕಡ್ಡಿ ಮೆಣಸಿನಕಾಯಿಗೆ  38,009 ದಾಖಲೆಯ ಬೆಲೆ ದೊರೆತಿದೆ.

ಗದಗ ಜಿಲ್ಲೆ ಬೆಟಗೇರಿಯ ರೈತ ಮಲ್ಲಿಕಾರ್ಜುನ ಕರೆಮಸ್ಟಿ ಅವರು ಬೆಳೆದ ಡಬ್ಬಿ ಮೆಣಸಿನಕಾಯಿಗೆ ಬಂಪರ್ ಬೆಲೆ ದೊರೆತಿದೆ. ಈತನ ಮೆಣಸಿನಕಾಯಿಯನ್ನು ವರ್ತಕ ಆರ್‌.ಆರ್‌.ಆಲದಗೇರಿ ದಾಖಲೆಯ ಬೆಲೆ ನೀಡಿ ಖರೀದಿಸಿದ್ದಾರೆ. ಮಾರುಕಟ್ಟೆ ಇತಿಹಾಸದಲ್ಲಿಯೇ ಡಬ್ಬಿ ಮೆಣಸಿನಕಾಯಿಗೆ ದೊರೆತ ಅತಿ ಹೆಚ್ಚಿನ ಬೆಲೆ ಇದು ಎನ್ನಲಾಗಿದೆ. ಕಳೆದ ವಾರ ಪ್ರತಿ ಕ್ವಿಂಟಲ್‌ ಡಬ್ಬಿ ಮೆಣಸಿನಕಾಯಿಗೆ  45,111 ಗರಿಷ್ಠ ಬೆಲೆ ನೀಡಿ ಖರೀದಿ ಸಲಾಗಿತ್ತು. ಗುಂಟೂರು ತಳಿ ಮೆಣಸಿನಕಾಯಿ ಕನಿಷ್ಠ  600 ಹಾಗೂ ಗರಿಷ್ಠ ಬೆಲೆ  13,509 ಸ್ಥಿರತೆ ಕಾಯ್ದುಕೊಂಡಿದೆ. 

ಮೂರು ತಳಿಗೂ ಉತ್ತಮ ದರ

ಸೋಮವಾರ ಮಾರುಕಟ್ಟೆಗೆ ವರ್ಷದಲ್ಲೇ ಮೊದಲ ಬಾರಿಗೆ 1.05 ಲಕ್ಷಕ್ಕೂ ಹೆಚ್ಚು ಟನ್‌ ಮೆಣಸಿನಕಾಯಿ ಆವಕವಾದ ಕಾರಣ ಬೆಲೆಯಲ್ಲಿ ಇಳಿಕೆ ಕಂಡು ಬರಬಹುದೆಂದು ಅಂದಾಜಿಸಲಾಗಿತ್ತು. ಆದರೆ ಇವೆಲ್ಲವನ್ನು ಸುಳ್ಳು ಮಾಡಿದ ವರ್ತಕರು ಕಡ್ಡಿ, ಡಬ್ಬಿ, ಹಾಗೂ ಗುಂಟೂರ ತಳಿಯ ಮೆಣಸಿನಕಾಯಿಗಳಿಗೆ ಉತ್ತಮ ದರ ನೀಡಿದ್ದಾರೆ.