News

ಸಿಫಾರಸು ಮಾಡಿರುವ ಪ್ರಮಾಣದಲ್ಲಿ ಸಾರಜನಕ ನೀಡಿದರೆ ಬೆಳೆಗಳ ಚೇತರಿಕೆ: ಡಾ.ಅಶೋಕ

24 July, 2021 9:22 PM IST By:

ಕೆಲ ದಿನಗಳಿಂದ ಸತತ ಮಳೆಯಾಗಿರುವುದರಿಂದ ಮೊದಲು ಹೊಲದಲ್ಲಿ ನಿಂತಿರುವ ನೀರನ್ನು ಹೊರಹಾಕಲು ಏರ್ಪಾಡು ಮಾಡಬೇಕು. ಹೊಲದಲ್ಲಿ ಅಲ್ಲಲ್ಲಿ ಕಾಲುವೆಗಳನ್ನು ಮಾಡಿ ಹೆಚ್ಚಾದ ನೀರು ಬಸಿದು ಹೋಗುವಂತೆ ಮಾಡಬೇಕು. ಮಳೆ ನಿಂತ ನಂತರ ಬೆಳೆಗಳ ಚೈತನ್ಯಕ್ಕೆ ಆಯಾ ಬೆಳೆಗಳಿಗೆ ಸಿಫಾರಸು ಮಾಡಿರುವ ಪ್ರಮಾಣದಲ್ಲಿ ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡಬೇಕು ಎಂದು ಹಾವೇರಿ ಜಿಲ್ಲೆ ಹನುಮನಮಟ್ಟಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಅಶೋಕ ಪಿ. ಅವರು ಸಲಹೆ ನೀಡಿದರು.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಿಗಿಹಳ್ಳಿ, ಶಿಂಗಾಪೂರ ಪ್ಲಾಟ್ ಗ್ರಾಮದ ಪ್ರಗತಿಪರ ರೈತರಾದ ಪ್ರಕಾಶ ಬೆಂಚಿಹಳ್ಳಿ ಅವರ ಭತ್ತ, ಸೋಯಾ ಅವರೆ, ಶೇಂಗಾ, ಹಾಗೂ ಗೋವಿನಜೋಳದ ಜಮೀನುಗಳಿಗೆ ಭೇಟಿ ನೀಡಿದ ಅವರು, ರೈತರೊಂದಿಗೆ ಚರ್ಚಿಸಿ, ಬೆಳೆ ಸಂರಕ್ಷಣೆ ಹಾಗೂ ಕಳೆ ನಿರ್ವಹಣೆಗೆ ತಾಂತ್ರಿಕ ಸಲಹೆಗಳನ್ನು ನೀಡಿದರು.

ಸತತ ಮಳೆಯಿಂದ ಬೆಳೆಗಳಲ್ಲಿ ಕಳೆಯ ಪ್ರಮಾಣ ಹೆಚ್ಚಾಗಿರುವ ಕಾರಣ ಆಯಾ ಬೆಳೆಗಳಿಗೆ ಸಿಫಾರಸು ಮಾಡಿರುವ ಕಳೆನಾಶಕಗಳನ್ನು ಸಿಂಪಡಿಸಿ, ಕಳೆಗಳನ್ನು ನಿರ್ವಹಣೆ ಮಾಡಬೇಕು. ಹವಾಮಾನ ಪರಿಸ್ಥಿತಿ ನೋಡಿಕೊಂಡು ಕಳೆನಾಶಕ ಸಿಂಪರಣೆ ಕೈಗೊಳ್ಳಬಹುದು. ಮಳೆ ನಿಂತ ಮರ‍್ನಾಲ್ಕು ದಿನಗಳ ನಂತರ ಹದ ನೋಡಿಕೊಂಡು ಅಂತರ ಬೇಸಾಯ (ಎಡೆಕುಂಟೆ) ಮಾಡಿ ಕಳೆ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.

ಸತತ ಮಳೆಯಿಂದ ಶೇಂಗಾ ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿವೆ. ಕಾರಣ, ಶೇ.0.5ರ 19:19:19 ಅಥವಾ 13:0:45 (5 ಗ್ರಾಂ. ಪ್ರತಿ ಲೀ. ನೀರಿಗೆ) ಹಾಗೂ ಶೇ.0.25ರ ಕಬ್ಬಿಣದ ಸಲ್ಫೇಟ್ ಮತ್ತು ಶೇ.0.25ರ ಸತುವಿನ ಸಲ್ಫೇಟ್ ದ್ರಾವಣವನ್ನು (2.5 ಗ್ರಾಂ ಪ್ರತಿ ಲೀ. ನೀರಿಗೆ) ಹಾಕಿ, ಬೆಳೆಗೆ ಸಿಂಪಡಿಸಬೇಕು. 15 ದಿನಗಳ ಬಳಿಕ ಮತ್ತೊಮ್ಮೆ ಇದೇ ದ್ರಾವಣ ಸಿಂಪಡಿಸಬೇಕು. ಗೋವಿನ ಜೋಳದಲ್ಲಿ ಎಲೆ ಹಳದಿಯಾಗಿರುವುದು ಕಂಡುಬAದಲ್ಲಿ 19:19:19 ಅಥವಾ 13:0:45 ನೀರಿನಲ್ಲಿ ಕರಗುವ ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 5 ಗ್ರಾಂ. ನಂತೆ ಕರಗಿಸಿ ಸಿಂಪಡಿಸಬೇಕು ಎಂದು ಡಾ. ಅಶೋಕ ಮಾಹಿತಿ ನೀಡಿದರು.

ಹಿರಿಯ ವಿಜ್ಞಾನಿ ಡಾ.ಅಶೋಕ ಅವರು ಶಿಗಿಹಳ್ಳಿ ಗ್ರಾಮದ ಜಮೀನಿಗೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.

ಭತ್ತದ ಸಸಿ ನಾಟಿ ಕ್ರಮಗಳು

ಭತ್ತ ನಾಟಿ ಮಾಡುವಾಗ ತಳಿಗಳ ಸಸಿಗಳನ್ನು 20 ಸೆಂ.ಮೀ. ಅಂತರದ ಸಾಲುಗಳಲ್ಲಿ ಪ್ರತಿ 10 ಸೆಂ.ಮೀ.ಗೆ 2-3 ರಂತೆ ನಾಟಿ ಮಾಡಬೇಕು. ಸಾಲಿನಲ್ಲಿ ನಾಟಿ ಮಾಡಲಾಗದಿದ್ದಲ್ಲಿ ಪ್ರತಿ ಚದರ ಮೀಟರ್ ಕ್ಷೇತ್ರದಲ್ಲಿ ಕನಿಷ್ಠ 50 ಗುಣಿ ಬೇಕಾಗಿದ್ದು, ಪ್ರತಿ ಗುಣಿಯಲ್ಲಿ 2-3 ಸಸಿಗಳನ್ನು ನಾಟಿ ಮಾಡಬೇಕು. ಅಲ್ಪಾವಧಿ ಮತ್ತು ಮಧ್ಯಮಾವಧಿ ತಳಿಗಳಾದಲ್ಲಿ 15 ಸೆಂ. ಮೀ. ಅಂತರದ ಸಾಲುಗಳಲ್ಲಿ ಸಸಿಗಳ ನಡುವೆ 10 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ಅಲ್ಪಾವಧಿ ಮತ್ತು ಮಧ್ಯಮಾವಧಿ ತಳಿಗಳಾದಲ್ಲಿ 20-25 ದಿವಸಗಳ ಸಸಿಗಳನ್ನು ಮತ್ತು ಧೀರ್ಘಾವಧಿ ತಳಿಗಳಾದಲ್ಲಿ 30-35 ದಿವಸಗಳ ಸಸಿಗಳನ್ನು ನಾಟಿಗೆ ಉಪಯೋಗಿಸಬೇಕು. ಅನಿವಾರ್ಯ ಕಾರಣಗಳಿಂದ ವಯಸ್ಸಾದ ಸಸಿಗಳನ್ನು ನಾಟಿ ಮಾಡುವ ಸಂದರ್ಭದಲ್ಲಿ 4-6 ಸಸಿಗಳನ್ನು ನಾಟಿ ಮಾಡಬೇಕು. ಯಾವ ಕಾರಣಕ್ಕೂ ಸಸಿಗಳನ್ನು 5 ಸೆಂ.ಮೀ ಗಿಂತ ಹೆಚ್ಚು ಆಳದಲ್ಲಿ ನಾಟಿ ಮಾಡಬಾರದು. ನಾಟಿಗೆ ಮೊದಲು ಭತ್ತದ ಸಸಿಯ ಬೇರುಗಳನ್ನು ಅಝೋಸ್ಪಿರುಲಮ್ ಅಣುಜೀವಿ ಗೊಬ್ಬರದ ದ್ರಾವಣದಲ್ಲಿ 15-20 ನಿಮಿಷಗಳ ಕಾಲ ಅದ್ದಿಟ್ಟು, ಬಳಿಕ ನಾಟಿ ಮಾಡುವುದರಿಂದ ಭತ್ತಕ್ಕೆ ಶಿಫಾರಸು ಮಾಡಿದ ಸಾರಜನಕದ ಪ್ರಮಾಣದಲ್ಲಿ ಶೇ.25 ರಷ್ಟುನ್ನು ಕಡಿಮೆ ಮಾಡಬಹುದು ಎಂದು ವಿವರಿಸಿದರು.

ಭತ್ತದ ಇಳುವರಿ ಹೆಚ್ಚಾಗಬೇಕೆಂದರೆ ನಿರ್ದಿಷ್ಟ ಕ್ಷೇತ್ರದಲ್ಲಿನ ತೆನೆಗಳ ಸಂಖ್ಯೆ ಹಾಗೂ ಪ್ರತಿ ತೆನೆಯಲ್ಲಿ ಗಟ್ಟಿ ಕಾಳುಗಳ ಸಂಖ್ಯೆ ಹೆಚ್ಚಾಗಬೇಕು. ಕೊನೆಗೆ ಕಾಳು ಜೊಳ್ಳಾಗದೆ ಗಟ್ಟಿ ಕಾಳಾಗಬೇಕು. ಒಂದು ಚದರ ಮೀಟರ್ ಕ್ಷೇತ್ರದಲ್ಲಿ ಮಧ್ಯಮಾವಧಿ ತಳಿಗಳಲ್ಲಿ 400ಕ್ಕೂ ಹೆಚ್ಚು ಕಾಳುಗಳು ಇರುವುದಾದಲ್ಲಿ ಅದನ್ನು ಉತ್ತಮ ಬೆಳೆ ಎನ್ನಬಹುದು. ಬೆಳೆ ಬೆಳವಣಿಗೆಯ ಪ್ರಾರಂಭದಲ್ಲಿ ಸಾರಜನಕವನ್ನು ಒದಗಿಸುವುದರಿಂದ ಕಾಳುಗಳು ಚೆನ್ನಾಗಿ ಬರುತ್ತವೆ. ತಡವಾಗಿ ಸಾರಜನಕವನ್ನು ಒದಗಿಸಿದರೆ ಇಳುವರಿ ಕುಂಠಿತಗೊಳ್ಳುತ್ತದೆ.

ನAತರ ಸೋಯಾಬಿನ್ ಬೆಳೆಯಲ್ಲಿ ಕಾಂಡ ಕೊರೆಯುವ ನೊಣದ ಬಾಧೆ ಉಂಟಾಗಿದ್ದು, ಇದರ ನಿಯಂತ್ರಣಕ್ಕಾಗಿ 0.3 ಗ್ರಾಂ. ಥಯೋಮೆಥಾಕ್ಸಾಮ್ 80 ಡಬ್ಲೂ.ಡಿ.ಜಿ. ಅಥವಾ ಥಯೋಮೆಥಾಕ್ಸಾಮ್ 12.6% + ಲ್ಯಾಮ್ಡಾಸೈಹೆಲೋಥ್ರಿನ್ 9.5% ಕೀಟನಾಶಕವನ್ನು ಪ್ರತಿ ಲೀಟರಿಗೆ 1 ಮಿ.ಲೀ.ಯಂತೆ ಬೆರೆಸಿ ಸಿಂಪಡಿಸಬೇಕು. ಕನಿಷ್ಠ 200 ಲೀ. ಸಿಂಪರಣಾ ದ್ರಾವಣವನ್ನು ಪ್ರತಿ ಎಕರೆಗೆ ಉಪಯೋಗಿಸಬೇಕು ಎಂದು ತಿಳಿಸಿದರು.

ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಸಂತೊಷ ಎಚ್.ಎಂ ಹಾಗೂ ಹವಾಮಾನ ತಜ್ಞರಾದ ಡಾ. ಶಾಂತವೀರಯ್ಯ, ರೈತರಾದ ಯಲ್ಲಪ್ಪ ಸಣ್ಣಮನಿ, ನಿಂಗಪ್ಪ ಹಡಪದ, ಸಿದ್ದು ಹಾಲಣ್ಣನವರ ಹಾಗೂ ಮಲ್ಲಾರಪ್ಪ ಹೊಸಮನಿ ಮತ್ತಿತ್ತರು ಈ ವೇಳೆ ಉಪಸ್ಥಿತರಿದ್ದರು.