ಜಗತ್ತಿನಾದ್ಯಂತ ಹಲವಾರು ಔಷಧಿ ತಜ್ಞರು ಕೊರೋನಾ ಸೋಂಕಿಗೆ ಔಷಧಿ ಕಂಡುಹಿಡಿಯಲು ನಿರತರಾಗಿದ್ದರು. ಕಳೆದ ಮೂರುವರೆ ತಿಂಗಳಿಂದ ಇಡೀ ಜಗತ್ತನ್ನೇ ಬೆಚ್ಚಿಬಿಳಿಸಿದ್ದ ಕೊರೋನಾದಿಂದ ಮುಕ್ತಿ ಹೊಂದಲು ಎಲ್ಲಾ ದೇಶಗಳು ಪರದಾಡುತ್ತಿದ್ದವು. ಇಂತಹ ಕ್ಲಿಷ್ಟಕರ ಸಮಯದಲ್ಲಿ ಕೊರೋನಾ ಸೋಂಕಿನಿಂದ ಜನರನ್ನು ಹೇಗೆ ರಕ್ಷಿಸಬೇಕೆಂಬುದೇ ಸವಾಲಾಗಿತ್ತು. ದೇಶಾದ್ಯಂತ ಕಾಡುತ್ತಿರುವ ಕೋವಿಡ್-19 ಸೋಂಕಿಗೆ ಕೊನೆಗೂ ಪತಂಜಲಿ ಸಂಸ್ಥೆ ಆಯುರ್ವೇದಿಕ್ ಔಷಧಿಯನ್ನು ಬಿಡುಗಡೆ ಮಾಡಿದೆ.
ಇಡೀ ಜಗತ್ತು ಕೋವಿಡ್ ಲಸಿಕೆ ಕಂಡಹಿಡಿಯಲು ಶತ ಪ್ರಯತ್ನ ನಡೆಸುತ್ತಿರುವ ಸಮಯದಲ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಡಬಲ್ಲ ಮೊದಲ ಆಯುರ್ದೇವಿಕ್ ಔಷಧಿಯನ್ನು ಅಭಿವೃದ್ಧಿಪಡಿಸಲಾಗಿದೆ. ಪತಂಜಲಿ ಸಂಶೋಧನಾ ಸಂಸ್ಥೆ ಹಾಗೂ ಎನ್ಐಎಂಎಸ್ ಸಂಸ್ಥೆಗಳು ಒಗ್ಗೂಡಿ ಈ ಮೊದಲ ಆಯುರ್ವೇದಿಕ್ ಔಷಧ ಸಿದ್ದಪಡಿಸಿದೆ ಎಂದು ಯೋಗಗುರು ಬಾಬಾ ರಾಮದೇವ ಮಂಗಳವಾರ ಹೇಳಿದ್ದಾರೆ.
ಅವರು ಪತಂಜಲಿ ಸಂಸ್ಥೆಯ ಪ್ರಧಾನ ಕಚೇರಿ ಉತ್ತರಾಖಂಡ್ ನ ಹರಿದ್ವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಕೊರೊನಿಲ್ ಔಷಧಿಯನ್ನು ಬಿಡುಗಡೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊರೊನಾ ಸೋಂಕಿನ ಚಿಕಿತ್ಸೆಗಾಗಿ ಇಡೀ ವಿಶ್ವ ಚುಚ್ಚುಮದ್ದು ಅಥವಾ ಔಷಧಕ್ಕಾಗಿ ಕಾಯುತ್ತಿತ್ತು. ನಾವು ಕರೊನಿಲ್ ಮತ್ತು ಸ್ವಾಸರಿ ಎಂಬ ಕರೊನಾ ಕಿಟ್ ಅನ್ನು ಬಿಡುಗಡೆ ಮಾಡುವ ಮೂಲಕ ಆ ಕಾಯುವಿಕೆಯನ್ನು ಕೊನೆಗೊಳಿಸಿದ್ದೇವೆ. ಇದು ಕರೊನಾ ಚಿಕಿತ್ಸೆಗೆ ಲಭ್ಯವಾಗುತ್ತಿರುವ ಮೊಟ್ಟಮೊದಲ ಆಯುರ್ವೇದ ಔಷಧವಾಗಿದೆ. ನಿಯಂತ್ರಿತ ಕ್ಲಿನಿಕಲ್ ಟ್ರಯಲ್ ಬಳಿಕ ಈ ಔಷಧವನ್ನು ತಯಾರಿಸಲಾಗಿದೆ. ಈ ಔಷಧವನ್ನು ಪಡೆಯುವ ಸೋಂಕಿತರು 3ರಿಂದ 7 ದಿನಗಳೊಳಗಾಗಿ ಗುಣಮುಖರಾಗುತ್ತಾರೆ ಎಂದು ಹೇಳಿದರು.
ಕರೊನಿಲ್ ಮತ್ತು ಸ್ವಾಸರಿ ಕಿಟ್ ಅನ್ನು ಮೊದಲಿಗೆ ದೆಹಲಿ, ಅಹಮದಾಬಾದ್ ಸೇರಿ ಹಲವು ನಗರಗಳಲ್ಲಿ 280 ಸೋಂಕಿತರನ್ನು ಬಳಸಿಕೊಂಡು ನಿಯಂತ್ರಿತ ಕ್ಲಿನಿಕಲ್ ಟ್ರಯಲ್ಗೆ ಒಳಪಡಿಸಲಾಯಿತು. ಈ ಔಷಧ ತೆಗೆದುಕೊಂಡ ಎಲ್ಲರೂ ಸಂಪೂರ್ಣವಾಗಿ ಗುಣಮುಖರಾದರು. ನಮ್ಮ ಔಷಧದ ಮೂಲಕ ಕೊರೊನಾ ವೈರಾಣುವನ್ನು ನಿಯಂತ್ರಿಸಿದಷ್ಟೇ ಅಲ್ಲ, ಅದರಿಂದ ಉಂಟಾಗುವ ಎಲ್ಲ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿತು ಎಂದು ತಿಳಿಸಿದರು.
ಪತಂಜಲಿಯ ಸಿಇಒ ಆಚಾರ್ಯ ಬಾಲಕೃಷ್ಣ ಮಾತನಾಡಿ, ಕೊರೋನಾ ಕಿಟ್ 545 ರೂ. ದರದಲ್ಲಿ ಲಭ್ಯವಿದೆ. ಈ ಕಿಟ್ನಲ್ಲಿನ ಔಷಧ 30 ದಿನಗಳವರೆಗೆ ಬರುತ್ತದೆ. ಪತಂಜಲಿಯ ಕೊರೋನಾ ಕಿಟ್ ಮುಕ್ತ ಮಾರುಕಟ್ಟೆಯಲ್ಲಿ ಇನ್ನೂ ಲಭ್ಯವಿಲ್ಲ. ಇನ್ನೊಂದು ವಾರದಲ್ಲಿ ಪತಂಜಲಿ ಸ್ಟೋರ್ಗಳಲ್ಲಿ ಇದು ಲಭ್ಯವಾಗಲಿದೆ. ಜತೆಗೆ ಆನ್ಲೈನ್ನಲ್ಲಿ ಖರೀದಿಸಲು ಬಯಸುವವರಿಗಾಗಿ ಆ್ಯಪ್ ಅನ್ನು ಕೂಡ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.