News

ಚೈನೀಸ್ ರಾಖಿ ಬದಲು ತರಕಾರಿ ಬೀಜಗಳ ರಾಖಿಗೆ ಭಾರಿ ಡಿಮ್ಯಾಂಡ್...!

29 July, 2020 6:28 PM IST By:

ಚೀನಾ ನಿರ್ಮಿತ ರಾಖಿ ಖರೀದಿಸಲು ನಿರಾಕರಿಸುತ್ತಿರುವ ಸಹೋದರಿಯರು ಈ ವರ್ಷ  ಸ್ಥಳೀಯವಾಗಿ ತಯಾರಿಸಿದ ರಾಖಿ ಖರೀದಿಸಲು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ.. ಅದರಲ್ಲಿ ತರಕಾರಿ ಬೀಜದಲ್ಲಿ ತಯಾರಿಸಿದ ರಾಖಿಗೆ ಡಿಮ್ಯಾಂಡೋ ಡಿಮ್ಯಾಂಡ್. ಇದೇನಿದು ತರಕಾರಿ ಬೀಜದಲ್ಲಿ ರಾಖಿ ಏನಿದು ಅಂದುಕೊಂಡಿದ್ದೀರಾ. ಹೌದು ಇಲ್ಲೊಬ್ಬ ಮಂಗಳೂರು ಜಿಲ್ಲೆಯ ಪಕ್ಷಿಕೆರೆಯ ಸಾಮಾಜಿಕ ಕಾರ್ಯಕರ್ತ ಪೇಪರ್ ಸೀಡ್ ಸಂಸ್ಥೆಯ ನಿತೀನ್ ವಾಸ (Nitin vas)ರವರು ರಕ್ಷಾ ಬಂಧನದ ಪ್ರಯುಕ್ತ ಪರಿಸರ ಸ್ನೇಹಿ, ಮರು ಉಪಯೋಗವಾಗುವಂತಹ ವಿವಿಧ ಬಗೆಯ ತರಕಾರಿ ಬೀಜಗಳನ್ನು ಅಳವಡಿಸಿ ರಾಖಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಈ ರಾಖಿಗಳಿಗೆ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚು ಬೇಡಿಕೆ ಬರುತ್ತಿದೆ. ಅಷ್ಟೇ ಅಲ್ಲ, ವ್ಯಾಟ್ಸ್ ಅಪ್, ಫೇಸ್ ಬುಕ್ (Facebook) ಮೂಲಕ ಸಹ ಬುಕ್ ಮಾಡಲಾಗುತ್ತಿದೆ. 

ಉದ್ಯಮಿ ನಿತಿನ್ ಅವರು ಟೊಮೆಟೊ, ಸೌತೆಕಾಯಿ, ಹರಿವೆ, ತುಳಸಿ ಬೀಜ ಗಳಿಂದ ರಾಖಿ(Rakhi) ಗಳನ್ನು ತಯಾರಿಸಿದ್ದಾರೆ. ರಕ್ಷಾ ಬಂಧನಕ್ಕೆ ಸಹೋದರಿಯರು ಕಟ್ಟುವ ರಾಖಿಗಳನ್ನು ಕೆಲ ದಿನಗಳ ಬಳಿಕ ಎಸೆಯುವ ಬದಲು, ಇವುಗಳಿಂದ ಹಸಿರು ಬೆಳೆಸಬಹುದು ಎನ್ನುವ ಉದ್ದೇಶದಿಂದ ಈ ರಾಖಿ ತಯಾರಿಸಲಾಗಿದೆ.

ರಾಖಿ ಹಬ್ಬದ ಮಹತ್ವ ಕನಿಷ್ಟ ಒಂದೆರಡು ತಿಂಗಳಾದರೂ ಇರಬೇಕು.  ನಾಲ್ಕು ದಿವಸ ರಾಖಿ ಕಟ್ಟಿ ಎಸೆಯಬಾರದು. ಅದಕ್ಕೆ ಗೌರವ ಸಿಗಬೇಕು. ಸಹೋದರ ಸಹೋದರಿಯರ ಪ್ರೀತಿ, ವಿಶ್ವಾಸ ಸಸಿಗಳಲ್ಲಿ ಅರಳುತ್ತಿರಲಿ ಎಂಬ ವಿಶ್ವಾಸ ಅವರದ್ದಾಗಿದೆ.

ಈ ಬಾರಿಯ ರಕ್ಷಾಬಂಧನ  ಬಾಂಧವ್ಯ ಗಟ್ಟಿಯಾಗಿಸುವುದರೊಂದಿಗೆ  ಪರಿಸರಕ್ಕೂ ಕೊಡುಗೆಯಾಗಲಿ. ರಾಖಿ ಬಳಸಿದ ನಂತರ ದಾರ ತೆಗೆದು  ರಾಖಿಯನ್ನು ಹೂವಿನ ಕುಂಡದಲ್ಲಿ ಹಾಕಿ ಮಣ್ಣಿನಿಂದ ಮುಚ್ಚಿದರೆ ಒಂದೆರಡು ದಿನಗಳಲ್ಲಿ ಬೀಜ ಮೊಳಕೆಯೊಡೆಯುತ್ತದೆ. ಪ್ರತಿ ದಿನ ನೀರು ಹಾಕಿ ಆರೈಕೆ ಮಾಡಿದರೆ ನಿಮ್ಮ ಬಾಂದವ್ಯವು ಗಿಡವಾಗಿ ಬೆಳೆಯತ್ತದೆ ಎನ್ನುತ್ತಾರೆ ನಿತೀನ್ ವಾಸ್.

ಈಗಾಗಲೇ ರಾಖಿ ತಯಾರಿಸಿದ್ದು, ಕೋವಿಡ್-19 ನಿರ್ಬಂಧದಿಂದಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹಾಗೂ ಜನರಿಗೆ ತಲುಪಿಸಲು ಸಮಸ್ಯೆಯಾಗಿದೆ. ಅನ್‌ಲೈನ್ (online), ವಾಟ್ಸ್‌ಆ್ಯಪ್‌ ಮೂಲಕ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದಾರೆ.  ಎಲ್ಲ ಉತ್ಪನ್ನಗಳು ಪ್ಲಾಸ್ಟಿಕ್ ರಹಿತವಾಗಿವೆ. ಬೀಜ, ಕಾಗದ ಟೆರಾಕೋಟಾದಿಂದ ರಾಖಿಗಳನ್ನು ತಯಾರಿಸಿದ್ದಾರೆ.  ಹೆಚ್ಚಿನ ಮಾಹಿತಿಗಾಗಿ ಮೊ: 91087 94870 ಕರೆ ಮಾಡಿ ಸಂಪರ್ಕಿಸಬಹುದು.

 ತರಕಾರಿ ಬೀಜಗಳನ್ನು ಉಪಯೋಗಿಸಿ ರಾಖಿ ತಯಾರಿಸಲಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಲ್ಲಿ ಬರುವ ವರ್ಷದಿಂದ ಇನ್ನೂ ಹೆಚ್ಚಿನ ವಿವಿಧ ಬಗೆಯ ಬೀಜಗಳನ್ನು ಬಳಸಿ, ರಾಖಿ ತಯಾರಿಸಲಾಗುವುದು. ವಿಶೇಷವಾಗಿ ಮಳೆಗಾಲದಲ್ಲಿ ರಾಖಿ ಹಬ್ಬ ಬರುವುದರಿಂದ ಅರಣ್ಯ ಇಲಾಖೆಯಿಂದ ಸಸಿಗಳ ಬೀಜ ಪಡೆದು ತಯಾರಿಸುತ್ತೇನೆ.

ನಿತಿನ್ ವಾಸ್

ಪೇಪರ್ ಸೀಡ್ ಸಂಸ್ಥೆಯ ಸಾಮಾಜಿಕ ಕಾರ್ಯಕರ್ತ