ರೈತರಿಗೆ ಎರೆಹುಳು ಗೊಬ್ಬರ ತಯಾರಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಆಗಸ್ಟ್ 15 ರಿಂದ ಅಕ್ಟೋಬರ್ 15ರವರೆಗೆ ರೈತಬಂಧು ಅಭಿಯಾನ ಹಮ್ಮಿಕೊಳ್ಳಲಾಗಿದೆ.ಈ ಅಭಿಯಾನದಡಿಯಲ್ಲಿ ಪ್ರತಿ ಗ್ರಾಪಂಗೆ ಕನಿಷ್ಟ 25 ಎರೆಹುಳು ತೊಟ್ಟಿಗಳನ್ನು ನಿರ್ಮಿಸಲಾಗುವುದು.
ರೈತರ ಆದಾಯ ದ್ವಿಗುಣಗೊಳಿಸುವುದಕ್ಕಾಗಿ ಸರ್ಕಾರವು ಕೃಷಿ ಯಂತ್ರೋಪಕರಣ ಖರೀದಿ, ಭೂಮಿ, ಖರೀದಿ, ಗಂಗಾ ಕಲ್ಯಾಣ ಯೋಜನೆ, ಸಿರಿಧಾನ್ಯಗಳಿಗೆ ಪ್ರೋತ್ಸಾಹ ಸೇರಿದಂತೆ ಹಲವಾರು ಯೋಜನೆಗಳಿಗೆ ಸಹಾಯಧನ ನೀಡುತ್ತಿದೆ. ಈಗ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಎರೆಹುಳು ಘಟಕ ನಿರ್ಮಾಣಕ್ಕೆ 27 ಸಾವಿರ ರೂಪಾಯಿಯವರೆಗೆ ನೀಡಲಾಗುವುದು
ರೈತ ಬಂಧು ಅಭಿಯಾನದಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ಕನಿಷ್ಟ 25 ಎರೆಹುಳು ಘಟಕ ನಿರ್ಮಿಸಲು ಗುರಿ ನೀಡಲಾಗಿದೆ. ರಾಜ್ಯದಲ್ಲಿ ಒಟ್ಟು 1,50,375 ಎರೆಹುಳು ಘಟಕ ನಿರ್ಮಾಣದ ಗುರಿ ಹಾಕಿಕೊಳ್ಳಲಾಗಿದೆ.
ತ್ಯಾಜ್ಯಯ ವಸ್ತುಗಳ ಸದ್ಬಳಕೆಯಿಂದಾಗಿ ಪರಿಸರ ಮಾಲಿನ್ಯ ಕಡಿಮೆಗೊಳಿಸಿ ಸ್ವಚ್ಛ ಪರಿಸರ ಸೃಷ್ಟಿಸಲು ಹಾಗೂ ರೈತರಲ್ಲಿ ಎರೆಹುಳು ಗೊಬ್ಬರ ಉತ್ಪಾದನೆ, ಬಳಕೆ ಮತ್ತು ಸಾವಯವ ಕೃಷಿಯ ಪ್ರಾಮುಖ್ಯತೆಯನ್ನು ಹೆಚ್ಚಿಸುವುದಕ್ಕಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಆಗಸ್ಟ್ 14ರವರೆಗೆ ಎರೆಹುಳು ಗೊಬ್ಬರ ತಯಾರಿಕೆ ತೊಟ್ಟಿ ನಿರ್ಮಾಣ ಹಾಗೂ ಗೊಬ್ಬರ ಉತ್ಪಾದನೆ ತಾಂತ್ರಿಕ ಕುರಿತು ಕೃಷಿ ಇಲಾಖೆ ಅಧಿಕಾರಿಗಳ ಮೂಲಕ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ, ಕಾಯಕ ಬಂಧುಗಳಿಗೆ ತರಬೇತಿ ಆಯೋಜಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.
ನರೇಗಾ ಯೋಜನೆಡಯಲ್ಲಿ ಎರಡು ಮಾದರಿಯ ಎರೆಹುಳು ಘಟಕ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು. 5.5*2.7*1.0 ಮೀಟರ್ ಅಳತೆಯ ಎರೆಹುಳು ಘಟಕಕ್ಕೆ 27 ಸಾವಿರ ರೂಪಾಯಿ ಹಾಗೂ 3.6*2.7*1.0 ಮೀಟರ್ ಅಳತೆಯ ಘಟಕಕ್ಕೆ 21 ಸಾವಿರ ರೂಪಾಯಿ ವೆಚ್ಚವಾಗಲಿದೆ.
ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ದಿನಗೂಲಿ ಒದಗಿಸುವುದರ ಜೊತೆಗೆ ಎರೆಹುಳು ಎರೆಹುಳು ಕೃಷಿ ಪ್ರೋತ್ಸಾಹಿಸಲಾಗುತ್ತಿದೆ. ರೈತ ಕುಟುಂಬಕ್ಕೆ ಆದಾಯ ಸೃಜಿಸಿ ಸಾವಯವ ಗೊಬ್ಬರ ಬಳಕೆಯ ಮಹತ್ವ ಸಾರಲಾಗುತ್ತಿದೆ.
ಕೃಷಿ ಇಲಾಖೆ ಸಹಯೋಗದೊಂದಿಗೆ ನರೇಗಾ ಯೋಜನೆ ಬಳಸಿಕೊಂಡು ಎರೆಹುಳು ತೊಟ್ಟಿ ನಿರ್ಮಿಸಲಾಗುತ್ತಿದೆ. ರೈತರ ಜಮೀನಿನಲ್ಲಿ ಬರುವ ಕಸಕಡ್ಡಿ ಒಂದೆಡೆ ಸೇರಿಸಿ ಎರೆಹುಳು ಬಳಸಿಕೊಂಡು ಫಲವತ್ತಾದ ಗೊಬ್ಬರ ತಯಾರಿಸಲಾಗುತ್ತದೆ. ಎರೆಹುಳು ಗೊಬ್ಬರ ಬಳಕೆಯಿಂದಾಗಿ ಭೂಮಿಯ ಫಲವತ್ತತೆ ಹೆಚ್ಚಿ, ಉತ್ತಮ ಆದಾಯ ಪ್ರಾಪ್ತಿಯಾಗುತ್ತದೆ ಎಂಬ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ರೈತಬಂಧು ಅಭಿಯಾನದ ಯಶಸ್ವಿ ಅನುಷ್ಠಾನಕ್ಕಾಗಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ.