News

ಕರಾವಳಿಯಲ್ಲಿ ಹಲವೆಡೆ ಮಳೆ- ರೈತರಿಗ ನಷ್ಟ

19 February, 2021 9:45 AM IST By:
ಸಾಂದರ್ಭಿಕ ಚಿತ್ರ

ನಾಲ್ಕು ದಿನಗಳ ಹಿಂದೆಯೇ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿದಂತೆ ಶುಕ್ರವಾರ ಬೆಳ್ತಂಗಡಜಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಇದರೊಂದಿಗೆ  ರಾಜ್ಯದ ಚಿತ್ರದುರ್ಗ, ಮೈಸೂರು, ಧಾರವಾಡ ಜಿಲ್ಲೆಗಳ ಕೆಲವೆಡೆ ಗುರುವಾರ ಅಕಾಲಿಕ ಮಳೆ ಸುರಿದಿದೆ.

ಕಳೆದೆರಡು ದಿನಗಳಲ್ಲಿ ಸುರಿದ ಅಕಾಲಿಕ ಮಳೆಯು ಕೃಷಿಕರಿಗೆ ಮತ್ತೆ ಕಂಟಕವಾಗಿ ಪರಿಣಮಿಸಿದ್ದು, ಭತ್ತ, ಅಡಿಕೆ ಸೇರಿದಂತೆ ಇತರ ಬೆಳೆಗಳಿಗೆ ಹಾನಿಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ರಾಗಿ ಫಸಲು ನೀರು ಪಾಲಾಗಿದೆ. ಹುಬ್ಬಳ್ಳಿ, ಮೈಸೂರಿನಲ್ಲಿ ಗುಡುಗು ಸಹಿತ ಮಳೆಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಗುರುವಾರ ಸಂಜೆ ಗುಡುಗು ಸಹಿತ ಸುರಿದ ಮಳೆಗೆ, ಚಿಕ್ಕಜಾಜೂರಿನಲ್ಲಿ ಒಕ್ಕಣೆ ಮಾಡುತ್ತಿದ್ದ ರಾಗಿ ನೀರುಪಾಲಾಯಿತು. 

 ಹೊಸದುರ್ಗ, ಹಿರಿಯೂರು, ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನ ಹಲವೆಡೆ ಸಾಧಾರಣ ಮಳೆ ಸುರಿಯಿತು. ರಸ್ತೆ, ಚರಂಡಿಯಲ್ಲಿ ನೀರು ಹರಿಯಿತು. ಅಡಿಕೆ ಮತ್ತು ತೆಂಗಿನ ತೋಟಗಳಿಗೆ ಮಳೆ ತಂಪೆರೆಯಿತು.

ಉತ್ತರ ಕರ್ನಾಟಕದಲ್ಲಿ ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಧಾರವಾಡ ಜಿಲ್ಲೆಯ ವಿವಿಧೆಡೆ ಗುರುವಾರ ಮಧ್ಯಾಹ್ನ ಗುಡುಗು ಸಹಿತ ಮಳೆ ಸುರಿಯಿತು. ಬೆಳಗಾವಿ, ಬೈಲಹೊಂಗಲ, ನಿಪ್ಪಾಣಿ, ಖಾನಾಪುರ, ಸವದತ್ತಿ, ಗೋಕಾಕ ಹಾಗೂ ಎಂ.ಕೆ.ಹುಬ್ಬಳ್ಳಿ ಭಾಗದಲ್ಲಿ ಮಳೆಯಾಗಿದೆ.

ಬ್ಯಾಡಗಿಯಲ್ಲಿ ಸಂಜೆ ಗುಡುಗು ಸಹಿತ ಮಳೆ ಸುರಿದ ಪರಿಣಾಮ ಮೆಣಸಿನಕಾಯಿ ಚೀಲಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ರೈತರು ವರ್ತಕರು ಹರಸಾಹಸ ಪಟ್ಟರು. ಮೈಸೂರು ಭಾಗದಲ್ಲಿ ಮಳೆ ಮೈಸೂರು, ಮಂಡ್ಯ, ಹಾಸನ ಜಿಲ್ಲೆಯ ಹಲವೆಡೆ ಗುರುವಾರ ಸಂಜೆ ಗುಡುಗು–ಸಿಡಿಲು ಸಹಿತ ತುಂತುರು ಮಳೆಯಾಗಿದೆ.

ಸಿಡಿಲು ಬಡಿದು ವ್ಯಕ್ತಿ ಸಾವು

ಬೆಳಗಾವಿ ತಾಲ್ಲೂಕಿನ ನಿಡಗಲ್ ಗ್ರಾಮದಲ್ಲಿ ಗುರುವಾರ ಸಿಡಿಲು ಬಡಿದು ಇಟ್ಟಿಗೆ ತಯಾರಿಸುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಅಸು ಗ್ರಾಮದ ನಿವಾಸಿ ಗುರುನಾಥ ಪಾಂಡುರಂಗ ನಾರ್ವೇಕರ್ (20)ಎಂದು ಗುರುತಿಸಲಾಗಿದೆ.