News

ಮಹಾರಾಷ್ಟ್ರದಲ್ಲಿ ಬಿರುಸಿನ ಮಳೆಗೆ ಕರ್ನಾಟಕದ ಹಲವು ನದಿಗಳು ಅಪಾಯಮಟ್ಟದತ್ತ

11 July, 2020 12:53 PM IST By:

ರಾಜ್ಯದಲ್ಲಿ ಗುರುವಾರಕ್ಕೆ ಹೋಲಿಸಿದರೆ ಶುಕ್ರವಾರ ಮಳೆಯ ಪ್ರಮಾಣ ರಾಜ್ಯಾದ್ಯಂತ ಕ್ಷೀಣಿಸಿದೆ. ಆದರೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯಲ್ಲಿನ ಪ್ರಮುಖ ನದಿಗಳು ಇನ್ನೂ ತುಂಬಿ ಹರಿಯುತ್ತಿವೆ. ಕೃಷ್ಣಾ ನದಿಯಲ್ಲಿಯೂ ನೀರಿನ ಹರಿವು ಹೆಚ್ಚಿದೆ. ಬೆಳಗಾವಿ ಜಿಲ್ಲೆಯಲ್ಲಿ ಏಳು ಬ್ಯಾರೇಜ್‍ಗಳು ಈಗಲೂ ಜಲಾವೃತವಾಗಿವೆ.

ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾಗೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿ, ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕಿನಲ್ಲಿ 7 ಬ್ರಿಡ್ಜ್‌ ಕಮ್‌ ಬ್ಯಾರೇಜ್‌ಗಳು ಜಲಾವೃತವಾಗಿವೆ. ದೂಧ್‌ಗಂಗಾ ನದಿಯಿಂದ 17,952 ಕ್ಯುಸೆಕ್‌ ಹಾಗೂ ರಾಜಾಪುರದಿಂದ 53,500 ಕ್ಯುಸೆಕ್‌ ನೀರು ಸೇರಿ 71,452 ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಸೇರುತ್ತಿದೆ. 

ಆಲಮಟ್ಟಿ ಜಲಾಶಯಕ್ಕೆ ಒಂದೇ ದಿನ 6.23 ಟಿಎಂಸಿ ನೀರು ಹರಿದುಬಂದಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ 24 ಗಂಟೆಗಳಲ್ಲಿ ಸುಮಾರು 3 ಅಡಿ ನೀರು ಹರಿದು ಬಂದಿದೆ. ಶುಕ್ರವಾರ ಒಳಹರಿವಿನ ಪ್ರಮಾಣ 26,007 ಕ್ಯುಸೆಕ್‌ ಇತ್ತು.

ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದರಿಂದ ಶಿವಮೊಗ್ಗದ ತುಂಗಾ ಜಲಾಶಯದಿಂದಲೂ ನದಿಗೆ ನೀರು ಹರಿಸಲಾಗುತ್ತಿದೆ.

ಉತ್ತರ ಕನ್ನಡ  ಜಿಲ್ಲೆಯಲ್ಲಿ ಶುಕ್ರವಾರ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಕಲಬುರಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಯ ಕೆಲವಡೆ ಶುಕ್ರವಾರ ಅಲ್ಲಲ್ಲಿ ಚದುರಿದ ಮಳೆಯಾಯಿತು. ಶಿವಮೊಗ್ಗ ಜಿಲ್ಲೆಯಲ್ಲಿ ಸಾಗರ, ಹೊಸನಗರ, ಶಿಕಾರಿಪುರ, ಸೊರಬ, ತೀರ್ಥಹಳ್ಳಿಯಲ್ಲಿ ಸಾಧಾರಣ ಮಳೆಯಾಗಿದೆ.