News

ಪೂರ್ವಜರು ಮಳೆ ನಕ್ಷತ್ರಗಳ ಮೇಲೆ ಕಟ್ಟಿದ ಗಾದೆಗಳ ಮಾಹಿತಿ ಇಲ್ಲಿದೆ

11 May, 2021 4:57 PM IST By:

ಹಿಂದೆ ಪೂರ್ವಜರು ಮಳೆಯ ನಕ್ಷತ್ರಗಳ ಮೇಲೆ ಹಲವಾರು ಗಾದೆಗಳನ್ನು ಕಟ್ಟಿದ್ದಾರೆ. ಅವು ಅಕ್ಷರಶಃ ಸತ್ಯವಾಗಿದೆ. ವಿಜ್ಞಾನಿಗಳನ್ನು ಮೀರಿ ತಮ್ಮ ಅನುಭವದ ಮೇಲೆ ಹಲವಾರು ಗಾದೆ ಮಾತುಗಳನ್ನು ಹೇಳಿದ್ದಾರೆ. ರೈತ ಬಾಂಧವರಿಗೆ ಮೆಲಕು ಹಾಕುವುದಕ್ಕಾಗಿ ಇಲ್ಲಿ ಕೆಲವನ್ನು ತಿಳಿಸಲಾಗಿದೆ.

ಪಾರಂಪರಿಕ ಇಂಥ ಜ್ಞಾನ ಋತು ನಿಯಮಕ್ಕನುಸಾರ ಬೆಳೆದು ಬಂದಿತ್ತು. ಗತಿಸಿದ ವರ್ಷಗಳ ಅನುಭವವೇ ಇದಕ್ಕೆ ಆಧಾರ. ಇಂತಿಂಥ ಮಳೆ ಇಂಥ ದಿನಗಳಲ್ಲಿ ಬರುತ್ತದೆ ಎಂದು ಗುರುತಿಸಿ ನಮೂದಿಸಿದ ಪಂಚಾಂಗವೇ ರೈತನ ಕೃಷಿ ಕಾರ್ಯದ ವೇಳಾಪಟ್ಟಿಗೆ ಆಧಾರವಾಗಿತ್ತು. ಅದರಂತೆಯೇ ರೈತ ತನ್ನ ಕೃಷಿಕಾರ್ಯ ಮುಂದುವರಿಸುತ್ತಿದ್ದನು. ನಂತರ ರೈತರೇ ತಮ್ಮ ಅನುಭವದ ಮೇಲೆ ಹಲವಾರು ಗಾದೆಮಾತುಗಳನ್ನು ಕಟ್ಟಿದ್ದಾರೆ.

ಈ ಕೆಳಗೆ ನಮದಿಸಿರುವ ಕೆಲವು ಗಾದೆಗಳನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು, ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ ಹಾಗೂ ಜಿಲ್ಲಾ ಕೃಷಿ ಹವಾಮಾನ ಘಟಕ ಯೋಜನೆಯ ಹಿರಿಯ ವಿಜ್ಞಾನಿಗಳು ಕೆಲವನ್ನು ಸಂಗ್ರಹಿಸಿದ್ದಾರೆ.  ಈಗಲೂ ರೈತಬಾಂಧವರ ಬಾಯಲ್ಲಿ ಈ ಗಾದೆಗಳು ಕೇಳಿಬರುತ್ತದೆ. ಈ ವರ್ಷದ ಮಳೆ ನಕ್ಷತ್ರಗಳ ಕಾಲಾವಧಿ ಹಾಗೂ ಗಾದೆಗಳನ್ನು ಇಲ್ಲಿ ನೀಡಲಾಗಿದೆ.

ಅಶ್ವಿನಿ- (ಏಪ್ರೀಲ್ 13 ರಿಂದ ಏಪ್ರೀಲ್ 26 ರವರೆಗೆ)  ಅಶ್ವಿನಿ ಮಳೆ ಬಿದ್ದರೆ ಅರಿಶಿಣಕ್ಕೆ ಮೇಲು, ಅಶ್ವೀನಿ ಸನ್ಯಾಸಿನೀ,

ಭರಣಿ – (ಏಪ್ರೀಲ್ 27 ರಿಂದ ಮೇ 10ರವರೆಗೆ) ಭರಣಿಯಲ್ಲಿ ಮಳೆಯಾದರೆ ಧರಣಿಯೆಲ್ಲಾ ಬೆಳೆ,ಭರಣಿ ಸುರಿದರೆ ಧರಣಿ ಬದುಕೀತು

ಕೃತಿಕಾ- ( ಮೇ 11 ರಿಂದ ಮೇ 24ರವರೆಗೆ) ಕೃತಿಕ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು

ರೋಹಿಣಿ- (ಮೇ 25 ರಿಂದ ಜೂನ್ 7ರವರೆಗೆ) ರೋಹಿಣಿ ಮಳೆ ಓಣಿಯೆಲ್ಲಾ ಕೆಸರು

ಮೃಗಶಿರ -(ಜೂನ್ 8 ರಿಂದ ಜೂನ್ 21ರವರೆಗೆ) ಮೃಗಶಿರೆಯಲ್ಲಿ ಮಿಸುಕಾಡದೆ ನೆರೆ ಬಂತು

ಆರಿದ್ರಾ (ಜೂನ್ 22 ರಿಂದ ಜುಲೈ 4ರವರೆಗೆ) ಆರಿದ್ರಾ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗಲ್ಲ, ಆರಿದ್ರಾ ಮಳೆ ಆರದೆ ಹುಯ್ಯುತ್ತೇ, ಆರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ, ಅಮ್ಮನ ಮನಸ್ಸು ಬೆಲ್ಲದ ಹಾಗೆ, ಆರಿದ್ರಾ ಹನಿ ಕಲ್ಲಿನ ಹಾಗೆ.

ಆಶ್ಲೇಷ -ಆಗಸ್ಟ್ 2 ರಿಂದ ಆಗಸ್ಟ್ 15ರವರೆಗೆ) ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ, ಅಸಲೆ ಮಳೆ ಕೈತುಂಬಾ ಬೆಳೆ, ಅಸಲೆ ಮಳೆ ಬಿದ್ದು ಸಸಿಲೆ(ಸಣ್ಣ ಮೀನು) ಬೆಟ್ಟಕ್ಕೇರಿತು

ಮಘ- (ಆಗಸ್ಟ್ 16 ರಿಂದ ಆಗಸ್ಟ್ 29ರವರೆಗೆ) ಬಂದರೆ ಮಗೆ ಹೋದರೆ ಹೊಗೆ, ಬಂದರೆ ಮಘೆ ಇಲ್ಲದಿದ್ದರೆ ಧಗೆ, ಮಘೆ ಮಳೆ ಬಂದಷ್ಟು ಒಳ್ಳೇದು, ಮನೆಮಗ ಉಂಡಷ್ಟು ಒಳ್ಳೇದು.