ಕಲ್ಯಾಣ ಕರ್ನಾಟಕ ಭಾಗದಲ್ಲಿ ಶನಿವಾರವೂ ಉತ್ತಮ ಮಳೆ (heavy rain) ಸುರಿದಿದೆ. ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ಸುರಿದ ಮಳೆಗೆ ಹಳ್ಳಗಳು, ಚೆಕ್‌ಡ್ಯಾಂ, ಕೃಷಿ ಹೊಂಡಗಳು ಭರ್ತಿಯಾದರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಬನ್ನಟ್ಟಿ ಗ್ರಾಮದ ಬಳಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ (Bridge) ಶುಕ್ರವಾರ ಕೊಚ್ಚಿ ಹೋಗಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಬೃಹತ್ ಮರ-ಗಿಡಗಳು ಧರೆಗೆ ಉರುಳಿ ಬಿದ್ದಿವೆ. ಕೃಷಿ ಭೂಮಿಗಳು ಜಲಾವೃತವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಮೆಕ್ಕೆಜೋಳ, ತೊಗರಿ, ಜೋಳ, ಕಬ್ಬು ಸೇರಿದಂತೆ ಇತರ ಬೆಳೆಗಳು (crops) ಹಾನಿಯಾಗಿವೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಸುರಿದ ಭಾರಿ ಮಳೆಗೆ ಅಲೆಮಾರಿ ಬುಡ್ಗ ಜಂಗಮ ಕಾಲೊನಿಯ 80 ಗುಡಿಸಲುಗಳಿಗೆ ಹಾನಿಯಾಗಿದೆ. ಜಂಬುನಾಥಹಳ್ಳಿ ಗುಡ್ಡದ ಹಳ್ಳದ ನೀರು ಹರಿದು ಬಂದು ಅವಾಂತರ ಸೃಷ್ಟಿಯಾಗಿದೆ. ಬುಡ್ಗ ಜಂಗಮ ಕಾಲೊನಿ, ಆಜಾದ್ ನಗರ, ಶಾದಿ ಮಹಲ್ ಬಡಾವಣೆಯ ಮನೆಗಳಿಗೆ ನೀರು ನುಗ್ಗಿದೆ.
ಜಾನುವಾರು ಬಲಿ: ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕಾನಹೊಸಹಳ್ಳಿ ಹೋಬಳಿಯ ಶ್ರೀಕಂಠಾಪುರ ತಾಂಡಕ್ಕೆ ಹಳ್ಳದ ನೀರು ನುಗ್ಗಿ ಇಡೀ ಗ್ರಾಮ ಜಲಾವೃತವಾಗಿದೆ. 24 ಕುರಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. 45ಕ್ಕೂ ಹೆಚ್ಚು ಮನೆ ಜಖಂಗೊಂಡಿವೆ ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಒಂದು ಎತ್ತು, ಒಂದು ಹಸು, ಎಂಟು ಕುರಿ ಹಾಗೂ 54 ಕೋಳಿಗಳು ಸತ್ತಿವೆ.