ದೆಹಲಿ, ಉತ್ತರ ಪ್ರದೇಶ, ಪಂಜಾಬ, ಹರಿಯಾಣ ಮಧ್ಯಪ್ರದೇಶ ಸೇರಿದಂತೆ ಮತ್ತಿತರ ರಾಜ್ಯಗಳಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಪಕ್ಕದ ಪಾಕಿಸ್ತಾನದ ಮೇಲೆ ಪಶ್ಚಿಮದ ಪ್ರಕ್ಷುಬ್ಧತೆ ಇದ್ದು, ಈ ವ್ಯವಸ್ಥೆಯ ಪ್ರಭಾವದಿಂದ ಉಂಟಾದ ಚಂಡಮಾರುತಮಾರುತಗಳು ವಾಯುವ್ಯ ರಾಜಸ್ಥಾನ ಮತ್ತು ಅದರ ಅಕ್ಕಪಕ್ಕದ ಭಾಗಗಳಲ್ಲಿವೆ.
ಬಯಲು ಸೀಮೆಯಲ್ಲಿ, ಪಂಜಾಬ್, ಹರಿಯಾಣ, ದೆಹಲಿ ಎನ್ ಸಿಆರ್ ನ ಬಹುತೇಕ ಭಾಗಗಳು, ಉತ್ತರ ಪ್ರದೇಶದ ಬಹುತೇಕ ಭಾಗಗಳು ಮತ್ತು ಮಧ್ಯಪ್ರದೇಶದ ಬಹುತೇಕ ಎಲ್ಲಾ ಭಾಗಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಮಳೆ ವಾತಾವರಣ ಇದೆ. ಹವಾಮಾನ ಇಲಾಖೆಯ ಪ್ರಕಾರ, ಈ ಎಲ್ಲಾ ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆ ಅಥವಾ ತುಂತುರು ಮಳೆ ಯಾಗಬಹುದು. ಕೆಲವೆಡೆ ಆಲಿಕಲ್ಲು ಮಳೆಯಾಗಬಹುದು..
ರಾಜ್ಯದ ಮೈಸೂರು, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಕೆಲವೆಡೆ ಗುರುವಾರ ಮಳೆ ಸುರಿದಿದೆ. ಶಿರಸಿ ನಗರವೂ ಸೇರಿದಂತೆ ತಾಲ್ಲೂಕಿನ ಹಲವೆಡೆ ಗುರುವಾರ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿಯಿತು. ಒಂದು ತಾಸಿಗೂ ಹೆಚ್ಚು ಕಾಲ ರಭಸದ ಗಾಳಿ ಬೀಸಿತು.
ಇಲ್ಲಿನ ಅಶ್ವಿನಿ ಸರ್ಕಲ್ ಬಳಿ ರಸ್ತೆ ಮೇಲೆ ಒಂದು ಅಡಿಗೂ ಹೆಚ್ಚು ನೀರು ನಿಂತಿದ್ದರಿಂದ ವಾಹನ ಗಳ ಸಂಚಾರಕ್ಕೆ ತೊಂದರೆ ಆಯಿತು. ಶಿವ ದೇವಾಲಯಗಳಿಗೆ ಭಕ್ತರು ಮಳೆಯಲ್ಲೇ ನೆನೆಯುತ್ತ ತೆರಳಿದರು. ಮಳೆ ಕಾರಣಕ್ಕೆ ಮಧ್ಯಾಹ್ನದ ನಂತರ ಶಿವತಾಣಗಳಲ್ಲಿ ಭಕ್ತರ ಸಂಖ್ಯೆ ಇಳಿಮುಖವಾಯಿತು. ಸಿದ್ದಾಪುರ ಪಟ್ಟಣ ಹಾಗೂ ಕೆಲವು ಹಳ್ಳಿಗಳಲ್ಲಿ ಮಳೆ ಸುರಿದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೆಂಜಿಗೆ, ಸಬ್ಬೇನಹಳ್ಳಿ, ಹೆಸಗೋಡು, ಬಿ. ಹೊಸಳ್ಳಿ, ತಳವಾರ, ಕುಂದೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಗುಡುಗು ಸಹಿತ ಅರ್ಧ ತಾಸಿಗೂ ಅಧಿಕ ಮಳೆ ಸುರಿಯಿತು
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಒಂದು ಗಂಟೆ ಸಾಧಾರಣವಾಗಿ ಸುರಿದಿದ್ದು, ಕೆ.ಆರ್.ನಗರ, ಎಚ್.ಡಿ.ಕೋಟೆ, ಹುಣಸೂರು ತಾಲ್ಲೂಕಿನ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕೆಲ ಸಮಯ ಭಾರಿ ಮಳೆ ಸುರಿದಿದೆ. ದಾವಣಗೆರೆ ಜಿಲ್ಲೆಯ ಅರಸೀಕೆರೆ ಹೋಬಳಿಯ ಉಚ್ಚಂಗಿದುರ್ಗದ ಸುತ್ತಮುತ್ತ ಗುರುವಾರ ಸಂಜೆ ತುಂತುರು ಮಳೆಯಾಗಿದೆ. ಬೇಸಿಗೆ ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಸಾರ್ವಜನಿಕರಿಗೆ ಮಳೆ ಹನಿ ಸಂತಸ ಮೂಡಿಸಿತು.