ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದ ಸುಮಾರು 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುಡುಗು ಮಿಂಚಿನ ಮಳೆಯಾಗುವ ಸಾಧ್ಯತೆಯಿದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ 31ರವರೆಗೆ ಗುಡುಗುಸಿಡಿಲು ಸಹಿತ ಮಳೆಯಾಗಲಿದೆ.
ನದಿ ಸುತ್ತಲಿನ ಜನರಿಗೆ ಸೂಚನೆ
ಕಾರಂಜಾ ಜಲಾಶಯದಿಂದ ಭಾಲ್ಕಿ, ಔರಾದ್ ಹಾಗೂ ಕಮಲನಗರ ಪಟ್ಟಣಗಳಿಗೆ ಮಾರ್ಚ್ 28 ರಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಅದ್ದರಿಂದ ನೀರು ಬಿಡುವ ಪ್ರಯುಕ್ತ ಜಲಾಶಯದ ಕೆಳ ಪಾತ್ರ, ಸುತ್ತಲಿನ ಜನರು ನದಿಪಾತ್ರಕ್ಕೆ ಇಳಿಯಬಾರದು ಎಂದು ಕಾರಂಜಾ ಜಲಾಶಯದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಬಿರುಗಾಳಿ, ಸಿಡಿಲು ಗುಡುಗಿನ ಅಬ್ಬರದ ಮಳೆಗೆ ಅನೇಕ ಕಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಉರುಳಿ ಹಾನಿಯಾಗಿದ್ದಲ್ಲದೆ, ಗ್ರಾಮೀಣ ಪ್ರದೇಶದ ಕೆಲವೆಡೆ ತೋಟ, ಕೃಷಿಗೂ ಬಿರುಗಾಳಿಯಿಂದ ತೀವ್ರ ಹಾನಿಯಾಗಿರುವ ಕುರಿತು ವರದಿಯಾಗಿದೆ.
ಸೋಮವಾರ ರಾತ್ರಿ2 ಗಂಟೆಗೆ ಆರಂಭವಾದ ರಭಸದ ಮಳೆ ಸುಮಾರು ಒಂದು ಗಂಟೆ ಕಾಲ ಬಿರುಗಾಳಿಯೊಂದಿಗೆ ಸುರಿದು ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು. ನಗರದ ಬೋಳೂರಿನಲ್ಲಿ ವಿದ್ಯುತ್ ಕಂಬ ಬಿದ್ದು ನಿಂತಿದ್ದ ಕಾರಿಗೆ ಹಾನಿಯಾಗಿದೆ. ಹ್ಯಾಟ್‍ಹಿಲ್‍ನಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಬೋಂದೆಲ್ ಸಮೀಪದ ಕಷ್ಣನಗರದಲ್ಲಿ ಮಳೆಯ ಆರ್ಭಟಕ್ಕೆ ಮನೆಗೆ ನೀರು ನುಗ್ಗಿದೆ. ನಗರದಲ್ಲಿ 50ಕ್ಕೂ ಅಧಿಕ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಪಡೀಲ್, ಮರೋಳಿ, ಕೆಪಿಟಿ ಸೇರಿದಂತೆ ವಿವಿಧೆಡೆ ಹೆದ್ದಾರಿಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.
ಕತ್ತಲ ರಾತ್ರಿ: ಬಿರುಗಾಳಿಯಿಂದ ವಿದ್ಯುತ್ ಕಂಬಗಳು ಉರುಳಿ ವ್ಯತ್ಯಯಗೊಂಡ ವಿದ್ಯುತ್ ನಗರದ ಬಹುತೇಕ ಭಾಗಗಳಲ್ಲಿ ಮಂಗಳವಾರ ಬೆಳಗ್ಗಿನವರೆಗೂ ಮುಂದುವರಿದಿತ್ತು. ಕೆಲವೆಡೆ ಮಾತ್ರ ರಾತ್ರಿ 12-1 ಗಂಟೆಗೆ ವಿದ್ಯುತ್ ಬಂದರೆ ಹೆಚ್ಚಿನ ಕಡೆಗಳಲ್ಲಿ ರಾತ್ರಿಯಿಡೀ ಕಗ್ಗತ್ತಲು ಆವರಿಸಿತ್ತು.