News

ಜೂನ್ 28 ರಂದು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ- ಆರೇಂಜ್ ಅಲರ್ಟ್

27 June, 2021 7:04 PM IST By:

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಜೂನ್ 28 ರಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನದಲ್ಲಿ ಭಾರೀ  ಮಳೆಯಾಗುವ ಸಾಧ್ಯತೆಯಿರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮುಂಗಾರು ಆಗಮನದ ನಂತರ ಬಿರುಸುಪಡೆದುಕೊಂಡಿದ್ದ ಮಳೆ  ರಾಜ್ಯದಲ್ಲಿ ಕಳೆದೊಂದು ವಾರದಿಂದ ಕೊಂಚ ಕಡಿಮೆಯಾಗಿತ್ತು. ಆದರೆ, ಮತ್ತೆಮಳೆಯ ಆರ್ಭಟ ಶುರುವಾಗಲಿದ್ದು, 3 ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆಯಿರುವುದರಿಂದ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದಲ್ಲಿ ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಚದುರಿದ ಮಳೆಯೂ ಆಗುತ್ತಿದೆ. ಬೆಂಗಳೂರಿನಲ್ಲಿ ಕೂಡ ಮಳೆಯಾಗುವ ಸಾಧ್ಯತೆಯಿದೆ..
ಜೂನ್ 28 ರಿಂದ ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾದರೆ, ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮಂಡ್ಯ, ಚಾಮರಾಜನಗರ, ಮಂಡ್ಯ, ಮೈಸೂರು, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಳ್ಳಂಬೆಳಿಗ್ಗೆ ಮಳೆಯ ಸಿಂಚನ

ಕಲಬುರಗಿ ನಗರದಲ್ಲಿ ಭಾನುವಾರ ಬೆಳಗ್ಗೆಯೇ ಮೋಡ ಮುಸುಕಿದ್ದ ವಾತಾವರಣವಿದ್ದು, ಬೆಳಗ್ಗೆಯೇ ಮಳೆಯ ಸಿಂಚನವಾಯಿತು. ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆ ಸೇರಿದಂತೆ ವಿವಿಧೆಡೆ ಮಳೆಯ ಸಿಂಚನವಾಯಿತು.

ಭಾನುವಾರ ವಾರಾಂತ್ಯದ ಲಾಕ್‍ಡೌನ್ ಆಗಿದ್ದರಿಂದ ಬಹುತೇಕ ವಾಣಿಜ್ಯ ಚಟುವಟಿಕೆ ಸ್ಥಗಿತಗೊಂಡಿವೆ.ಜೊತೆಗೆ ರವಿವಾರವೂ ಆಗಿದ್ದರಿಂದ ರಸ್ತೆಯಲ್ಲಿ ಜನಸಂಚಾರ ವಿರಳವಾಗಿದೆ. ಅಗತ್ಯ ಕೆಲಸಕ್ಕೆ ಹೊರಗೆ ಬಂದವರು ಮಳೆಯ ಹನಿಯಿಂದ ತಪ್ಪಿಸಿಕೊಳ್ಳಲಾರದೇ ಮನೆ ಕಡೆಗೆ ದೌಡಾಯಿಸಿದರು.
ಆರದೇ ಬರುವ ಆರಿದ್ರಾ: ಆರಿದ್ರಾ ಮಳೆ ಆರದೇ ಬರುತ್ತದೆ ಎಂದು ಗಾದೆ ಜನಜನಿತವಾಗಿದೆ.ಈ ಮಳೆಯಾದರೂ ಸರಿಯಾಗಿ ಬಿದ್ದರೆ ಕೃಷಿ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳಬಲ್ಲವು ಎಂಬ ನಿರೀಕ್ಷೆಯಿದೆ.