News

ರಾಜ್ಯದಲ್ಲಿ ಇಂದಿನಿಂದ ಐದು ಮಳೆಯಾಗುವ ಸಾಧ್ಯತೆ-ಯೆಲ್ಲೋ ಅಲರ್ಟ್ ಘೋಷಣೆ

11 May, 2021 10:20 AM IST By:

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ನಗರದ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.ಕರಾವಳಿ, ಚಿಕ್ಕಮಗಳೂರು, ಕೊಡಗು, ದಾವಣಗೆರೆ, ಚಾಮರಾಜನಗರ, ಬೆಳಗಾವಿ, ಕೊಪ್ಪಳ ಸೇರಿ ಕೆಲವು ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಮುಂದಿನ 24 ಗಂಟೆಗಳಲ್ಲಿ ಗುಡುಗು ಸಹಿತ ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ಐದು ದಿನಗಳ ಕಾಲ ಮಳೆ ಮುಂದುವರೆಯಲಿದೆ.

ಮಲೆನಾಡು, ಕರಾವಳಿಯಲ್ಲಿ ಮೇ 11 ರಿಂದ ಭಾರಿಮಳೆಯಾಗುವ ಮುನ್ನೂಚನೆ ನೀಡಿರುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ತುಮಕೂರಿನಲ್ಲಿ ಮೇ 13 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಧ್ಯಾಹ್ನದವರೆಗೆ ಬಿಸಿಲು ಇದ್ದರೆ, ನಂತರ ಮೋಡ ಮುಸುಕಿದ ವಾತಾವರಣ ಇರಲಿದೆ. ಈ ನಡುವೆ ಚದುರಿದಸಾಧಾರಣ ಮಳೆಯಾಗಲಿದೆ.

ಬೆಂಗಳೂರಿನಲ್ಲಿ 2.98 ಮಿ.ಮೀ, ದಾವಣಗೆರೆಯಲ್ಲಿ 2.41 ಮಿ.ಮೀ, ಕೊಪ್ಪಳದಲ್ಲಿ 2.31 ಮಿ.ಮೀಟರ್, ಗದಗ ಜಿಲ್ಲೆಯಲ್ಲಿ 4.68 ಮಿ.ಮೀ ಮಳೆಯಾಗಿದೆ. ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಕೆಲವು ಕಡೆ ಹಾಗೂ ಉತ್ತರ ಒಳನಾಡಿನ ಕೆಲವು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಬಳ್ಳಾರಿ, ವಿಜಯನಗರ, ರಾಯಚೂರು, ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನೆಲಬೊಮ್ಮನಹಳ್ಳಿಯಲ್ಲಿ ಸಿಡಿಲಿಗೆ 18 ಮೇಕೆ ಮರಿಗಳು ಸತ್ತಿವೆ. ಕೊಪ್ಪಳ  ಜಿಲ್ಲೆ ಯಲಬುರ್ಗಾ ತಾಲೂಕು ಜೂಲಕಟ್ಟಿ ಗ್ರಾಮದಲ್ಲಿ ಸಿಡಿಲಿಗೆ ಆಕಳು ಸತ್ತಿದೆ.