ಉತ್ತರ ಕರ್ನಾಟಕದ ಜನರ ಬೇಡಿಕೆಯಂತೆ ಜುಲೈ ತಿಂಗಳಿಂದ ಪಡಿತರ ವ್ಯವಸ್ಥೆಯಲ್ಲಿ 3 ಕೆ.ಜಿ. ಅಕ್ಕಿಯೊಂದಿಗೆ 2 ಕೆ.ಜಿ. ಜೋಳ ವಿತರಣೆ ಮಾಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯ ತಿಳಿಸಿದ್ದಾರೆ.
ಅವರು ಗುರುವಾರ ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಅಕ್ಕಿಯೊಂದಿಗೆ ಜೋಳ ನೀಡಿದರೆ ಮೈಸೂರು ಭಾಗದಲ್ಲಿ ಅಕ್ಕಿಯೊಂದಿಗೆ ರಾಗಿ ವಿತರಿಸಲಾಗುವುದು. ಇದಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ತೊಗರಿ ವಿತರಣೆಗೆ ಸಹ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲಿಯೆ ಅದು ಸಹ ಪಡಿತರದಲ್ಲಿ ಸೇರಲಿದೆ ಎಂದರು.
ರಾಜ್ಯದಲ್ಲಿ 1.27 ಕೋಟಿ ಪಡಿತರ ಕಾರ್ಡುಗಳಿದ್ದು, 4.31 ಕೋಟಿ ಜನ ಪಡಿತರ ಫಲಾನುಭವಿಗಳಿದ್ದಾರೆ. ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಆಹಾರ ದೊರಕಬೇಕು ಎಂಬುದು ನಮ್ಮ ಸರ್ಕಾರದ ಆಶಯವಾಗಿದೆ. ಆದರಿಂದಲೆ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಪಡಿತರ ಚೀಟಿಗೆ ಹೊಸದಾಗಿ ಅರ್ಜಿ ಸಲ್ಲಿಸಿದ 1.18 ಲಕ್ಷ ಪಡಿತರ ಕುಟುಂಬಕ್ಕೂ 10 ಕೆ.ಜಿ.ಅಕ್ಕಿಯನ್ನು ನೀಡಲಾಗಿದೆ. ಅದೇ ರೀತಿ ಬೇರೆ ರಾಜ್ಯದ ನಿವಾಸಿಗಳಿಗೆ ಪಡಿತರ ಚೀಟಿ ಇಲ್ಲದಿದ್ದರೂ ಸಹ ಆಧಾರ್ ಕಾರ್ಡ್ ಮೇಲೆ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ಮತ್ತು 2 ಕೆ.ಜಿ. ಕಡಲೆ ಬೇಳೆ ನೀಡಲಾಗಿದೆ ಎಂದರು.
ಉಳ್ಳವರು ಬಿ.ಪಿ.ಎಲ್. ಪಡಿತರ ಚೀಟಿ ಹಿಂದಿರುಗಿಸಬೇಕು:
ರಾಜ್ಯದಲ್ಲಿ ಕೊರೊನಾ ಆರಂಭದ ಮುನ್ನ 63 ಸಾವಿರ ಅಕ್ರಮ ಪಡಿತರ ಚೀಟಿ ರದ್ದುಗೊಳಿಸಿದಲ್ಲದೆ 93 ಲಕ್ಷ ರೂ. ದಂಡ ವಿಧಿಸಲಾಗಿರುತ್ತದೆ. ಕೊರೋನಾ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ ಕಳೆದ 3 ತಿಂಗಳನಲ್ಲಿ ಯಾವುದೆ ಕಾರ್ಡ್ ರದ್ದತಿಗೆ ಕ್ರಮ ಕೈಗೊಂಡಿಲ್ಲ. ಉಳ್ಳವರು ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿದಲ್ಲಿ ಸ್ವಯಂಪ್ರೇರಿತರಾಗಿ ಮುಂದೆ ಬಂದು ಕಾರ್ಡ್ ಮರಳಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಜೂನ್ 30 ರೊಳಗೆ ಆಹಾರಧಾನ್ಯ ಪಡೆಯಿರಿ:
ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಘೋಷಿಸಿದ ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಪಡಿತರವನ್ನು ಇನ್ನೂ ಪಡೆಯದವರು ಜೂನ್ 30 ರೊಳಗೆ ಬಂದು ಪಡೆಯಬಹುದಾಗಿದೆ ಎಂದರು.