ತಾಯಿಯ ಎದೆ ಹಾಲನ್ನು ಅಮೃತಕ್ಕೆ ಹೋಲಿಸುತ್ತಾರೆ. ಹಾಗೇ ಹಸುವಿನ ಹಾಲು ತಾಯಿಯ ಎದೆ ಹಾಲಿನಷ್ಟೇ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಲೇ ಕೆಲವು ತಾಯಂದಿರಲ್ಲಿ ಮಗುವಿಗೆ ಕುಡಿಸಲು ಹಾಲಿನ ಕೊರತೆ ಎದುರಾದಾಗ ಹಸುವಿನ ಹಾಲು ಕುಡಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ.
ವೈದ್ಯರು ಹೀಗೆ ಸಲಹೆ ನೀಡಲು ಕಾರಣ, ತಾಯಿಯ ಹಾಲಿನಲ್ಲಿ ಇರುವಷ್ಟು ಸಮೃದ್ಧ ಪೋಷಕಾಂಶಗಳು ಹಸುವಿನ ಹಾಲಿನಲ್ಲೂ ಇರುವುದೇ ಆಗಿದೆ. ಅದಕ್ಕೇ ‘ಹಾಲು ಕುಡಿದು ಆರೋಗ್ಯದಿಂದಿರಿ’ ಎಂಬ ನುಡಿ ಕೂಡ ಜನಜನಿತವಾಗಿದೆ. ಹಾಲಿನ ಬಗ್ಗೆ ಇಷ್ಟೆಲ್ಲಾ ಹೇಳಲು ಕಾರಣ ವಿಶ್ವ ಹಾಲು ದಿನ (ವಿಶ್ವ ಕ್ಷೀರ ದಿನ). ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ವಿವಿಧ ದೇಶಗಳಲ್ಲಿ ಆಚರಿಸುವ ಈ ವಿಶೇಷ ದಿನದ ಪ್ರಯುಕ್ತ ಭಾರತದಲ್ಲಿ, ಅದರಲ್ಲೂ ದೇಶದ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೂಡ ಜೂ.1 ರಂದು ವಿಶ್ವ ಹಾಲು ದಿನದ ಕಾರ್ಯಕ್ರಮ ನಡೆಯಿತು.
ಇದೇ ವೇಳೆ ರಾಜ್ಯದ ವಿವಿಧ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರಗಳ ವತಿಯಿಂದ ಆನ್ ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಳಾಗಿತ್ತು. ಅದರಂತೆ ಬೀದರ್‌ನಲ್ಲಿರುವ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ‘ಆರೋಗ್ಯವಂತ ಹಾಗೂ ಸಂಪದ್ಭರಿತವಾಗಿರಲು ಹೈನು ಉದ್ಯಮ’ ಎಂಬ ವಿಷಯದ ಕುರಿತು ಹೈನು ಉದ್ಯಮಿಗಳು ಹಾಗೂ ರೈತರಿಗಾಗಿ ಆನ್‌ಲೈನ್ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಬೀದರ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳಾಗಿರುವ ಡಾ. ಸುನೀಲ್ ಕುಮಾರ್ ಎನ್.ಎಂ. ಅವರು, ನಗರ ಪ್ರದೇಶದ ಜನರು ಫಾಸ್ಟ್ ಫುಡ್‌ಗೆ ಮಾರು ಹೋಗಿರುವ ಇಂದಿನ ದಿನಮಾನಗಳಲ್ಲಿ ಸಾತ್ವಿಕ ಆಹಾರಕ್ಕೆ ಬೇಡಿಕೆ ಹೆಚ್ಚಿದೆ. ಅದರಲ್ಲೂ ಹಾಲು ಒಂದು ಬಹುಮುಖ್ಯವಾಗಿರುವ ಹಾಗೂ ಸಮತೋಲನದಿಂದ ಕೂಡಿರುವ ಆಹಾರವಾಗಿದ್ದು, ಹಾಲು ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಹೀಗಾಗಿ ಹಾಲು ಉತ್ಪಾದಕರು ತಜ್ಞರು, ವಿಜ್ಞಾನಿಗಳಿಂದ ವೈಜ್ಞಾನಿಕ ಮಾಹಿತಿ ಪಡೆದುಕೊಂಡು ಶುದ್ಧ ಹಾಗೂ ಗುಣಟ್ಟದ ಹಾಲನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸುವ ವಿಧಾನಗಳನ್ನು ಅರಿತು, ಅಳವಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಹರಿಯಾಣ ರಾಜ್ಯದ ಹಿಸ್ಸಾರ್ ನಲ್ಲಿರುವ ಹೈನು ವಿಜ್ಞಾನ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕರಾಗಿರುವ ಡಾ. ಶರಣಗೌಡ ಬಿ. ಅವರು ಈ ವೇಳೆ ಮಾತನಾಡಿ, “ಆರೋಗ್ಯ ಕಾಪಾಡುವಲ್ಲಿ ಹಾಲಿನ ಮಹತ್ವ, ಹೈನುಗಾರಿಕೆಯನ್ನು ಒಂದು ಉದ್ಯಮವಾಗಿ ರೂಢಿಸಿಕೊಂಡು ಅತ್ಯಂತ ಪರಿಶುದ್ಧ ಹಾಲನ್ನು ಉತ್ಪಾದಿಸುವ ಬಗೆ ಹಾಗೂ ಹಾಲಿನ ಮೌಲ್ಯ ವರ್ಧನೆ, ಮೌಲ್ಯವರ್ಧಿತ ಹಾಲಿನ ಉತ್ಪನ್ನಗಳಿಂದ ಆದಾಯ, ಲಾಭ ಗಳಿಸುವ ಬಗೆ ಕುರಿತು ರೈತರಿಗೆ ಮಾಹಿತಿ ನೀಡಿದರು. ಹಾಗೇ ಶುದ್ಧ ಹಾಲು ಉತ್ಪಾದನೆಯು ಹೈನು ಉದ್ಯಮಕ್ಕೆ ಭದ್ರ ಬುನಾದಿಯಯಾಗಿದ್ದು, ರೈತರು ಹಾಗೂ ಹೈನು ಉದ್ಯಮಿಗಳು ಶುದ್ಧವಾಗಿರುವ ಹಾಲು ಉತ್ಪಾದನೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಬೀದರ್ ಕೃಷಿ ವಿಜ್ಞಾನ ಕೇಂದ್ರದ ಪಶು ವಿಜ್ಞಾನ ವಿಭಾಗದ ವಿಜ್ಞಾನಿಗಳಾಗಿರುವ ಡಾ. ಅಕ್ಷಯಕುಮಾರ ಅವರು, ಶುದ್ಧ ಹಾಲು ಎಂದರೆ ಏನು, ಶುದ್ಧ ಹಾಲು ಉತ್ಪಾದನೆಯ ಅಗತ್ಯ, ಹಾಲಿನ ಉತ್ಪಾದನೆ ವೇಳೆ ಅನುಸರಿಸಬೇಕಾದ ಸೂಕ್ತ ವಿಧಾನಗಳು, ಶುದ್ಧವಲ್ಲದ ಹಾಲಿನಿಂದ ಹರಡುವ ಕಾಯಿಲೆಗಳು ಮತ್ತು ಹಾಲು ನೀಡುವ ರಾಸುಗಳಿಗೆ ಅಗತ್ಯವಾಗಿ ನೀಡಬೇಕಿರುವ ಪೋಷಕಾಂಶಗಳ ಕುರಿತು ತರಬೇತಿಯಲ್ಲಿ ಭಾಗವಹಿಸಿದ್ದ ರೈತರಿಗೆ ಮಾಹಿತಿ ನೀಡಿದರು.
ಕಲಬುರಗಿ, ಬೀದರ್ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಮಹ್ಮದ್ ಜಿಯಾವುಲ್ಲಾ ಅವರು, ಪ್ರಸ್ತುತ ಹಾಲಿನ ಉತ್ಪಾದನೆಯು ಬೇಡಿಕೆಗಿಂತಲೂ ಹೆಚ್ಚಾಗಿದ್ದು, ಹಾಲಿಗೆ ಬೇಡಿಕೆ ಹೆಚ್ಚಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಗೂಗಲ್ ಮೀಟ್ ಅಪ್ಲಿಕೇಷನ್‌ನಲ್ಲಿ ನಡೆದ ಆನ್‌ಲೈನ್ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ 62 ಮಂದಿ ರೈತರು ಹಾಗೂ ವಿವಿಧ ವಿವಿಗಳ ವಿದ್ಯಾರ್ಥಿಗಳು ಭಾಗವಹಿಸಿ, ವಿಜ್ಞಾನಿಗಳು, ತಜ್ಞರಿಗೆ ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮಲ್ಲಿದ್ದ ಅನುಮಾನಗಳನ್ನು ಪರಿಹರಿಸಿಕೊಂಡರು.