News

ಹಳೆಯ ವಾಹನ ಗುಜರಿ ನೀತಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

14 August, 2021 9:15 PM IST By:

ಆರ್ಥಿಕ ಅಭಿವೃದ್ಧಿ ಹಾಗೂ ಪರಿಸರ ಸ್ನೇಹಿ ಕ್ರಮವಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಮಹತ್ವಕಾಂಕ್ಷೆಯ ರಾಷ್ಟ್ರೀಯ ವಾಹನ ಗುಜರಿ ನೀತಿ ಶುಕ್ರವಾರ ಜಾರಿಗೆ ಬಂದಿದೆ. ಗುಜರಾತ್ ನ ಗಾಂಧಿನಗರದಲ್ಲಿ ಆಯೋಜಿಸಿದ್ದ ಹೂಡಿಕೆದಾರರ ಸಮಾವೇಶವನ್ನು ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿ ಮಾತನಾಡಿ, ದೇಶದ ಆಟೋಮೊಬೈಲ್ ಕ್ಷೇತ್ರಕ್ಕೆ ಗುಜರಿ ನೀತಿ ಹೊಸ ದಾರಿಯನ್ನು ತೋರಿಸಲಿದೆ ಎಂದು ಅವರು ಹೇಳಿದ್ದಾರೆ.

ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಹೊಸ ನೀತಿಯಿಂದಾಗಿ ಆಟೋಮೊಬೈಲ್ ಕ್ಷೇತ್ರಕ್ಕೆ ಹೊಸ ಕಳೆ ಮತ್ತು ಹುರುಪು ಸಿಗಲಿದೆ ಅಲ್ಲದೆ ಸಕಾರಾತ್ಮಕ ಬದಲಾವಣೆಗಳು ಸಹಕಾರಿಯಾಗಲಿದೆ ಎಂದು ಹೇಳಿದವರು ಆಟೋಮೊಬೈಲ್ ಕ್ಷೇತ್ರದ ಎಲ್ಲಾ ಕ್ಷೇತ್ರಗಳಿಗೂ ಇದು ಹೊಸ ದಾರಿ ತೋರಿಸಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಳೆಯ ವಾಹನಗಳನ್ನು ಗುಜರಿಗೆ ಹಾಕುವುದರಿಂದ ಕಸದಿಂದ ರಸ ಉತ್ಪಾದನೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ ಇದರಿಂದಾಗಿ 1೦ ಸಾವಿರ ಕೋಟಿಗೂ ಹೆಚ್ಚಿನ ಆದಾಯ ಬರಲಿದೆ. ಜೊತೆಗೆ ಗುಜರಿ ಜಾರಿಯಿಂದಾಗಿ ದೇಶದಲ್ಲಿ ಸಾವಿರಾರು ಯುವಕರಿಗೆ ಉದ್ಯೋಗ ಸಿಗಲಿದೆ ಇದರಿಂದಾಗಿ ನಗರಗಳಲ್ಲಿ ಮಾಲಿನ್ಯ ಪ್ರಮಾಣ ಕಡಿಮೆ ಯಾಗಲಿದೆ. ಅಲ್ಲದೆ ಹೊಸ ಗುಜರಿ ನೀತಿ ಸ್ವಚ್ಛ ಮತ್ತು ಮಾಲಿನ್ಯರಹಿತ ನಗರಕ್ಕೆ ಸಹಕಾರಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದ ರಸ್ತೆಗಳಿಂದ ಹಳೆಯ ವಾಹನಗಳನ್ನು ತೆರವುಗೊಳಿಸುವ ಹಾಗೂ ಹಳೆಯ ವಾಹನಗಳಲ್ಲಿರುವ ಲೋಹವನ್ನು ಪುನರ್ಬಳಕೆ ಮಾಡುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಹಳೆ ವಾಹನ ಗುಜರಿ ನೀತಿ ಇದಾಗಿದೆ. ಹೊಸ ನೀತಿ ಪ್ರಕಾರ ವಾಹನಗಳಿಗೆ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತದೆ. ಮೂರು ಬಾರಿ ಪರೀಕ್ಷೆಯಲ್ಲಿ ಫೇಲಾದ ಎಲ್ಲಾ ವಾಹನಗಳನ್ನು ಗುಜರಿಗೆ  ಹಾಕಲಾಗುತ್ತದೆ.

ಇದರಿಂದಾಗಿ ಸ್ವಯಂಪ್ರೇರಿತವಾಗಿ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಅವಕಾಶ ಜನರಿಗೆ ಲಭಿಸಲಿದ್ದು, ಹೀಗೆ ಮಾಡಿದರೆ ಹೊಸ ವಾಹನ ಖರೀದಿ ವೇಳೆ ನೋಂದಣಿ ಶುಲ್ಕ ಕಟ್ಟಬೇಕಿಲ್ಲ ಹಾಗೂ ರಸ್ತೆ ತೆರಿಗೆಯಿಂದಲೂ ವಿನಾಯಿತಿ ಸಿಗಲಿದೆ.

ಏನಿದು ಹಳೆ ವಾಹನ ಗುಜರಿ ನೀತಿ?

ಹಳೆಯ ವಾಹನಗಳನ್ನು ರಸ್ತೆಗಳಿಂದ ತೆರವುಗೊಳಿಸಿ ಆ ವಾಹನಗಳಲ್ಲಿರುವ ಲೋಹಗಳನ್ನು ಪುನರ್ಬಳಕೆ ಮಾಡುವುದು. ಇಧರಿಂದ ಹೊಸ ವಾಹನ ರಸ್ತೆಗಿಳಿಯಲಿದೆ. ಅಪಘಾತ, ಮಾಲಿನ್ಯ ತಗ್ಗಲಿದೆ. ಆಟೋಮೊಬೈಲ್ ಉದ್ಯಮಕ್ಕೂ ಚೈತನ್ಯ ಸಿಗಲಿದೆ.

ಜನರಿಗೇನು ಲಾಭ

ಹಳೆಯ ವಾಹನ ಗುಜರಿಗೆ ಹಾಕಿದರೆ ಸರ್ಕಾರದಿಂದ ಪ್ರಮಾಣಪತ್ರ ದೊರೆಯುತ್ತದೆ. ಹೊಸ ವಾಹನ ಖರೀದಿ ವೇಳೆ ಇದನ್ನು ತೋರಿಸಿದರೆ, ನೋಂದಣಿ ಶುಲ್ಕ ರಸ್ತೆ ತೆರಿಗೆ ವಿನಾಯಿತಿ ಸಿಗಲಿದೆ. ಹೊಸ ವಾಹನಕ್ಕೆ ಡಿಸ್ಕೌಂಟ್ ಸಹ ಸಿಗಲಿದೆ. ಹಳೆಯ ವಾಹನವನ್ನು ಗುಜರಿಗೆ ಕೊಟ್ಟವರಿಗೆ ಸರ್ಕಾರ ಪ್ರಮಾಣ ಪತ್ರ ನಡುತ್ತದೆ. ಹೊಸ ವಾಹನ ಖರೀದಿಸಿ ಅದನ್ನು ನೋಂದಣಿ ಮಾಡಿಸುವಾಗ ಈ ಪ್ರಮಾಣಪತ್ರ ಕೊಟ್ಟರೆ ನೋಂದಣಿ ಶುಲ್ಕ ಮನ್ನಾ ಆಗಲಿದೆ.

ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಗೆ ಹಾಕಿದಾಗ ಅವುಗಳಿಂದ ಪ್ರತ್ಯೇಕಿಸಲಾಗುವ ಸ್ಟೀಲ್, ಪ್ಲಾಸ್ಟಿಕ್, ರಬ್ಬರ್, ಅಲ್ಯುಮಿನಿಯಂ ಮತ್ತು ಇತರೆ ಬಿಡಿಭಾಗಗಳನ್ನು  ಅಟೋಮೊಬೈಲ್ ಬಿಡಿಭಾಗಗಳ ಉತ್ಪಾದನೆಯಲ್ಲಿ ಮರುಬಳಕೆ ಮಾಡಲಾಗುವುದು. ಇಧರಿಂದ ಹೊಸ ವಾಹನಗಳ ಉತ್ಪಾದನೆಯ ವೆಚ್ಚ ಇಳಿಕೆಯಾಗಲಿದೆ.

ಸ್ಕ್ರ್ಯಾಪಿಂಗ್ ನೀತಿ ಅನುಷ್ಠಾನಕ್ಕೆ ದೇಶಾದ್ಯಂತ ಸರ್ಕಾರದ ಕಡೆಯಿಂದ ಮಾತ್ರವಲ್ಲದೆ, ಪಿಪಿಪಿ ಮಾದರಿ, ಖಾಸಗಿ, ಪಾಲುದಾರಿಕೆ, ರಾಜ್ಯ ಸರ್ಕಾರಗಳ ನೆರವಿನೊಂದಿಗೆ ಸ್ಕ್ರ್ಯಾಪಿಂಗ್ ಸೆಂಟರ್ ಗಳನ್ನು ಸ್ಥಾಪಿಸಲಾಗಿದೆ. ಸ್ಕ್ರ್ಯಾಪ್ ಮಾಡುವಾಗ ವಾಹನಗಳ ಮೌಲ್ಯಮಾಪನ ಮಾಡಿ, ಆ ಮೊತ್ತವನ್ನು ವಾಹನ ಮಾಲೀಕರಿಗೆ ನೀಡಲಾಗುವುದು.