News

ಭಾರಿ ವಿರೋಧದ ನಡುವೆಯೂ ವಿವಾದಿತ 3 ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

28 September, 2020 8:09 AM IST By:
President Ramnath kovinda

ಭಾರಿ ವಿರೋಧಕ್ಕೆ ಗುರಿಯಾಗಿರುವ ಕೃಷಿಗೆ ಸಂಬಂಧಿಸಿದ ಮೂರು ವಿಧೇಯಕಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾನುವಾರ ಸಹಿ ಹಾಕಿದ್ದು, ಅವೀಗ ಕಾಯ್ದೆ ರೂಪ ಪಡೆದುಕೊಳ್ಳಲಿವೆ.

ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ-2020, ರೈತರ ಉತ್ಪಾದನಾ ವ್ಯಾಪಾರ-ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ-2020, ಮತ್ತು ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದದ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ-2020ಕ್ಕೆ ರಾಷ್ಟ್ರಪತಿಯವರಿಂದ ಅನುಮೋದನೆ ಸಿಕ್ಕಿದ್ದರಿಂದ ಈಗ ಕಾನೂನು ರೂಪ ಪಡೆಯಲಿವೆ.

ವಿರೋಧ ಪಕ್ಷಗಳ ಭಾರಿ ವಿರೋಧದ ನಡುವೆಯೂ ಕಳೆದ ವಾರ ರಾಜ್ಯಸಭೆಯಲ್ಲಿ ವಿಧೇಯಕಗಳು ಅಂಗೀಕಾರ ಪಡೆದುಕೊಂಡಿದ್ದವು. ಇದಾದ ಬಳಿಕ ಹಿರಿಯ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಅಜಾದ್‌ ನೇತೃತ್ವದಲ್ಲಿ ವಿರೋಧ ಪಕ್ಷಗಳ ನಿಯೋಗ ರಾಷ್ಟ್ರಪತಿಯನ್ನು ಭೇಟಿಯಾಗಿ ವಿಧೇಯಕಕ್ಕೆ ಸಹಿ ಹಾಕದಂತೆ ಹಾಗೂ ವಿಧೇಯಕಗಳನ್ನು ಸಂಸತ್‌ಗೆ ಮರುಪರಿಶೀಲನೆಗೆ ಕಳುಹಿಸಿಕೊಡುವಂತೆ ಮನವಿ ಮಾಡಿತ್ತು. ಈ ವಾರದ ಆರಂಭದಿಂದ ಅಂತ್ಯದವರೆಗೂ ಪಂಜಾಬ್‌ ಮತ್ತು ಹರಿಯಾಣದಲ್ಲಿ ಈ ಮಸೂದೆ ವಿರೋಧಿಸಿ ಭಾರಿ ಪ್ರತಿಭಟನೆಯೂ ನಡೆದಿತ್ತು. ಈ ಪ್ರತಿಭಟನೆ ತೀವ್ರಗೊಂಡು ಬಿಜೆಪಿ ಮಿತ್ರ ಪಕ್ಷ ಶಿರೋಮಣಿ ಅಕಾಲಿದಳ ಎನ್‌ಡಿಎ ಮೈತ್ರಿಕೂಟವನ್ನೂ ತೊರೆದಿತ್ತು. ಇಷ್ಟೆಲ್ಲ ನಡೆದಿದ್ದರೂ ರಾಷ್ಟ್ರಪತಿಗಳು ಮಸೂದೆಗೆ ತಮ್ಮ ಸಹಿ ಹಾಕಿದ್ದಾರೆ.

ಸೆ.20ರಂದು ರಾಜ್ಯಸಭೆಯಲ್ಲಿ ಮೂರು ಕೃಷಿ ಸುಧಾರಣಾ ಮಸೂದೆಗಳು ಅಂಗೀಕಾರ ಆದಾಗಿನಿಂದಲೂ ದೇಶಾದ್ಯಂತ ರೈತರು ಹೋರಾಟ, ಪ್ರತಿಭಟನೆ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆಯೂ ‘ ದೇಶದ ರೈತರನ್ನು ಸ್ವಾವಲಂಬಿಗಳನ್ನಾಗಿ ಮತ್ತು ಅವರ ಬೆಲೆಗಳನ್ನು ದಲ್ಲಾಳಿ ಮುಕ್ತ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ಜಾರಿಗೆ ತರಲಾಗಿದೆ ಎಂದು ರೈತ ಮಸೂದೆಗಳಿಗೆ ರಾಷ್ಟ್ರಪತಿಯವರು ತಮ್ಮ ಅಂಕಿತವನ್ನು ಹಾಕಿದ್ದಾರೆ. ರಾಷ್ಟ್ರಪತಿಯವರ ಅಂಕಿತದ ಬೆನ್ನಲ್ಲೇ ಕೇಂದ್ರ ಸರಕಾರವು ಈ ಮೂರೂ ಮಸೂದೆಗಳನ್ನು ಗಜೆಟ್ ನೋಟಿಫಿಕೇಶನ್ ಮಾಡಿದ್ದು, ಶೀಘ್ರದಲ್ಲೇ ಇವುಗಳು ಕಾಯ್ದೆ ರೂಪದಲ್ಲಿ ಜಾರಿಗೆ ಬರಲಿವೆ.