ಬಾಣಂತಿ ಮತ್ತು ಗರ್ಭಿಣಿ ಮಹಿಳೆಯರ ಕ್ಷೇಮಾಭಿವೃಧಿಗಾಗಿ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಈ ಯೋಜನೆಯಡಿ ಸೌಲಭ್ಯ ಪಡೆಯಲು ಜಿಲ್ಲೆಯ ಅರ್ಹ ಗರ್ಭಿಣಿ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಈ ಯೋಜನೆಯು 2017ರ ಜನವರಿ 1 ರಂದು ಜಾರಿಗೆ ಬಂದಿದ್ದು, ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ಪೌಷ್ಠಿಕ ಆಹಾರ ಪಡೆಯುವುದಕ್ಕಾಗಿ 5000 ರೂ. ಗಳನ್ನು ಫಲಾನುಭವಿಗಳ ಆಧಾರ್ ಲಿಂಕ್ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸ¯ಗುತ್ತದೆ. ಈ ಯೋಜನೆಯು ಮೊದಲನೇ ಬಾರಿಯ ಗರ್ಭಿಣಿಗೆ/ ಬಾಣಂತಿಯರಿಗೆ ಮಾತ್ರ ಅನ್ವಯವಾಗುತ್ತದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅನುಸಾರ ಅನುಷ್ಠಾನಗೊಳ್ಳಿಸಲಾಗಿದೆ. ಈ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 85,546 ಗರ್ಭಿಣಿ/ಬಾಣಂತಿಯರು ಈ ಸೌಲಭ್ಯವನ್ನು ಪಡೆದಿದ್ದಾರೆ.
ಕೇಂದ್ರ/ರಾಜ್ಯ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ಉದ್ದಿಮೆಗಳ ನೌಕರರನ್ನು ಹೊರತುಪಡಿಸಿ ಎಲ್ಲಾ ಗರ್ಭಿಣಿ ಮತ್ತು ಬಾಣಂತಿಯರು ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. 2017ರ ಜನವರಿ 1 ರಂದು ಅಥವಾ ನಂತರ ನೋಂದಣಿಯಾದ ಎಲ್ಲಾ ಅರ್ಹ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು ಹಾಗೂ ಈ ಯೋಜನೆಯ ಸೌಲಭ್ಯವು ಮೊದಲ ಜೀವಂತ ಹೆರಿಗೆಗೆ ಮಾತ್ರ ಸೀಮಿತವಾಗಿದೆ.
ಗರ್ಭಿಣಿ/ಬಾಣಂತಿ ಮಹಿಳೆಯರಿಗೆ 5000 ರೂ.ಗಳ ಸಹಾಯಧನವನ್ನು ಮೂರು ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಯ ಖಾತೆಗೆ ವರ್ಗಾಯಿಸಲಾಗುತ್ತದೆ. ಒಂದನೇ ಕಂತು ಗರ್ಭಿಣಿ ಎಂದು ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿ (150 ದಿನಗಳೊಳಗಾಗಿ) 1000 ರೂ., ಎರಡನೇ ಕಂತು ಕನಿಷ್ಠ ಒಂದು ಆರೋಗ್ಯ ತಪಾಸಣೆ (ಗರ್ಭಿಣಿಯಾಗಿ 6 ತಿಂಗಳ ನಂತರ) 2000 ರೂ. ಹಾಗೂ ಮೂರನೇ ಕಂತು ಮಗು ಜನನ ನೋಂದಣಿ ಮತ್ತು ಮೊದಲನೇ ಹಂತದ ಚುಚ್ಚುಮದ್ದು ((OPV, BCG, DPT, Hepatitis-B) ಅಥವಾ ಬದಲಿ ಲಸಿಕೆಯನ್ನು ಪಡೆದಲ್ಲಿ) ರೂ. 2000 ರೂ.ಗಳ ಸೌಲಭ್ಯ ಒದಗಿಸಲಾಗುತ್ತದೆ.
ಅರ್ಹ ಗರ್ಣಿಣಿ ಮಹಿಳೆಯರು ತಾಯಿ ಮತ್ತು ಶಿಶು ರಕ್ಷಣ ಕಾರ್ಡ್ ಪ್ರತಿ, ಫಲಾನುಭವಿಯ ಹಾಗೂ ಪತಿಯ ಆಧಾರ್ ಕಾರ್ಡ ಪ್ರತಿ ಹಾಗೂ ಫಲಾನುಭವಿಯ ಬ್ಯಾಂಕ್ ಖಾತೆಯ ವಿವರದೊಂದಿಗೆ ಅಂಗನವಾಡಿ ಕೇಂದ್ರದಲ್ಲಿ ಅವಶ್ಯಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ ಹಾಗೂ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಏನಿದು ಪ್ರಧಾನಮಂತ್ರಿ ಮಾತೃ ವಂದನ ಯೋಜನೆ
ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ (ಪಿಎಂಎಂವಿವೈ) ಎಂಬುದು ಹೆರಿಗೆ, ಬಾಣಂತಿಯರಿಗೆ ಲಾಭದ ಕಾರ್ಯಕ್ರಮವಾಗಿದ್ದು, ಇದನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಗೆ ಅನುಗುಣವಾಗಿ ದೇಶದ ಎಲ್ಲಾ ಜಿಲ್ಲೆಗಳಲ್ಲಿಭಾರತ ಸರ್ಕಾರದಿಂದ ಜಾರಿಗೆ ತರಲಾಗಿದೆ. ಗರ್ಭೀಣಿ ಮತ್ತು ಬಾಣಂತಿಯರಿಗೆ ಉಂಟಾಗುವ ತೊಂದರೆ, ಅನಾರೋಗ್ಯಗಳಾದ ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ, ಬಾಣಂತಿಯರ ಮರಣಗಳನ್ನು ತಡೆಯಲು ಭಾರತ ಸರ್ಕಾರ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಜಾರಿ ತಂದಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಯಡಿ ಪ್ರಯೋಜನ ಪಡೆಯುವವರು ನಿಮ್ಮ ಗ್ರಾಮದ ಅಥವಾ ಸುತ್ತಮುತ್ತಲಿನ ಅಂಗನವಾಡಿ ಶಿಕ್ಷಕಿಯರು ಅಥವಾ ಆಶಾ ಕಾರ್ಯಕರ್ತೆಯರ ಬಳಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಬೇಕಾಗುವ ದಾಖಲಾತಿಗಳನ್ನು ಕೂಡ ಇವರಿಗೆ ಸಲ್ಲಿಸಬೇಕು. - ಅಂದರೆ ಮಾತೃತ್ವ ಸೌಲಭ್ಯಗಳನ್ನು ಪಡೆಯಲು ಬಯಸುವ ಅರ್ಹ ಮಹಿಳೆಯರು ಆ ನಿರ್ದಿಷ್ಟ ರಾಜ್ಯ/ಯುಟಿ ಅನುಷ್ಠಾನಗೊಳಿಸುವ ಇಲಾಖೆಯನ್ನು ಅವಲಂಬಿಸಿ ಅಂಗನವಾಡಿ ಕೇಂದ್ರ (ಎಡಬ್ಲ್ಯೂಸಿ)/ಅನುಮೋದಿತ ಆರೋಗ್ಯ ಕೇಂದ್ರದಲ್ಲಿ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು.