News

ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆ ಅನುಷ್ಠಾನದಲ್ಲಿ ಶೇ. 97.07 ರಷ್ಟು ಸಾಧನೆ ಮಾಡಿ ಕರ್ನಾಟಕ ನಂ-1 -ಬಿ.ಸಿ.ಪಾಟೀಲ

22 February, 2021 10:34 AM IST By:

ಪ್ರಧಾನಮಂತ್ರಿ ಕೃಷಿ ಸಮ್ಮಾನ ಯೋಜನೆ ಅನುಷ್ಠಾನದಲ್ಲಿ ಯಶಸ್ವಿಯಾಗಿ ಶೇ. 97.07 ರಷ್ಟು ಸಾಧನೆ ಮಾಡಿದ್ದಕ್ಕಾಗಿ ದೇಶದಲ್ಲೇ ರಾಜ್ಯ ಮೊದಲನೇ ಸ್ಥಾನದಲ್ಲಿದ್ದು, ಇದೇ ಫೆ.24 ರಂದು ನವದೆಹಲಿಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯದ ಪರವಾಗಿ ಪ್ರಶಸ್ತಿ ಸ್ವೀಕರಿಸಲಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

ರವಿವಾರ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ದರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯೋಜನೆಯ ಉತ್ತಮ ಅನುಷ್ಠಾನಕ್ಕಾಗಿ ದೇಶದಲ್ಲಿ 5 ರಾಜ್ಯಗಳನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಕರ್ನಾಟಕ ನಂ-1 ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಎಲ್ಲಾ ಅಧಿಕಾರಿ-ಸಿಬ್ಬಂದಿಗಳು ಅಭಿನಂದನೆಗೆ ಅರ್ಹರಾಗಿದ್ದಾರೆ ಎಂದರು.

ಕಲಬುರಗಿ ಜಿಲ್ಲೆಯಲ್ಲಿ ಈ ಯೋಜನೆಯಡಿ ಇಲ್ಲಿಯವರೆಗೂ ರಾಜ್ಯ ಸರ್ಕಾರದ 4000 ರೂ. ಹೆಚ್ಚುವರಿ ಪ್ರೋತ್ಸಾಹದ ಮೊತ್ತ ಒಳಗೊಂಡಂತೆ  261738 ಫಲಾನುಭವಿಗಳಿಗೆ ಕೇಂದ್ರದಿಂದ 231.79 ಕೋಟಿ ರೂ. ಹಾಗೂ ರಾಜ್ಯದಿಂದ 180.54 ಕೋಟಿ ರೂ. ಸೇರಿದಂತೆ ಒಟ್ಟಾರೆ 412.33 ಕೋಟಿ ರೂ. ಮೊತ್ತ ರೈತರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ. ಮೂಲಕ ಪಾವತಿಸಲಾಗಿದೆ ಎಂದು ಸಚಿವರು ಹೇಳಿದರು.

ಬರುವ ಮಾರ್ಚ್ 8 ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ 2021-22ನೇ ಸಾಲಿನ ಆಯವ್ಯಯ ಮಂಡಿಸಲಿದ್ದಾರೆ. ಕೋವಿಡ್ ಸಂಕಷ್ಟ ಹಿನ್ನೆಲೆಯಲ್ಲಿ ರಾಜ್ಯದ ಅನ್ನದಾತನಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಕೃಷಿ ಕ್ಷೇತ್ರಕ್ಕೆ ನೀಡುವ ಅನುದಾನದಲ್ಲಿ ಕಡಿತಗೊಳಿಸಬಾರದು ಎಂದು ಈಗಾಗಲೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದರು.

ಹಸು ಹಾಗೂ ಎತ್ತುಗಳು ಮೃತಪಟ್ಟರೆ ಪರಿಹಾರ ನೀಡುವ ಮತ್ತು ಮೇವಿನ ಬಣಮೆ ಹಾಗೂ ರಾಶಿಯ ಬೆಳೆಗಳ ಕಾಳು ಬೆಂಕಿಗೆ ಆಹುತಿಯಾದರೆ 50 ಸಾವಿರ ರೂ. ಪರಿಹಾರ ನೀಡುವ ಕಾರ್ಯಕ್ರಮ ಘೋಷಿಸುವ ಹಾಗೂ ಆಕಸ್ಮಿಕವಾಗಿ ರೈತ ಮರಣ ಹೊಂದಿದಲ್ಲಿ ಈಗ ನೀಡಲಾಗುತ್ತಿರುವ ಪರಿಹಾರದ ಮೊತ್ತ 2 ರಿಂದ 5 ಲಕ್ಷ ರೂ. ಹೆಚ್ಚಿಸುವಂತೆಯೂ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ಕೃಷಿ ಸಚಿವರು ತಿಳಿಸಿದರು.

ಕಲಬುರಗಿ ಸೇರಿದಂತೆ ರಾಜ್ಯದಲ್ಲಿ ಕೃಷಿ ಹೊಂಡ ನಿರ್ಮಾಣ ಯೋಜನೆಯಲ್ಲಿ ಅಕ್ರಮಗಳ ತನಿಖೆಗೆ ಪ್ರಕರಣವನ್ನು ಎ.ಸಿ.ಬಿ.ಗೆ ವಹಿಸಿದ್ದು, ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವ ಬಿ.ಸಿ.ಪಾಟೀಲ ಉತ್ತರಿಸಿದರು.