News

ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದರೆ ಕರ್ನಾಟಕ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಪರಿಹಾರ ಪಡೆಯಿರಿ

24 September, 2020 7:26 PM IST By:

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ 2020ರ ಮುಂಗಾರು ಹಂಗಾಮಿನಲ್ಲಿ ಸ್ಧಳ, ನಿರ್ದಿಷ್ಟ, ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ಸ್ಫೋಟ ಮತ್ತು ಗುಡುಗು ಮಿಂಚುಗಳಿಂದ ಬೆಂಕಿ ಅವಗಡ ಸಂಭವಿಸಿ ಬೆಳೆ ನಷ್ಟವುಂಟಾದಲ್ಲಿ ವೈಯಕ್ತಿಕ ನಷ್ಟದ ನಿರ್ಧರಣೆ ಹಾಗೂ ಬೆಳೆ ವಿಮಾ ನಷ್ಟ ಪರಿಹಾರ ಇತ್ಯರ್ಥಪಡಿಸಲು ಅವಕಾಶ ನೀಡಲಾಗಿದೆ.

 ಈ ಯೋಜನೆಯನ್ನು ಅನುಷ್ಟಾನಗೊಳಿಸಲು ಬೆಂಗಳೂರಿನ ಯುನಿವರ್ಸಲ್ ಸೊಂಪೊ ಜನರಲ್ ಇನ್ಸುರೆನ್ಸ್ ಕಂಪನಿ ವಿಮಾ ಸಂಸ್ಥೆ ನಿಗದಿಪಡಿಸಲಾಗಿದೆ. ಒಂದು ವೇಳೆ ಒಂದು ಅಧಿಸೂಚಿತ ಘಟಕದಲ್ಲಿ ಶೇ. 25 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗನುಗುಣವಾಗಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುತ್ತದೆ.

ಇಂತಹ ಸ್ಥಳೀಯ ಗಂಡಾಂತರ ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ ಬೆಳೆವಿಮೆ ಮಾಡಿಸಿರುವ ರೈತರು ಈ ಕುರಿತು ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಠಾನಗೊಳಿಸಿರುವ ವಿಮಾ ಸಂಸ್ಥೆಯ ಪ್ರತಿನಿಧಿಗಳು, ಸಹಾಯವಾಣಿಗೆ ತಕ್ಷಣ ಸೂಚನೆ ನೀಡಬೇಕು. ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರ, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಯೊಳಗೆ ತಿಳಿಸಿದ್ದಲ್ಲಿ ಬೆಳೆ ವಿಮೆ ಪ್ರತಿನಿಧಿಗಳು ತಮ್ಮ ಜಮೀನುಗಳಿಗೆ ಭೇಟಿ ನೀಡಿ ಬೆಳೆ ನಷ್ಟ ಮೌಲ್ಯಮಾಪನ ಮಾಡಿ ಮಾರ್ಗಸೂಚಿಯನ್ವಯ ಪರಿಹಾರ ಒದಗಿಸಲಾಗುವುದು.

 ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 1800 425 7919ಗೆ, ಆಯಾ ತಾಲೂಕಿನ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಅಥವಾ  ಬೆಂಗಳೂರಿನ ಯುನಿವರ್ಸಲ್ ಸೊಂಪೊ  ಜನರಲ್ ಇನ್ಸುರೆನ್ಸ್ ಕಂಪನಿ ವಿಮಾ ಸಂಸ್ಥೆಯ ಕೆಳಕಂಡ ವಿಮಾ ಪ್ರತಿನಿಧಿಗಳನ್ನು ಸಂಪರ್ಕಿಸಬಹುದಾಗಿದೆ.