News

ಜೋಳ, ಕಡಲೆ, ಸೂರ್ಯಕಾಂತಿ ಬೆಳೆ ವಿಮೆ ಮಾಡಿಸಲು ನವೆಂಬರ್ 30 ಕೊನೆಯ ದಿನ

29 October, 2020 10:15 AM IST By:

ಪ್ರಸಕ್ತ ಸಾಲಿಗೆ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಹೋಬಳಿ, ಗ್ರಾ.ಪಂ ಮಟ್ಟದಲ್ಲಿ ಅನುಸೂಚಿತ ಬೆಳೆಗಳಿಗೆ ನೊಂದಣಿ ಪ್ರಕ್ರಿಯೆ ಈಗಾಗಲೇ ಪಾರಂಭಿಸಲಾಗಿದೆ.

ಬೆಳೆ ನಷ್ಟ, ಬೆಳೆ ವಿಫಲಗೊಂಡ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರ ಕೈಹಿಡಿಯಲು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.  ಅನಿರೀಕ್ಷಿತ ಘಟನೆಗಳಿಂದ ಮತ್ತು ದುರಂತಗಳಿಂದ ಉಂಟಾಗುವ ಬೆಳೆ ನಷ್ಟ ಅಥವಾ ಹಾನಿಯಿಂದ ಸಂಭವಿಸುವ ಸಂಕಷ್ಟದಲ್ಲಿ ವಿಮೆ ಮಾಡಿಸಿದ ರೈತರ ಕೈಹಿಡಿಯಲಿದೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ.

 ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ವಿಮೆ ಕಂತು ಕಟ್ಟಿದ್ದ ರೈತರಿಗೆ ಬೆಳೆನಷ್ಟ ಮತ್ತು ಪ್ರಕೃತಿ ವಿಕೋಪದಡಿ ಬೆಳೆ ನಷ್ಟ ಆದರೆ ಬೆಳೆ ವಿಮೆ ಮಾಡಿಸಿರುವ ರೈತರಿಗೆ ಎಕರೆವಾರು ವಿಮಾ ಮೊತ್ತವನ್ನು ಪಾವತಿಸಲಾಗುವುದು.

 ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ಅರ್ಹ ಸಾಲ ಪಡೆದ ರೈತರಿಗೆ ಈ ಯೋಜನೆ ಕಡ್ಡಾಯವಾಗಿದ್ದು, ಇತರೆ ರೈತರಿಗೆ ಇದು ಐಚ್ಛಿಕವಾಗಿರುತ್ತದೆ. ಈ ಯೋಜನೆ ಬಿತ್ತನೆ ಕ್ಷೇತ್ರ ಅನುಸಾರವಾಗಿ ವಿಮಾ ಪರಿಹಾರ ವಿಧಾನ ಆಧರಿಸಿದ್ದು, ರೈತರು ತಾವು ಬೆಳೆದ ಬೆಳೆಗಳಿಗೆ ಮಾತ್ರ ವಿಮಾ ಮಾಡಿಸಬೇಕು.

ಬಾಗಲಕೋಟೆ ಜಿಲ್ಲೆಗೆ ಬಜಾಜ್ ಅಲಿಯಾಂಜ್ ಇನ್ಸೂರೆನ್ಸ್ ಕಂಪನಿ ಸಂಸ್ಥೆ ಹಾಗೂ ಕಲಬುರಗಿ ಜಿಲ್ಲೆಗೆ ಯುನಿವರಸಲ್ ಸೊಂಪೊ  ಜೆನೆರಲ್  ಇನ್ಸುರೆನ್ಸ್ ಕಂಪನಿ ಲಿ. ಬೆಂಗಳೂರು ಹೀಗೆ ಬೇರೆ ಬೇರೆ ಜಿಲ್ಲೆಗಳಿಗೆ ಬೇರೆ ವಿಮಾ ಕಂಪನಿ ಸಂಸ್ಥೆಗಳು ವಿಮಾ ಸೌಲಭ್ಯ ನೀಡಲಿವೆ. ಬೆಳೆಗಳ ವಿಮೆಗೆ ಕಟ್ಟುವ ಕೊನೆಯ ದಿನಾಂಕವು ಆಯಾ ಜಿಲ್ಲೆಗಳಿಗನುಗುಣವಾಗಿ ವ್ಯತ್ಯಾಸವಿದೆ.

ಈ ಯೋಜನೆಯಡಿ 2020 ಹಿಂಗಾರು ಹಂಗಾಮಿನಲ್ಲಿ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ (ಇನಂಡೇಷನ್)ಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು. 

ಒಂದು ವೇಳೆ ಒಂದು ಅಧಿಸೂಚಿತ ಘಟಕದಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಮಾದರಿ ಸಮೀಕ್ಷೆಗನುಣವಾಗಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುತ್ತದೆ. ಇಂತಹ ಸ್ಥಳಿಯ ಗಂಡಾಂತರ ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂದಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಟಾನಗೊಳಿಸಿರುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ತಕ್ಷಣ (1800 200 5142) ಗೆ ಸೂಚನೆ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಯೊಳಗೆ ತಿಳಿಸಬೇಕು.

2020 ರ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಇಂಡೆಮ್ನಿಟಿ ಮೊತ್ತವನ್ನು ನೀರಾವರಿ ಬೆಳೆಗಳಿಗೆ ಶೇ. 90 ಹಾಗೂ ಮಳೆಆಶ್ರಿತ ಬೆಳೆಗಳಿಗೆ ಶೇ. 80 ಎಂದು ನಿಗಧಿಪಡಿಸಲಾಗಿದೆ. ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಬೆಳೆವಾರು ಹಣಕಾಸು ಪ್ರಮಾಣದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. 

ಕಲಬುರಗಿ ಜಿಲ್ಲೆಯ ಬೆಳೆಗಳಿಗೆ ವಿಮೆ ಮಾಡಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ಪಟ್ಟಿ