News

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ರೈತರ ನಿರಾಸಕ್ತಿ; ವಿಮಾ ಕಂಪನಿಗಳಿಗೆ ಹೆಚ್ಚು ಲಾಭ ಎಂಬ ಆರೋಪ

29 September, 2020 12:13 AM IST By:

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ(ಪಿಎಂಎಫ್‌ಬಿವೈ)ಗೆ ರಾಜ್ಯದ ರೈತರಿಂದ ಅಷ್ಟೊಂದು ಪ್ರತಿಕ್ರಿಯೆ ದೊರೆಯುತ್ತಿಲ್ಲ. ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಪರಿಹಾರ ಪಡೆಯಲು ವಿಧಿಸಿರುವ ಕಠಿಣ ಷರತ್ತುಗಳಿಂದ ರೈತರಿಗೆ ಹಣ ಸೇರುತ್ತಿಲ್ಲ. ಕಳೆದ ವರ್ಷದಲ್ಲಿ ವಿಮೆ ಮಾಡಿಸಿದ್ದ ರೈತರಿಗೆ ಇನ್ನೂ ಪರಿಹಾರ ಹಣ ಸಿಗದಿರುವುದು, ರೈತರು ವಿಮೆ ಮಾಡಿಸುವಲ್ಲಿ ಹಿಂದೇಟು ಹಾಕುತ್ತಿರುವುದಕ್ಕೆ ಮುಖ್ಯ ಕಾರಣ  ಸೇರಿದಂತೆ ಇತರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಅಡಿ ಬರಬೇಕಾಗಿದ್ದ ಕ್ಲೇಮ್‌ ಮೊತ್ತ  ರೈತರ ಖಾತೆಗೆ ಸೇರದೆ ವಿಮಾ ಕಂಪನಿಗಳಿಗೆ ಹೆಚ್ಚು ಲಾಭ ತಂದುಕೊಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವುದರಿಂದ ರೈತರು ನಿರಾಸಕ್ತಿ ತೋರಿಸುತ್ತಿದ್ದಾರೆ.ಕಳೆದ ವರ್ಷದ್ದೇ ವಿಮೆ ಹಣ ರೈತರ ಖಾತೆಗೆ ಬಂದಿಲ್ಲವೆಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನೈಸರ್ಗಿಕ ವಿಕೋಪದಿಂದಾಗಿ ರೈತರು ಸಂಕಷ್ಟದಲ್ಲಿದ್ದರೂ ಅವರಿಗೆ ನ್ಯಾಯಯುತವಾಗಿ ಸಿಗಬೇಕಾದ ವಿಮೆ ಹಣ ದೊರೆತಿಲ್ಲ.ಬೆಳೆ ನಷ್ಟ ಇಲ್ಲವೇ ವಿಫಲವಾದರೆ ಅಂತಹ ಸಂಕಷ್ಟದಲ್ಲಿ ಆರ್ಥಿಕವಾಗಿ ನೆರವು ಸಿಗುತ್ತದೆಂಬ ಮಹತ್ವಾಕಾಂಕ್ಷೆಯೊಂದಿಗೆ ಜಾರಿಗೆ ತಂದ ಈ ಫಸಲ್  ಬಿಮಾ ಯೋಜನೆ ರೈತರ  ಆಸೆಯನ್ನು ಸುಳ್ಳಾಗಿಸಿದೆ.

ರೈತರಿಗಿಂತ ವಿಮಾ ಕಂಪನಿಗಳಿಗೆ ಹೆಚ್ಚು ಲಾಭ

ಬೆಳೆ ನಷ್ಟ, ಬೆಳೆ ವಿಫಲಗೊಂಡ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರ ಕೈಹಿಡಿಯಲು ಕೇಂದ್ರ ಸರ್ಕಾರದ ಸಹಭಾಗೀತ್ವದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಿದೆ.ಅನಿರೀಕ್ಷಿತ ಘಟನೆಗಳಿಂದ ಮತ್ತು ದುರಂತಗಳಿಂದ ಉಂಟಾಗುವ ಬೆಳೆ ನಷ್ಟ ಅಥವಾ ಹಾನಿಯಿಂದ ಸಂಭವಿಸುವ ಸಂಕಷ್ಟದಲ್ಲಿ ರೈತರಿಗೆ ಆರ್ಥಿಕವಾಗಿ ನೆರವಾಗಲು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ ರೈತರ ಬದಲಾಗಿ ವಿಮಾ ಕಂಪನಿಗಳಿಗೆ ಹೆಚ್ಚು ಲಾಭವಾಗುತ್ತಿದೆ ಎಂಬ ಟೀಕೆಗಳು ಕೇಳಿ ಬರುತ್ತಿವೆ.

 ಕಳೆದ ವರ್ಷದ ವಿಮೆ ಹಣ ಬಂದಿಲ್ಲ:

2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಪರಿಹಾರಕ್ಕೆ ರೈತರು ಸಲ್ಲಿಸಿರುವ ಅರ್ಜಿಗಳು ಇನ್ನೂ ಇತ್ಯರ್ಥವಾಗಿಲ್ಲ. ಬಹಳಷ್ಟು ರೈತರಿಗೆ ಪರಿಹಾರದ ಹಣ ಸಿಕ್ಕಿಲ್ಲ. ಬ್ಯಾಂಕುಗಳಿಂದ ಸಕಾಲಕ್ಕೆ ವಿಮೆ ಹಣ ಪಾವತಿಯಾಗುವುದಿಲ್ಲ.  ಇನ್ನೂ ಕೆಲವು ಬ್ಯಾಂಕುಗಳಲ್ಲಿ ವಿಮೆ ಹಣ ಸಾಲದ ಹಣಕ್ಕೆ ವರ್ಗಾವಣೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಪ್ರಕೃತಿ ವಿಕೋಪಕ್ಕೆ ವಿಮೆ ಪರಿಹಾರ:

ಈ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು. ವಿಮಾ ಕಂತು ಪಾವತಿಸಿದರ ಬೆಳೆ ನಷ್ಟದ ಅಂದಾಜು ಮಾಡುವಲ್ಲಿ ತಾಂತ್ರಿಕ ತೊಂದರೆ ಹಾಗೂ ಬೆಳೆವಿಮೆ ಕಂತಿಗಿಂತ ಪರಿಹಾರದ ಮೊತ್ತ ಕಡಿಮೆ ಬರುವುದರಿಂದ ರೈತರು ವಿಮೆ ಮಾಡುಸಲು ಮುಂದಾಗುತ್ತಿಲ್ಲ.

ರೈತರಿಂದ ವಿವಿಧ ಬೆಳೆಗಳಿಗೆ ನೋಂದಣಿ ಮಾಡಿಸುವಾಗ ಇರುವ ಆಸಕ್ತಿ ವಿಮೆ ಕಂಪನಿಗಳಿಗೆ ಹಣ ಪಾವತಿಸುವಾಗಿ ಆಸಕ್ತಿ ತೋರಿಸುವುದಿಲ್ಲ. ಆಗ ನೂರಾರು ಷರತ್ತುಗಳನ್ನು ಕೇಳಲಾಗುತ್ತದೆ ಎಂಬ ಆರೋಪವಿದೆ. ಕೆಲವೊಂದು ಬೆಳೆಗಳಿಗೆ ವಿಮೆ ಸೌಲಭ್ಯ ಸಿಗುವುದಿಲ್ಲ ಎನ್ನುವ ಕಾರಣಕ್ಕೆ ರೈತರು ವಿಮೆ ಮಾಡಿಸುವುದಿಲ್ಲ

ಬೆಳೆ ನಷ್ಟದ ಬಗ್ಗೆ 72 ಗಂಟೆಯೊಳಗೆ ಮಾಹಿತಿ ನೀಡದಿದ್ದರೆ ವಿಮೆ ಸಿಗಲ್ಲ:

ಪ್ರಕೃತಿ ವಿಕೋಪದ ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂದಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಟಾನಗೊಳಿಸಿರುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ತಕ್ಷಣ ಸೂಚನೆ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಯೊಳಗೆ ತಿಳಿಸಬೇಕು. ಇಲ್ಲದಿದ್ದರೆ ವಿಮೆ ಹಣ ಪಡೆಯಲು ಸಮಸ್ಯೆಯಾಗುತ್ತದೆ.

ಶೇಕಡಾ75 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ನಷ್ಟವಾದರೆ ಮಾತ್ರ ಪರಿಹಾರ:

.ಗ್ರಾಪಂ, ಹೋಬಳಿ ಮಟ್ಟದಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿಬಿತ್ತನೆ ವಿಫಲಗೊಂಡಲ್ಲಿವಿಮಾ ಮೊತ್ತದ ಗರಿಷ್ಟ ಶೇ.25ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ನೀಡಲಿದೆ. ಶೇ. 25 ರಷ್ಟು ಬೆಳೆ ವಿಮಾ ನಷ್ಟ ಪರಿಹಾರ ನೀಡಲು, ಬಿತ್ತನೆಯಿಂದ ಕಟಾವು ಹಂತದವರೆಗಿನ ಮಧ್ಯದ ಅವಧಿಯಲ್ಲಿ ಶೇ. 50 ಕ್ಕಿಂತ ಹೆಚ್ಚು ಬೆಳೆ ನಷ್ಟ ಸಂಭವಿಸಿದರೆ ಮುಂಚಿತವಾಗಿ ಅಂದಾಜು ಮಾಡಲಾದ ಬೆಳೆ ವಿಮಾ ನಷ್ಟ ಪರಿಹಾರದಲ್ಲಿ ಶೇ.25 ರಷ್ಟು ಹಣವನ್ನು ಪರಿಹಾರವಾಗಿ ನೀಡಲಾಗುವುದು. ಕೆಲವು ಸಲ ವಿಮೆಗಿಂತ ಪರಿಹಾರದ ಹಣ ಕಡಿಮೆ ಸಿಗುತ್ತದೆ.. ಪರಿಹಾರ ಪಡೆಯಲು ರೈತರಿಗೆ ವಿಧಿಸಿರುವ ಕಠಿಣ ಷರತ್ತುಗಳಿಂದ ಹಣ ರೈತರ ಕೈ ಸೇರುವುದಿಲ್ಲ. ಇದರಿಂದಾಗಿ  ವರ್ಷದಿಂದ ವರ್ಷಕ್ಕೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯತ್ತ ನಿರಾಸಕ್ತಿ ತೋರಿಸುತ್ತಿದ್ದಾರೆ.

ಬೆಳೆ ಕಟಾವು ಪ್ರಯೋಗಗಳ ಆದಾರ ಮೇಲೆ ಪರಿಹಾರ :

ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆಯಡಿ ರಾಜ್ಯ ಸರ್ಕಾರವು ನಡೆಸುವ ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಕಂಡುಹಿಡಿಯಲಾದ ಇಳುವರಿ ಮಾಹಿತಿಯನ್ನು ಮಾತ್ರ ಪರಿಗಣಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಲೆಕ್ಕಹಾಕಿ ಇತ್ಯರ್ಥಪಡಿಸಲಾಗುವುದು.ಅಲ್ಲದೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭದಲ್ಲಿ ಎರಡು ವಾರದೊಳಗೆ (ಹದಿನಾಲ್ಕು ದಿನಗಳು) ಚಂಡಮಾರುತ, ಚಂಡಮಾರುತ ಸಹಿತ ಮಳೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧಾರ ಮಾಡುತ್ತದೆ.

2020-21ನೇ ಸಾಲಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 14,20,426 ರೈತರ ನೋಂದಣಿ:

2020ನೇ ಸಾಲಿನಲ್ಲಿ  14,20,426 ರೈತರು (farmers) ಅರ್ಜಿ ಸಲ್ಲಿಸಿ, ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕೊನೆಯ ಹಂತದಲ್ಲಿ ಸಲ್ಲಿಕೆಯಾದ ಅರ್ಜಿಗಳು (Application) ಅಪ್‌ ಲೋಡ್‌ ಬಳಿಕ ರಾಜ್ಯದಲ್ಲಿ ನೋಂದಣಿಯಾದ ರೈತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಕೃಷಿ ಇಲಾಖೆ ತಿಳಿಸಿದೆ. ಆದರೂ ಸಹ ವರ್ಷದಿಂದ ವರ್ಷಕ್ಕೆ ನೋಂದಣಿ ಹೆಚ್ಚಾಗಬೇಕು. ನಿರೀಕ್ಷೆಯ ಮಟ್ಟಕ್ಕೆ ಆಗುತ್ತಿಲ್ಲವೆಂಬ ಮಾತುಗಳು ಕೇಳಿಬರುತ್ತಿವೆ.

ರೈತರು ವಿಮಾ ಯೋಜನೆ ಕುರಿತು ಯೂನಿವರ್ಸಲ್ ಸೊಂಪೋ ಜನರಲ್ ಇನ್ಸೂರೆನ್ಸ್ ಕಂಪನಿಯ  ಟೋಲ್‍ಫ್ರೀ-18004257919 ಅಥವಾ ಆಯಾ ವ್ಯಾಪ್ತಿಯ ಬ್ಯಾಂಕ್ ಸಂಪರ್ಕಿಸಬಹುದು.