ಇತ್ತೀಚೆಗೆ ಈರುಳ್ಳಿ ಬೆಲೆ 100 ರ ಗಡಿ ದಾಟಿ ಗ್ರಾಹಕರ ಕಣ್ಣೀರು ತರಿಸಿತ್ತು. ಇದೀಗ ಆಲೂಗಡ್ಡೆ ಬೆಲೆ ಏರಿ ಗ್ರಾಹಕರ ತಲೆಬಿಸಿ ಮಾಡಿದೆ. ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಆಲೂಗಡ್ಡೆ 60 ರೂಪಾಯಿಗಿಂತ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 70-80 ರೂಪಾಯಿಗೆ ಮಾರಾಟವಾಗುತ್ತಿದೆ. ಒಂದೇ ವರ್ಷದಲ್ಲಿ ಆಲೂಗೆಡ್ಡೆ ಬೆಲೆಯಲ್ಲಿ ಶೇ.90ರಷ್ಟು ಏರಿಕೆಯಾಗುವ ಮೂಲಕ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಕಳೆದ ಎರಡು ವರ್ಷಗಳಲ್ಲಿ ಆಲೂಗಡ್ಡೆ ಇದೇ ಮೊದಲ ಬಾರಿಗೆ ರೂ.50ಕ್ಕಿಂತ ಹೆಚ್ಚು ಬೆಲೆ ಏರಿಕೆ ಕಂಡಿದೆ. ಶೇ.44ರಷ್ಟು ಈರುಳ್ಳಿ ಬೆಲೆ ಏರಿಕೆ ಕಂಡಿದ್ದರೇ, ಶೇ.92ರಷ್ಟು ಆಲೂಗಡ್ಡೆ ಇದೇ ಮೊದಲ ಬಾರಿಗೆ ಎರಡು ವರ್ಷಗಳಲ್ಲಿ ಏರಿಕೆ ಕಂಡಿದೆ.
ಗ್ರಾಹಕ ವ್ಯವಹಾರ ಸಚಿವಾಲಯದ ವಿಶ್ಲೇಷಣೆ ಪ್ರಕಾರ, ಆಲೂಗಡ್ಡೆಯ ಸಗಟು ದರಗಳು 108% ಏರಿಕೆಯಾಗಿದೆ. ವರ್ಷದ ಹಿಂದೆ ಕ್ವಿಂಟಾಲ್‌ಗೆ 1,739 ರೂ. ಇತ್ತು. ಈಗ 3,633 ರೂ.ಗೆ ಏರಿಕೆಯಾಗಿದೆ. ಈರುಳ್ಳಿಯ ಸಗಟು ದರವು ಕ್ವಿಂಟಾಲ್‌ಗೆ 5,545 ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷದ ಇದೇ ತಿಂಗಳು 1,739 ರೂಪಾಯಿ ಇತ್ತು. ಒಟ್ಟು 47% ಹೆಚ್ಚಳ ಕಂಡು ಬಂದಿದೆ.
ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಆಲೂಗಡ್ಡೆ ಆಮದಿಗೆ ನಿರ್ಬಂಧ, ದಾಸ್ತಾನು ಮಿತಿ ಮತ್ತಿತರ ಕ್ರಮಗಳನ್ನು ಕೇಂದ್ರ ಸರಕಾರ ಕೈಗೊಳ್ಳಲಿದೆ. ಕರ್ನಾಟಕದ ಬಹುತೇಕ ಭಾಗಗಳಲ್ಲಿ ಆಲೂಗಡ್ಡೆ ದರ 60-70 ರೂಪಾಯಿ ಇದೆ.
ಆಲುಗಡ್ಡೆ-ಈರುಳ್ಳಿ ಎರಡು ದರದಲ್ಲಿ ಹೆಚ್ಚಳವಾಗಿದೆ. ಆದರೆ ಇವರೆಡರ ನಡುವೆಯೂ ಬಾರೀ ವ್ಯತ್ಯಸವಿದೆ. ಅದು ಹೇಗೆ ಎಂದರೆ, ಈರುಳ್ಳಿಯ ಲಭ್ಯತೆ ಹೆಚ್ಚಿದ್ದು, ಮಾರುಕಟ್ಟೆಗೆ ಬಂದೋಡನೆ ಈರುಳ್ಳಿ ದರ ಕಡಿಮೆಯಾಗುತ್ತದೆ. ಆದರೆ ಆಲೂಗಟ್ಟೆ ಇಳುವರಿ ಕುಂಠಿತಗೊಂಡಿರುವುದರಿಂದ ದರ ಇಳಿಕೆ ಅಷ್ಟು ಸುಲಭವಲ್ಲ, ಆದರೂ ಸರ್ಕಾರ ದರ ಏರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ ಎನ್ನಲಾಗುತ್ತಿದೆ.
ಈ ವರ್ಷ ಆಲೂಗಡ್ಡೆ ಇಳುವರಿಯೂ ಗಣನೀಯ ಇಳಿಕೆ ಕಂಡಿದೆ. ಅತೀಹೆಚ್ಚು ಆಲೂ ಬೆಳೆಯುವ ರಾಜ್ಯವಾದ ಉತ್ತರಪ್ರದೇಶದಲ್ಲಿ ಪ್ರಸಕ್ತ ವರ್ಷ ಕೇವಲ 1.24 ಕೋಟಿ ಟನ್ ಆಲೂಗಡ್ಡೆ ಬೆಳೆಯಲಾಗಿದೆ. ಕಳೆದ ವರ್ಷ ಇದು 1.55 ಕೋಟಿ ಟನ್ ಆಗಿತ್ತು. ಅದೇ ರೀತಿ ಪಶ್ಚಿಮ ಬಂಗಾಳದಲ್ಲೂ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಬೆಳೆಯಲಾಗಿದೆ. ಹಾಗಾಗಿ ಆಲೂಗಡ್ಡೆಯ ಬೆಲೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ.