ಕೆಲವು ವಾರಗಳ ಹಿಂದೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಕೆಲವು ದಿನಗಳ ಹಿಂದೆ ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ಮೊನ್ನೆಯಷ್ಟೇ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ... ಇವರೆಲ್ಲಾ ಯಾವುದೋ ವಿವಾದ ಮಾಡಿಕೊಂಡಿದ್ದಾರಾ ಎಂದು ಯೋಚಿಸಬೇಡಿ. ಈ ಮುವರೂ ಜನಪ್ರತಿನಿಧಿಗಳು ರೈತರೊಂದಿಗೆ ಬೆರೆತು ಸುದ್ದಿಯಾಗಿದ್ದಾರೆ.
ಇತ್ತೀಚೆಗೆ ರಾಜಕಾರಣಿಗಳು ಅಥವಾ ಜನಪ್ರತಿನಿಧಿಗಳು ಅನ್ನದಾತ ರೈತನೊಂದಿಗೆ ಬೆರೆಯುವ ಸನ್ನಿವೇಶಗಳು ಮತ್ತೆ ಮತ್ತೆ ಮರುಕಳಿಸುತ್ತಲೇ ಇವೆ. ಒಬ್ಬರೇನೋ ತಮ್ಮ ಅಭಿಮಾನಿ ಕರೆಗೆ ಓಗೊಟ್ಟು ಆತನ ಹೊಲಕ್ಕೆ ಹೋಗಿ ಬಿತ್ತನೆ ಮಾಡಿದರೆ, ಮತ್ತೊಬ್ಬರು ಇಲಾಖೆಯ ಕಾರ್ಯಕ್ರಮದ ಸಂದರ್ಭದಲ್ಲಿ ಗದ್ದೆಗಿಳಿದು ನಾಟಿ ಮಾಡಿದರು. ಈಗ ಇಲ್ಲೊಬ್ಬರು ಶಾಸಕಿ, ಯುವಜನರು ಕೃಷಿ ಕ್ಷೇತ್ರದಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸುವ ಉದ್ದೇಶದಿಂದ ಗದ್ದೆಯಲ್ಲಿ ಟ್ರಾಕ್ಟರ್ ಓಡಿಸಿದ್ದಾರೆ.
ಹೌದು, ಇತ್ತೀಚಿನ ದಿನಗಳಲ್ಲಿ ಕೆಲವು ಜನಪ್ರತಿನಿಧಿಗಳು, ಅದರಲ್ಲೂ ಶಾಸಕರು ಮತ್ತು ಸಚಿವರು ಜನರೊಂದಿಗೆ ಬೆರೆಯುತ್ತಿದ್ದಾರೆ. ಮುಖ್ಯವಾಗಿ ದೇಶಕ್ಕೆ ಅನ್ನ ನೀಡುವ ಅನ್ನದಾತ ಹಾಗೂ ದೇಶದ ಬೆನ್ನೆಲುಬಾಗಿರುವ ರೈತರೊಂದಿಗೆ ಗುರುತಿಸಿಕೊಂಡು ಸುದ್ದಿಯಾಗುತ್ತಿದ್ದಾರೆ. ಇದು ಅವರು ಪ್ರಚಾರ ಪಡೆಯುವ ಪರಿಯೋ ಅಥವಾ ಶುದ್ಧ ಮನಸ್ಸಿನಿಂದ ಮಾಡುತ್ತಿರುವ ಕಾರ್ಯವೋ ಎಂಬುದನ್ನು ಚರ್ಚಿಸುವ ಸಮಯ ಇದಲ್ಲ. ಈಗಲಾದರೂ ನಮ್ಮನ್ನಾಳುವ, ನಮ್ಮನ್ನು ಪ್ರತಿನಿಧಿಸುವ ರಾಜಕಾರಣಿಗಳಿಗೆ ರೈತರು ನೆನಪಾಗುತ್ತಿದ್ದರೆ ಎನ್ನುವುದೇ ಮುಖ್ಯ.
ನೇಗಿಲ ಯೋಗಿಯಾದ ರೇಣುಕಾಚಾರ್ಯ
ಹೊನ್ನಾಳಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಸದಾ ಒಂದಿಲ್ಲೊAದು ಕಾರಣದಿಂದ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ತಮ್ಮ ಕ್ಷೇತ್ರದ ಜನರೊಂದಿಗೆ ಬೆರೆಯುವ ವಿಷಯದಲ್ಲಿ ರೇಣುಕಾಚಾರ್ಯ ಅವರನ್ನು ಮೀರಿಸುವಂತಹ ಶಾಸಕ ಅಥವಾ ಜನಪ್ರತಿನಿಧಿ ಮತ್ತೊಬ್ಬರಿಲ್ಲ. ಈಗ್ಗೆ ಕೆಲ ದಿನಗಳ ಹಿಂದೆ ಅವರ ಅಭಿಮಾನಿ ಹಾಗೂ ಲಾಕ್ಡೌನ್ನಿಂದಾಗಿ ಬೆಂಗಳೂರಿನಲ್ಲಿದ್ದ ಉದ್ಯೋಗ ಕಳೆದುಕೊಂಡು ಸ್ವಗ್ರಾಮಕ್ಕೆ ಬಂದು ಕೃಷಿಯಲ್ಲಿ ತೊಡಗಿರುವ ರಂಗನಾಥ್ ಎಂಬುವರು, ಶಾಸಕರು ತಮ್ಮ ಜಮೀನಿಗೆ ಭೇಟಿ ನೀಡಬೇಕೆಂದು ಮನವಿ ಮಾಡಿದ್ದರು. ಈ ಮನವಿಗೆ ಓಗೊಟ್ಟ ಶಾಸಕ ರೇಣುಕಾಚಾರ್ಯ, ಅದೇ ದಿನ ಹೊನ್ನಾಳಿ ತಾಲೂಕಿನ ಆರುಂಡಿ ಗ್ರಾಮಕ್ಕೆ ತೆರಳಿ, ರೈತನೊಂದಿಗೆ ಹೊಲಕ್ಕಿಳಿದರು.
ಜೋಡೆತ್ತುಗಳಿಗೆ ಕಟ್ಟಿದ್ದ ಕೂರಿಗೆಯನ್ನು ಭೂಮಿಗೆ ಹೂಡಿ, ಉಳುಮೆ ಮಾಡಲು ಆರಂಭಿಸಿದರು. ಸ್ವಲ್ಪ ಹೊತ್ತು ಕೂರಿಗೆ ಹಾಯಿಸಿದ ಶಾಸಕ, ಬಳಿಕ ಕೃಷಿ ಕಾರ್ಮಿಕರು, ರೈತ ಹಾಗೂ ಅವರ ಕುಟುಂಬದವರೊAದಿಗೆ ಸೇರಿ ಭೂಮಿಗೆ ಬೀಜಗಳನ್ನು ಕೂಡ ಬಿತ್ತಿದರು. ಬಳಿಕ ಸುತ್ತಮುತ್ತಲ ರೈತರೊಂದಿಗೆ ಸ್ವಲ್ಪ ಹೊತ್ತು ಹರಟಿ, ಎಲ್ಲರಿಗೂ ನಮಸ್ಕರಿಸಿ ಅಲ್ಲಿಂದ ಹೊರಟರು. ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ ಸಮಯ ಮಾಡಿಕೊಂಡು ಬೆಂಗಳೂರಿನಿAದ ತಮ್ಮ ಕ್ಷೇತ್ರ ಹೊನ್ನಾಳಿಗೆ ಬಂದಿದ್ದ ರೇಣುಕಾಚಾರ್ಯ, ಇದ್ದ ಅಲ್ಪ ಸಮಯದಲ್ಲೇ ರೈತನ ಹೊಲಕ್ಕೆ ಹೋಗಿ ಆತನೊಂದಿಗೆ ಕಾಲ ಕಳೆದದ್ದು ವಿಶೇಷ.
ಅಪ್ಪಟ ಕೃಷಿಕನಾದ ಕೃಷಿ ಸಚಿವರು
ನಾಲ್ಕೆöÊದು ದಿನಗಳ ಹಿಂದೆ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಉಡುಪಿ, ಮಂಗಳೂರು ಜಿಲ್ಲೆಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಉಡುಪಿ ತಾಲೂಕಿನ ಕಡೆಕಾರಿನಲ್ಲಿ ಕೇದಾರೋದ್ಧಾನ ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ ‘ಹಡಿಲು ಭೂಮಿ ಕೃಷಿ’ ಆಂದೋಲನದ ಭಾಗವಾಗಿ ಗದ್ದೆಯಯಲ್ಲಿ ಭತ್ತ ನಾಟಿ ಮಾಡಲಾಗುತ್ತಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಬಿ.ಸಿ.ಪಾಟೀಲರು, ಪಂಚೆ ಮೇಲೆ ಕಟ್ಟಿ ಗದ್ದೆಗಿಳಿದು ಭತ್ತದ ಸಸಿಗಳನ್ನು ನಾಟಿ ಮಾಡಿದರು. ಬಿಳಿ ಅಂಗಿ, ಬಿಳಿ ಪಂಚೆ, ಹಸಿರು ಶಲ್ಯ ಹಾಕಿದ್ದ ಕೃಷಿ ಸಚಿವರು ಅಪ್ಪಟ ಕೃಷಿಕನಂತೆ ಕಂಡರು.
ಭತ್ತ ನಾಟಿ ಮಾಡಿ ಸುಮ್ಮನಾಗದ ಸಚಿವರು, ಕೆಸರು ಗದ್ದೆಯಲ್ಲಿ ಟ್ರಾಕ್ಟರ್ ಓಡಿಸಿದರು. ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಿ ಖುಷಿಪಟ್ಟರು. ಮಾಧ್ಯಮಗಳ ಜತೆ ಮಾತನಾಡಿ, ‘ಕೃಷಿ ನನಗೆ ಹೊಸದಲ್ಲ. ನಾನೂ ರೈತನ ಮಗನೇ. ನಮ್ಮ ಹೊಲದಲ್ಲಿ ರಂಟೆ ಹೊಡೆದಿದ್ದೇನೆ, ಸಲಕೆ ಹಿಡಿದು ಕೆಲಸ ಮಾಡಿದ್ದೇನೆ, ನಾಟಿ ಕೂಡ ಮಾಡಿದ್ದೇನೆ. ಪೊಲೀಸ್ ಅಧಿಕಾರಿ ಹಾಗೂ ನಟನಾದ ಬಳಿಕ ಕೃಷಿ ಕಾರ್ಯ ಮರೆತುಹೋದಂತಾಗಿತ್ತು. ಈಗ ಮತ್ತೆ ಹಳೇ ನೆನಪುಗಳು ಮರುಕಳಿಸಿದಂತಾಯಿತು’ ಎಂದರು. ಹಾಗೇ, ಕೋವಿಡ್ನಿಂದಾಗಿ ‘ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ ಸ್ಥಗಿತವಾಗಿತ್ತು. ಈಗ ಭತ್ತ ನಾಟಿ ಮಾಡಿ, ರೈತರೊಂದಿಗೆ ಬೆರೆಯುವ ಮೂಲಕ ಕಾರ್ಯಕ್ರಮಕ್ಕೆ ಮರು ಚಾಲನೆ ಕೊಟ್ಟಂತಾಗಿದೆ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದ್ದರು.
ಟ್ರ್ಯಾಕ್ಟರ್ ಓಡಿಸಿದ ರೂಪಾಲಿ ನಾಯ್ಕ
ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು, ‘ಫಲವತ್ತತೆಯೆಡೆಗೆ ಮೊದಲ ಹೆಜ್ಜೆ’ ಎಂಬ ಕೃಷಿ ಚಟುವಟಿಕೆಗೆ ವಿನೂತನ ರೀತಿಯಲ್ಲಿ ಚಾಲನೆ ನೀಡಿ ಗಮನಸೆಳೆದರು. ಅಂಕೋಲ ತಾಲೂಕಿನ ವಂದಿಗೆ ಗ್ರಾಮದ ಗದ್ದೆಯಲ್ಲಿ ಟ್ರ್ಯಾಕ್ಟರ್ ಓಡಿಸಿದ ಶಾಸಕಿ, ತಾವ್ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟರು. ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಕೃಷಿ ಚಟುವಟಿಕೆ ಉತ್ತೇಜಿಸಲು ಮತ್ತು ಯುವಜನರನ್ನು ಕೃಷಿಯತ್ತ ಆಕರ್ಷಿಸಲು 50 ಎಕರೆ ಗೇಣಿ ಭೂಮಿ ಪಡೆದು ಕೃಷಿ ಮಾಡುವುದಾಗಿ ಶಾಸಕಿ ರೂಪಾಲಿ ನಾಯ್ಕ ಅವರು ಈ ಹಿಂದೆ ತಿಳಿಸಿದ್ದರು.
ಅದರಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕಿ, ‘ಕೃಷಿಯಲ್ಲಿ ಲಾಭವಿಲ್ಲ ಎಂಬ ಆಲೋಚನೆಯೊಂದಿಗೆ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇದರೊಂದಿಗೆ ದುಡಿಯಲು ಸಮರ್ಥರಾಗಿರುವ ಯುವಕರು ನಗರಗಳತ್ತ ಆಕರ್ಷಿತರಾಗಿ, ದುಡಿಮೆ ನೆಪದಲ್ಲಿ ಹುಟ್ಟೂರು, ಬಿತ್ತಿದ ಭೂಮಿಯನ್ನೆಲ್ಲಾ ತೊರೆದು ನಗರ ಸೇರಿಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಮಗಳಲ್ಲಿನ ಕೃಷಿ ಭೂಮಿಗಳು ಬಂಜರಾಗುತ್ತಿವೆ. ಆಹಾರ ಮತ್ತು ಆಹಾರವನ್ನು ಉತ್ಪಾದಿಸುವ ಕೃಷಿ ಹಾಗೂ ಕೃಷಿಯ ಮಹತ್ವವನ್ನು ಲಾಕ್ಡೌನ್ ಸಂದರ್ಭವು ಜನರಗೆ ತಿಳಿಸಿಕೊಟ್ಟಿದೆ’ ಎಂದು ಅಭಿಪ್ರಾಯಪಟ್ಟರು.
‘ನನ್ನ ಕ್ಷೇತ್ರದ ಕೃಷಿ ವಲಯದಲ್ಲಿ ಬದಲಾವಣೆ ತರಲು ಮತ್ತು ರೈತರನ್ನು ಉತ್ತೇಜಿಸುವ ಉದ್ದೇಶದಿಂದ ‘ಫಲವತ್ತತೆಯೆಡೆಗೆ ಮೊದಲ ಹೆಜ್ಜೆ’ ಎಂಬ ಕೃಷಿ ಚಟುವಟಿಕೆ ಆರಂಭಿಸಿದ್ದೇನೆ. ಇದು ನನ್ನ ಕನಸಿನ ಕೂಸು. ಮುಂದಿನ ದಿನಗಳಲ್ಲಿ ತಾಲೂಕಿನ ಎಪಿಎಂಸಿ ಮಾರುಕಟ್ಟೆ ಅಭಿವೃದ್ಧಿಪಡಿಸಿ, ಸ್ಥಳೀಯ ರೈತರಿಗೆ ಹೆಚ್ಚಿನ ಸೌಲಭ್ಯ ಸಿಗುವಂತೆ ಪ್ರಯತ್ನಿಸುವೆ’ ಎಂದು ಶಾಸಕಿ ರೂಪಾಲಿ ಹೇಳಿದರು. ಮೊದಲೇ ಹೇಳಿದಂತೆ ಜನಪ್ರತಿನಿಧಿಗಳ ಈ ನಡೆ ಶುದ್ಧ ಮನಸ್ಸಿನಿಂದ ಕೂಡಿದೆಯೋ ಅಥವಾ ಪ್ರಚಾರಕ್ಕಾಗಿ ಮಾಡಿದ ತಂತ್ರವೋ ಎಂದು ಚರ್ಚಿಸುವ ಸಮಯ ಇದಲ್ಲ. ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸುವುದು ಕೃಷಿ ಧರ್ಮ. ಹೀಗಾಗಿ ಆಗುತ್ತಿರುವುದೆಲ್ಲವೂ ಒಳ್ಳೆಯದಕ್ಕೇ ಆಗುತ್ತಿದೆ ಅಂದುಕೊಳ್ಳೋಣ!