ಗಣರಾಜ್ಯೋತ್ಸವದ ದಿನ ಜನವರಿ 26 ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ಉದ್ದೇಶಿಸಿದ್ದ ರೈತರಿಗೆ ಕೊನೆಗೂ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ. ಈ ಮೂಲಕ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ರೈತರ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ.
ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಯಲ್ಲಿ ಕಳೆದ ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಶುಕ್ರವಾರ ಕೇಂದ್ರ ಸಚಿವರು ನಡೆಸಿದ 11ನೇ ಸುತ್ತಿನ ಮಾತುಕತೆಯೂ ವಿಫಲವಾಗಿದ್ದು, ಗಣರಾಜ್ಯೋತ್ಸವದ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ದೆಹಲಿ ಪೊಲೀಸರು ಶನಿವಾರ ಅನುಮತಿ ನೀಡಿದ್ದಾರೆ ಎಂದು ರೈತ ಮುಖಂಡ ಅಭಿಮನ್ಯು ಕೊಹಾರ್ ಅವರು ತಿಳಿಸಿದ್ದಾರೆ.
ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶದ ಸಾವಿರಾರು ರೈತರು ಜನವರಿ 26 ರಂದು ದೆಹಲಿಯತ್ತ ಟ್ಯಾಕ್ಟರ್ ಚಲಾಯಿಸಲಿದ್ದಾರೆ ಎಂದು ರೈತ ಸಂಘಟನೆಗಳು ಹೇಳಿವೆ. ಪ್ರಧಾನಿ ನರೇಂದ್ರ ಮೋದಿ ಸೇನಾ ಪರೇಡ್‌ನಲ್ಲಿ ಪಾಲ್ಗೊಳ್ಳುವ ವೇಳೆಯಲ್ಲೇ ಇತ್ತ ರೈತರಿಂದ ಟ್ರ್ಯಾಕ್ಟರ್ ರ‍್ಯಾಲಿ ನಡೆಯಲಿದೆ. ಕೆಲವರು ರ‍್ಯಾಲಿಗೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್‌ಗೂ ಮನವಿ ಸಲ್ಲಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಇದು ನಮ್ಮ ವ್ಯಾಪ್ತಿಯದ್ದಲ್ಲ ಎಂದು ಹೇಳಿ ನಿರ್ಧಾರವನ್ನು ದೆಹಲಿ ಪೊಲೀಸರಿಗೆ ಬಿಟ್ಟಿತ್ತು. ಇದೀಗ ದಿಲ್ಲಿ ಪೊಲೀಸರು ರ‍್ಯಾಲಿಗೆ ಅನುಮತಿ ನೀಡಿದ್ದಾರೆ.
ಈ ಮಧ್ಯೆ ಜನವರಿ 26 ರಂದು ರೈತರು ಕಿಸಾನ್ ಗಣತಂತ್ರ ಪರೇಡ್ ನಡೆಸಲಿದ್ದಾರೆ. ಬ್ಯಾರಿಕೇಡ್ ಗಳನ್ನು ತೆರೆಯಲಾಗುತ್ತಿದ್ದು, ನಾವು ದೆಹಲಿ ಪ್ರವೇಶಿಸಲಿದ್ದೇವೆ.ಅಂತಿಮ ರೂಪರೇಷೆ ನಾಳೆಯೊಳಗೆ ಸಿದ್ದವಾಗಲಿದೆಎಂದು ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.