News

PM Suraksha ವಿಮೆ ಹಣ ನೀಡಲು ಒಪ್ಪದ ವಿಮಾ ಕಂಪನಿಗೆ ಬರೋಬ್ಬರಿ ₹2,60,000 ದಂಡ!

13 July, 2023 11:27 AM IST By: Kalmesh T
PM Suraksha Insurance Refusal: United India Company Fined ₹2,60,000!

PM Suraksha Insurance: ಪ್ರಧಾನ ಮಂತ್ರಿ ಸುರಕ್ಷಾ ವಿಮೆ ತಿರಸ್ಕರಿಸಿದ್ದ ಯುನೈಟೆಡ್ ಇಂಡಿಯಾ ವಿಮಾ ಕಂಪನಿಗೆ ಬರೋಬ್ಬರಿ 2 ಲಕ್ಷ 60 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

ಧಾರವಾಡ ಶೀಲವಂತರ ಓಣಿ ನಿವಾಸಿ ಮಹಾಂತೇಶ ತುರಮರಿರವರ ತಾಯಿ ಶ್ರೀಮತಿ ಯಲ್ಲವ್ವ ಧಾರವಾಡ ಜಯನಗರದ ಕೆ.ವಿ.ಜಿ. ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಸದರಿ ಬ್ಯಾಂಕ್ ಮತ್ತು ಯುನೈಟೆಡ್ ಇನ್ಸುರೆನ್ಸ್ ಕಂಪನಿಯ ಒಡಂಬಡಿಕೆಯಂತೆ ಸದರಿ ಖಾತೆದಾರರನ್ನು ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ ರೂ.2 ಲಕ್ಷಕ್ಕೆ ವಿಮೆ ಮಾಡಿಸಿದ್ದರು.

ಸದರಿ ಖಾತೆದಾರರ ಉಳಿತಾಯ ಖಾತೆಯಿಂದ ಪ್ರತಿ ವರ್ಷ ರೂ.12 ಪ್ರಿಮಿಯಮ್ ಹಣ ಕಟ್ಟಾಗಿ ವಿಮಾ ಕಂಪನಿಗೆ ಹೋಗುತ್ತಿತ್ತು.

ದಿ:27/04/2021 ರಂದು ಖಾತೆದಾರಳಾದ ಶ್ರೀಮತಿ ಯಲ್ಲವ್ವ ಕೆಲಗೇರಿಯ ಕೆರೆಗೆ ಬಟ್ಟೆ ತೊಳೆಯಲು ಹೋದಾಗ ಅಕಸ್ಮಾತಾಗಿ ಕೆರೆಯ ನೀರಿನಲ್ಲಿ ಮುಳುಗಿ ಮೃತರಾಗಿದ್ದರು.

ಆ ರೀತಿ ಮೃತಳ ಸಾವು ವಿಮಾ ಪಾಲಸಿ ನಿಯಮಕ್ಕೆ ಒಳಪಟ್ಟಿದ್ದರಿಂದ ರೂ.2 ಲಕ್ಷ ಪರಿಹಾರ ಕೊಡುವಂತೆ ಮೃತಳ ಮಗ/ದೂರುದಾರ ವಿಮಾ ಕಂಪನಿಗೆ ಮತ್ತು ಕೆ.ವಿ.ಜಿ ಬ್ಯಾಂಕಿಗೆ ಕ್ಲೇಮ ಅರ್ಜಿ ಸಲ್ಲಿಸಿದ್ದರು.

ಮೃತ ಯಲ್ಲವ್ವ ನೀರಿನಲ್ಲಿ ಮುಳುಗಿ ಅಕಸ್ಮಾತ ಆಗಿ ಸತ್ತಿಲ್ಲ. ಆದರೆ, ಅವರ ಸಾವು ಆತ್ಮಹತ್ಯೆ ಅಂತಾ ವಿಮಾ ಕಂಪನಿಯವರು ಆಕ್ಷೇಪಿಸಿ ಕ್ಲೇಮ ಅರ್ಜಿಯನ್ನು ತಿರಸ್ಕರಿಸಿದ್ದರು.

ಆ ರೀತಿ ಮಾಡಿರುವ ವಿಮಾ ಕಂಪನಿಯವರ ನಡಾವಳಿಕೆ ವಿಮಾ ನಿಯಮಕ್ಕೆ ವಿರುದ್ಧವಾದುದು ಮತ್ತು ಅವರಿಂದ ಸೇವಾ ನ್ಯೂನ್ಯತೆ ಆಗಿದೆ ಎಂದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಫಿರ್ಯಾದಿ ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ.ಅ.ಬೋಳಶೆಟ್ಟಿ ಮತ್ತು ಪ್ರಭು.ಸಿ. ಹಿರೇಮಠ ಮೃತರಾದ ಯಲ್ಲವ್ವನ ಹೆಸರಿನಲ್ಲಿರುವ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯ ವಿಮಾ ಪಾಲಸಿ ಅವರು ಮೃತರಾಗುವ ಕಾಲಕ್ಕೆ ಚಾಲ್ತಿಯಲ್ಲಿದೆ.

ಮೃತರು ಬಟ್ಟೆ ತೊಳೆಯುವಾಗ ಅಕಸ್ಮಾತಾಗಿ ಕೆಲಗೇರಿಯ ಕೆರೆ ನೀರಿನಲ್ಲಿ ಮುಳುಗಿ ಸತ್ತಿರುವುದರಿಂದ ಅವರ ಸಾವು ಆಕಸ್ಮಿಕವಾಗಿದೆ. ಅದು ಆತ್ಮಹತ್ಯೆ ಎನ್ನುವ ವಿಮಾ ಕಂಪನಿಯ ಆಕ್ಷೇಪಣೆಯನ್ನು ಒಪ್ಪಲಾಗುವುದಿಲ್ಲ ಅಂತಾ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

ವಿಮೆ ತಿರಸ್ಕರಿಸಿರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ಮೃತರ ವಾರಸುದಾರನಾದ ಅವರ ಮಗ/ದೂರುದಾರನಿಗೆ ವಿಮಾ ಹಣ ರೂ.2 ಲಕ್ಷ ಹಾಗೂ

ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆಗೆ ರೂ.50 ಸಾವಿರ ಪರಿಹಾರ ಮತ್ತು ರೂ.10 ಸಾವಿರ ಪ್ರಕರಣದ ಖರ್ಚು ವೆಚ್ಚ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಆದೇಶಿಸಿದೆ.