80ರ ಇಳಿ ವಯಸ್ಸಿನಲ್ಲಿ ಸ್ವಂತ ಖರ್ಚಿನಲ್ಲಿ 14 ಕೆರೆಗಳನ್ನು ಕಟ್ಟಿಸಿದ್ದಾರೆ ಎಂದರೆ ಯಾರೂ ನಂಬಲು ಸಾಧ್ಯವಿಲ್ಲ. ನೋಡಲು ಸಾಮಾನ್ಯ ವ್ಯಕ್ತಿ, ಆದರೆ ಮಾಡಿದ್ದು ಅಸಮಾನ್ಯ ಕೆಲಸ. ಇವರು ಮಾಡಿದ ಅಸಾಧಾರಣ ಜಲಕ್ರಾಂತಿಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರದಮಲ್ಲಿ ಮನತುಂಬಿ ಶ್ಲಾಘಿಸಿದ್ದಾರೆ.
ಭಾನುವಾರ ಬೆಳಗ್ಗೆ ಮನ್ ಕಿ ಬಾತ್ ತಿಂಗಳ ಬಾನುಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಕಾಮೇಗೌಡ ಎಂಬ ರೈತ ತಮ್ಮ ಸ್ವಂತ ಖರ್ಚಿನಲ್ಲಿ ಸುಮಾರು 14 ಕೆರೆಗಳನ್ನು ನಿರ್ಮಿಸಿದ್ದಾರೆ. ಇವರು ರೈತರಾದರೂ ವ್ಯಕ್ತಿತ್ವ ಅಸಾಧಾರಣ, ಅವರ ಸಾಧನೆ ದಿಗ್ಭ್ರಮೆಗೊಳಿಸುವಂತದ್ದು,. ತಮ್ಮ ಊರಿನ ಸುತ್ತಮುತ್ತಲಿನಲ್ಲಿ 16 ಕೆರೆಗಳನ್ನು ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡುವ ಮೂಲಕ ಜಲರಕ್ಷಕನೆಂದೇ ಖ್ಯಾತಿಗಳಿಸಿರುವ ಇವರ ಸಮಾಜ ಕಾರ್ಯ ಷಶ್ಲಾಘನೀಯ. ತಮ್ಮ ಇಳಿ ವಯಸ್ಸಿನಲ್ಲಿ ಕುರಿ, ಮೇಕೆಗಳನ್ನು ಮೇಯಿಸುತ್ತಾ, ನೀರಿನ ಸಂರಕ್ಷಣೆ ಮಾಡುತ್ತಿದ್ದಾರೆ. ನೀರಿನ ಕೊರತೆಯನ್ನು ನೀಗಿಸಲು ಗೌಡರು ಸಣ್ಣ ಸಣ್ಣ ಕೆರೆಗಳನ್ನು ನಿರ್ಮಿಸಲು ಶುರು ಮಾಡಿದರು.. ಅವರು ನಿರ್ಮಿಸಿದ ಕೆರೆಗಳು ಗಾತ್ರದಲ್ಲಿ ಚಿಕ್ಕವಾದರೂ, ಅವರ ಪರಿಶ್ರಮ ಮಾತ್ರ ದೊಡ್ಡದು ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.
ಕಾಡಿನ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ಬಿಟ್ಟು ಬಿಡದಂತೆ ಕಾಡಿ, ತಾವು ನೆಟ್ಟ ಗಿಡಗಳ ಸಂರಕ್ಷಣೆಗೆ ಮುಂದಾಗಿದ್ದಾರೆ. ಬೆಟ್ಟದ ಮೇಲೆ ಕಟ್ಟೆ, ಕಾಲುವೆ, ರಸ್ತೆ ನಿರ್ಮಿಸಿದ್ದಾರೆ. ಬೆಟ್ಟದ ತಪ್ಪಲಿನಲ್ಲಿ ಸಾವಿರಾರು ಗಿಡ ನೆಟ್ಟು ಬೆಳೆಸುವುದರ ಮೂಲಕ ಪರಿಸರ ಸಂರಕ್ಷಕರಾಗಿ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ.
ಬೆಟ್ಟದ ತಪ್ಪಲಿನಲ್ಲಿ ಗಿಡ ನೆಟ್ಟು ತಮ್ಮ ಪರಿಸರ ಕಾಳಜಿ ಮೆರೆದಿದ್ದಾರೆ. ಈ ಕಾರ್ಯದಿಂದ ಬೆಟ್ಟದ ತಪ್ಪಲು ಹಚ್ಚಹಸಿರಾಗಿದೆ. ಯಾವುದೇ ಪ್ರತಿಫಲಾಕ್ಷೆಯಿಲ್ಲದೆ ಕೆಲಸ ಮಾಡುತ್ತಿರುವ ಇವರ ಸೇವೆಗೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಬಂದಿವೆ. ರಾಷ್ಟ್ರಮಟ್ಟದಲ್ಲಿಯೂ ಇವರ ಕಾರ್ಯ ಶ್ಲಾಘನೆ ವ್ಯಕ್ತವಾಗಿದೆ.
------------
ದೊಡ್ಡವರು ನನ್ನ ಕೆಲಸಕ್ಕೆ ಗುರುತಿಸಿದ್ದು ರಾಜ್ಯಕ್ಕೆ ಮತ್ತು ತಮಗೆ ಹೆಮ್ಮೆಯ ವಿಷಯ. ಹಸಿದವನಿಗೆ ಅನ್ನ ನೀಡಿದಾಗ ಎಷ್ಟು ಸಂತೃಪ್ತಿಯಾಗುತ್ತದೆಯೋ ಅಷ್ಟೇ ಮನಸ್ಸಿಗೆ ಖುಷಿ ತಂದಿದೆ. ಎಲ್ಲವನ್ನೂ ತ್ಯಾಗ ಮಾಡಿ ಕೆರೆ-ಕಟ್ಟೆ, ಗಿಡ-ಮರ ಬೆಳೆಸಿದ್ದು ಸಾರ್ಥಕ ಎನಿಸುತ್ತಿದೆ. ನಾನು ಇಂದೋ ನಾಳೆಯೋ ಸಾಯಬಹುದು, ಆದರೆ ಕಾಮೇಗೌಡರೆಂಬ ವ್ಯಕ್ತಿ ಕೆರೆ ಕಟ್ಟಿಸಿದ್ದ. ಗಿಡಮರ ಬೆಳೆಸಿದ್ದ ಎಂದು ನಮ್ಮನ್ನು ಸ್ಮರಿಸುವುದೇ ದೊಡ್ಡ ಸಂತೋಷ. ಎಷ್ಟು ದಿನ ಬದುಕುತ್ತೇವೆ ಎಂಬುದು ಮುಖ್ಯವಲ್ಲ, ಇದ್ದಷ್ಟು ದಿನ ನಾಲ್ಕು ಜನರಿಗೆ ಉಪಯೋಗವಾಗುವ ಕೆಲಸ ಮಾಡಿ ಹೋಗುವದೇ ಸಾರ್ಥಕ.
ಕಾಮೇಗೌಡ.