News

ಹಳ್ಳಿಗರಿಗೂ ಸಿಗಲಿದೆ ಡಿಜಿಟಲ್‌ ಆಸ್ತಿ ಮಾಲಕತ್ವ ದಾಖಲೆ

12 October, 2020 9:54 AM IST By:

ಗ್ರಾಮೀಣ ಜನರ ಆಸ್ತಿ ಲಪಟಾಯಿಸಲು ಇನ್ನು ಮುಂದೆ ಯಾರಿಗೂ ಸಾಧ್ಯವಿಲ್ಲ. ಸ್ವಾಮಿತ್ವ ಯೋಜನೆಯಿಂದ ಗ್ರಾಮ ಭಾರತದ ವರ್ಚಸ್ಸು ಬದಲಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಅವರು ಗ್ರಾಮೀಣ ಪ್ರದೇಶದ ಮನೆಗಳ ಮಾಲೀಕರಿಗೆ ಮಾಲೀಕತ್ವದ ಭೌತಿಕ ಆಸ್ತಿ ಕಾರ್ಡ್ ನೀಡುವ 'ಸ್ವಾಮಿತ್ವ' ಯೋಜನೆಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿ ಮಾತನಾಡಿದರು.

''ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಪರಿವರ್ತನೆಗೆ ಇದೊಂದು ಐತಿಹಾಸಿಕ ಹೆಜ್ಜೆಯಾಗಿದೆ. ‘ಗ್ರಾಮೀಣ ಭಾಗದ ಜನರು ಬ್ಯಾಂಕ್‌ನಲ್ಲಿ ಸಾಲ ಮತ್ತು ಇತರ ಹಣಕಾಸು ಸೌಲಭ್ಯಗಳನ್ನು ಪಡೆಯುವುದನ್ನು ಈ ಯೋಜನೆಯು ಸುಲಭವಾಗಿಸಲಿದೆ. ವಿಶ್ವದಲ್ಲಿ ಕೇವಲ ಮೂರನೇ ಒಂದರಷ್ಟು ಜನರು ಮಾತ್ರ ತಮ್ಮ ಆಸ್ತಿಗೆ ಕಾನೂನುಬದ್ಧ ದಾಖಲೆಗಳನ್ನು ಹೊಂದಿದ್ದಾರೆ. ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಭೂಮಿಯ ಒಡೆತನದ ಹಕ್ಕಿಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಹೊಂದಿರುವುದು ಅತ್ಯಂತ ಮುಖ್ಯ ಎಂದರು.

  “ಸರ್ವೇ ಆಫ್ ವಿಲೇಜಸ್‌ ಆ್ಯಂಡ್‌ ಮ್ಯಾಪಿಂಗ್‌ ವಿದ್‌ ಇಂಪ್ರೊ ವೈಸ್ಡ್ ಟೆಕ್ನಾಲಜಿ ಇನ್‌ ವಿಲೇಜ್‌ ಏರಿಯಾಸ್‌’ (ಸ್ವಾಮಿತ್ವ -SVAMI TVA) ಯೋಜನೆಯಡಿ ಮೊದಲ ಬಾರಿಗೆ ಗ್ರಾಮೀಣ ಪ್ರದೇಶದ ಜಮೀನಿನ ಅಳತೆಯನ್ನು ಡ್ರೋನ್‌ ಮೂಲಕ ನಡೆಸಲಾಗಿದೆ. ಮಾಲಕರಿಗೆ ಆಧಾರ್‌ ಮಾದರಿಯ ಕಾರ್ಡ್‌ ಗಳನ್ನು ನೀಡಲಾಗುತ್ತದೆ.  ಮುಂದಿನ 3ರಿಂದ 4 ವರ್ಷಗಳ ಅವಧಿಯಲ್ಲಿ ದೇಶದ ಪ್ರತಿಯೊಂದು ಗ್ರಾಮದ ನಿವಾಸಿಗೂ ಇದೇ ಮಾದರಿಯ ಆಸ್ತಿ ಮಾಲಕತ್ವದ ಕಾರ್ಡ್‌ ಗಳನ್ನು ವಿತರಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ. ಆಸ್ತಿ ಹಕ್ಕಿನಿಂದಾಗಿ ಗ್ರಾಮೀಣ ಪ್ರದೇಶದಲ್ಲಿರುವ ಯುವ ಜನತೆಗೆ ಆತ್ಮವಿಶ್ವಾಸದಿಂದ ಮುಂದಿನ ಹೆಜ್ಜೆ ಇಡಲು ನೆರವಾಗಲಿದೆ ಎಂದಿದ್ದಾರೆ.

ಪ್ರಧಾನಮಂತ್ರಿಗಳ ಕಚೇರಿ (ಪಿಎಂಒ)ಯು, 1.32 ಲಕ್ಷ ಮಂದಿಯ ಮೊಬೈಲ್‌ ಫೋನ್‌ಗೆ ಎಸ್‌ಎಂಎಸ್‌ ಲಿಂಕ್‌ ಕಳುಹಿಸಲಾಗುತ್ತದೆ. ಅದನ್ನು ತೆರೆಯುವ ಮೂಲಕ ಆಧಾರ್‌ ಮಾದರಿಯ ಆಸ್ತಿಯ ಮಾಲಕತ್ವ ದಾಖಲೆಗಳನ್ನು ಪಡೆದುಕೊಳ್ಳಬಹುದು. ಅನಂತರದ ದಿನಗಳಲ್ಲಿ ರಾಜ್ಯ ಸರಕಾರಗಳೇ ಜಮೀನಿನ ಮಾಲಕತ್ವದ ದಾಖಲೆಗಳನ್ನು ನೀಡಲಿವೆ ಎಂದಿದೆ.

ಸಾಲ ಸುಲಭ:

ಸ್ವಾಮಿತ್ವ ಕಾರ್ಡ್ ನಿಂದಾಗಿ ಹಳ್ಳಿಗಳ ಯುವ ಜನರು ಇನ್ನು ಮುಂದೆ ಸ್ವಂತ ಉದ್ಯೋಗ ಆರಂಭಿಸಲು ಬ್ಯಾಂಕ್ ಗಳಿಂದ ಸಾಲ ಪಡೆಯಬಹುದು. ಇದಕ್ಕಿಂತ ಮೊದಲು ಮನೆದಾಖಲೆಗಳಿಲ್ಲದ ಹಳ್ಳಿಗರಿಗೆ ಅಡ ಇಟ್ಟು ಸಾಲ ಪಡೆಯಲು ಆಗುತ್ತಿರಲಿಲ್ಲ.

ಸ್ವಾಮಿತ್ವ ಯೋಜನೆ ಅಂದರೇನು?

ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ವರ್ಷಗಳಿಂದ ವಾಸ ಮಾಡುತ್ತಿರುವ ಹಾಗೂ ತಮ್ಮ ಜಾಗದ ದಾಖಲೆ ಹೊಂದಿರದವರಿಗೆ ಆಧಾರ್‌ ಕಾರ್ಡ್‌ ಮಾದರಿಯಲ್ಲಿ ಹಕ್ಕುಪತ್ರ (ಪ್ರಾಪರ್ಟಿ ಕಾರ್ಡ್‌) ನೀಡುವ ಯೋಜನೆ ಇದಾಗಿದೆ. ಗ್ರಾಮಸ್ಥರು ಸಾಲ ಅಥವಾ ಇತರೆ ಹಣಕಾಸು ಸೌಲಭ್ಯಗಳನ್ನು ಪಡೆಯಲು ಈ ಕಾರ್ಡ್‌ಗಳನ್ನು 'ಆರ್ಥಿಕ ಆಸ್ತಿ'ಯನ್ನಾಗಿ ಬಳಸಬಹುದಾಗಿದೆ. 2024ರ ಒಳಗೆ ದೇಶದ ಎಲ್ಲ 6.62 ಲಕ್ಷ ಗ್ರಾಮಗಳಿಗೆ ಯೋಜನೆ ವಿಸ್ತರಿಸುವುದು ಕೇಂದ್ರದ ಗುರಿಯಾಗಿದೆ. ಯೋಜನೆಯಡಿಯಲ್ಲಿ ರೈತರ ಜಮೀನುಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿವೆ. ಯೋಜನೆಯ ಫಲಾನುಭವಿಗಳು 'ಎಸ್‌ಎಂಎಸ್‌' ಲಿಂಕ್‌ ಬಳಸಿ ಆಸ್ತಿ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು.