News

ಪಿಎಂ ಉಜ್ವಲ ಯೋಜನೆ 2.0ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

10 August, 2021 3:08 PM IST By:
PM MOdi

ಪ್ರಧಾನಿ ನರೇಂದ್ರಮೋದಿ ಅವರು ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಇಂದು 2ನೇ ಹಂತದ ಉಜ್ವಲ ಯೋಜನೆಗೆ ವಿಧ್ಯುಕ್ತ ಚಾಲನೆ ನೀಡಿದ್ದಾರೆ. Ujjwala Yojana 2.0 ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಉಜ್ವಲ ಯೋಜನೆಯನ್ನು ಹೊಸ ಪ್ಯಾಕೇಜಿಂಗ್‌ನೊಂದಿಗೆ ಆರಂಭಿಸಲಿದೆ.

ದೇಶದಲ್ಲಿ ಸೌದೆ ಒಲೆ ಬಳಕೆಯನ್ನು ತಪ್ಪಿಸುವ ದೃಷ್ಟಿಯಿಂದ ಬಡ ವರ್ಗದ ಜನತೆಗೆ ಉಚಿತ ಅನಿಲ ಹಾಗೂ ಸ್ಟೌ ವಿತರಿಸುವ ಕಾರ್ಯಕ್ರಮ ಇದಾಗಿದೆ. ಈ ಯೋಜನೆಯಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಂಪರ್ಕ ಒದಗಿಸಲಾಗುವುದು. ಈ ಯೋಜನೆಯಡಿಯಲ್ಲಿ ಫಲಾನುಭವಿಗೆ ಉಚಿತ ಗ್ಯಾಸ್ ಸಂಪರ್ಕ, ಗ್ಯಾಸ್ ಸ್ಟೋವ್ ಜೊತೆಗೆ ಮೊದಲ ಬಾರಿಗೆ ತುಂಬಿದ ಸಿಲಿಂಡರ್ ದೊರೆಯಲಿದೆ.

ಏನಿದು ಉಜ್ವಲ ಯೋಜನೆ?

ಮೊಟ್ಟ ಮೊದಲಿಗೆ ಈ ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಪ್ರಾರಂಭವಾಗಿದ್ದು, 2016ರ ಮೇ 1ರಂದು. ಅಂದು ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು. ಹಳ್ಳಿಗಳಲ್ಲಿ ಇನ್ನೂ ಮಹಿಳೆಯರು ಉರುವಲನ್ನೇ ಉಪಯೋಗಿಸಿ ಅಡುಗೆ ಮಾಡುತ್ತಿದ್ದಾರೆ. ಆ ಕಷ್ಟವನ್ನು ತಪ್ಪಿಸಿ, ಗ್ರಾಮೀಣ ಪ್ರದೇಶಗಳಿಗೂ ಎಲ್​ಪಿಜಿ ಗ್ಯಾಸ್​ ಕನೆಕ್ಷನ್​ ಕೊಡುವ ಉದ್ದೇಶದೊಂದಿಗೆ, ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಈ ಉಜ್ವಲ ಯೋಜನೆಯನ್ನು ಪರಿಚಯಿಸಿತು.

2017 ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರದ ಉಜ್ವಲ ಯೋಜನೆಯನ್ನು ಸಾಕಷ್ಟು ಚರ್ಚಿಸಲಾಯಿತು ಮತ್ತು ಇದು ಬಿಜೆಪಿಯ ದೊಡ್ಡ ಗೆಲುವಿಗೆ ಕಾರಣವಾಗಿತ್ತು. ಆದರೆ, ಉಜ್ವಲ ಯೋಜನೆಯ ಮೊದಲ ಆವೃತ್ತಿಯಲ್ಲಿ, ಸರ್ಕಾರವು LPG ಸಂಪರ್ಕಗಳಿಗೆ ರೂ 1600 (ಠೇವಣಿ ಹಣ) ದ ಆರ್ಥಿಕ ಸಹಾಯವನ್ನು ಮಾತ್ರ ನೀಡುತ್ತಿತ್ತು. ಈ ಯೋಜನೆಯಡಿ, ಗ್ಯಾಸ್ ಸಂಪರ್ಕಗಳನ್ನು ಪಡೆಯುವ ಕುಟುಂಬಗಳು ಯಾವುದೇ ಬಡ್ಡಿ ಇಲ್ಲದೆ ಸ್ಟೌವ್ ಮತ್ತು ಸಿಲಿಂಡರ್‌ಗಳಿಗಾಗಿ ಸಾಲ ತೆಗೆದುಕೊಳ್ಳಬಹುದಾಗಿತ್ತು. Ujjwala Scheme 2.0 ಯೋಜನೆಯ ಅಡಿ ಕೇಂದ್ರ ಸರ್ಕಾರ ಈ ಆರ್ಥಿಕ ವರ್ಷದಲ್ಲಿ ಸುಮಾರು ಒಂದು ಕೋಟಿ ಗ್ಯಾಸ್ ಸಂಪರ್ಕ ಬಡವರಿಗೆ ಉಚಿತವಾಗಿ ಕಲ್ಪಿಸುವ ಗುರಿ ಹೊಂದಿದೆ.

ಪ್ರಸಕ್ತ ಸಾಲಿನ ಮುಂಗಡಪತ್ರದಲ್ಲಿ ಪಿಎಂಯುವೈ ಯೋಜನೆಯಡಿ ಹೆಚ್ಚುವರಿ ಸಂಪರ್ಕಗಳು 2ನೇ ಹಂತದಲ್ಲಿ ಈ ಹಿಂದಿನ ಹಂತದ ವ್ಯಾಪ್ತಿಗೆ ಒಳಪಡದ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಠೇವಣಿರಹಿತ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವ ಗುರಿ ಹೊಂದಿದೆ.
ಠೇವಣಿಮುಕ್ತ ಎಲ್‌ಪಿಜಿ ಸಂಪರ್ಕದೊಂದಿಗೆ ಉಜ್ವಲ 2ನೇ ಹಂತದ ಮೊದಲ ಮರುಪೂರ್ಣ ಮತ್ತು ರೀಫಿಲ್ಲಿಂಗ್ ಮತ್ತು ಹಾಟ್‌ಪ್ಲೇಟ್‌ನ್ನು ಫಲಾನುಭವಿಗಳಿಗೆ ಉಚಿತವಾಗಿ ಕೇಂದ್ರಸರ್ಕಾರ ನೀಡುತ್ತಿದೆ.
ಉಜ್ವಲ 2.0 ರಲ್ಲಿ, ವಲಸಿಗರು ಪಡಿತರ ಚೀಟಿ ಅಥವಾ ವಿಳಾಸ ಪುರಾವೆ ಸಲ್ಲಿಸುವ ಅಗತ್ಯವಿಲ್ಲ. ‘ಕುಟುಂಬ ಘೋಷಣೆ’ ಮತ್ತು ‘ವಿಳಾಸದ ಪುರಾವೆ’ ಎರಡಕ್ಕೂ ಸ್ವಯಂ ಘೋಷಣೆ ಸಾಕು. ಉಜ್ವಲ 2.0 ಯು ಎಲ್‌ಪಿಜಿಗೆ ಸಾರ್ವತ್ರಿಕ ಪ್ರವೇಶದ ಪ್ರಧಾನ ಮಂತ್ರಿಯ ದೃಷ್ಟಿಯನ್ನು ಸಾಧಿಸಲು ಸಹಾಯ ಮಾಡುತ್ತದೆ

ಈ ಬಾರಿಯ ಬಜೆಟ್ ನಲ್ಲಿ ಈ ಯೋಜನೆಯ ಉದ್ದೇಶವನ್ನು ಘೋಷಿಸಲಾಗಿತ್ತು. ಫೆಬ್ರುವರಿ 1, 2021 ರ ತಮ್ಮ ಬಜೆಟ್ ಭಾಷಣದಲ್ಲಿ ಈ ಕುರಿತು ಉಲ್ಲೇಖಿಸಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕೋಟ್ಯಾಂತರ ಹೊಸ ಲಾಭಾರ್ಥಿಗಳಿಗೆ ಈ ಯೋಜನೆಯನ್ನು ವಿಸ್ತರಣೆ ಮಾಡುವುದಾಗಿ ಘೋಷಿಸಿದ್ದರು. ಈ ಕುರಿತು ತಮ್ಮ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿದ್ದ ನಿರ್ಮಲಾ ಸೀತಾರಾಮನ್, ಈಗಾಗಲೇ ಸುಮಾರು 8 ಕೋಟಿ ಲಾಭಾರ್ಥಿಗಳನ್ನು ಹೊಂದಿರುವ ಉಜ್ವಲಾ ಯೋಜನೆಗೆ ಹೊಸದಾಗಿ ರುಮಾರು 1 ಕೋಟಿ ಅಧಿಕ ಲಾಭಾರ್ಥಿಗಳನ್ನು ಸೇರಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದರು.