News

ನವೆಂಬರ್‌ ಅಂತ್ಯದವರೆಗೆ ಬಡವರಿಗೆ ಉಚಿತ ಪಡಿತರ ವಿತರಣೆ

30 June, 2020 5:38 PM IST By:

ದೇಶದ 80 ಕೋಟಿ ಜನರಿಗೆ ಉಫಚಿತ ಪಡಿತರ ನೀಡುವ ಜೊತೆಗೆ ಒಂದು ಕೆಜಿ ಕಡಲೆಕಾಳನ್ನು ನವೆಂಬರ್ ತಿಂಗಳವರೆಗೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ  ಘೋಷಣೆ ಮಾಡಿದರು.

ದೇಶದಲ್ಲಿ ಕೊರೋನಾ ಮಹಾಮಾರಿ ಆರ್ಭಟ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ದೇಶವನ್ನುಉದ್ದೇಶಿಸಿ ಮಾತನಾಡಿದರು.

ಕೊರೋನಾ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದರಿಂದ ಗರೀಬ್ ಕಲ್ಯಾಣ್ ಯೋಜನೆಯನ್ನು ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲೂ ಮುಂದುವರಿಸಲಾಗುವುದು. ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಬಡವರಿಗೆ 5 ಕೆಜಿ ಅಕ್ಕಿ ಅಥವಾ ಗೋಧಿ ಮತ್ತು ಒಂದು ಕೆ.ಜಿ. ಕಡಲೆ ಕಾಳು ಉಚಿತವಾಗಿ ನೀಡಲಾಗುವುದು. ಬಡವರಿಗೆ ಹೆಚ್ಚು ಸಮಸ್ಯೆಯಾಗಬಾರದು ಎಂದು ಈಗಾಗಲೇ ರೇಷನ್‌ ನೀಡಿದ್ದೇವೆ.  ಇನ್ನು ಮುಂದೆ ನವೆಂಬರ್ ತಿಂಗಳವರೆಗೆ ಉಚಿತವಾಗಿ ರೇಷನ್ ನೀಡಲಾಗುವುದು. ಲಾಕ್‌ಡೌನ್‌ ನಂತರ ವಲಸಿಗರ ಪ್ರಯಾಣ ಹೆಚ್ಚಾಗಿದೆ. ಹೀಗಾಗಿ ಒಂದು ದೇಶ, ಒಂದು ರೇಷನ್‌ ಯೋಜನೆ ಜಾರಿಗೆ ಬರುತ್ತಿದ್ದು, ಇದರಿಂದ ಯಾರೂ ಎಲ್ಲಿ ಬೇಕಾದರೂ ಪಡಿತರ ಪಡೆಯಬಹುದು ಎಂದರು.

ಮುಂದಿನ ದಿನಗಳಲ್ಲಿ ಹಬ್ಬಗಳ ಸಾಲು ಬರಲಿದೆ. ಗುರು ಪೂರ್ಣಿಮೆಯಿಂದ ಹಿಡಿದು ನವೆಂಬರ್‌ವರೆಗಿನ ಚಾಥ್‌ ಪೂಜಾವರೆಗೂ ಹಬ್ಬಗಳಿದೆ. ಈ ಸಂದರ್ಭದಲ್ಲಿ ಯಾರೊಬ್ಬರೂ ಉಪವಾಸದಿಂದಿರಬಾರದು. ಹೀಗಾಗಿ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯನ್ನು ನವೆಂಬರ್‌ವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಮೋದಿ ತಿಳಿಸಿದರು.

ಅಮೆರಿಕ, ಬ್ರಿಟನ್‌ ಜನಸಂಖ್ಯೆಗಿಂತಲೂ ಹೆಚ್ಚು ಮಂದಿಗೆ ಭಾರತದಲ್ಲಿ ನಾವು ನೆರವಾಗಿದ್ದೇವೆ. ನಾಗರಿಕ ಕಟ್ಟಿರುವ ಪ್ರತಿಯೊಂದು ತೆರಿಗೆ ಹಣವನ್ನು ಇಂತಹ ಪ್ರಯೋಜನಕಾರಿ ಯೋಜನೆಗಳಿಗೆ ವಿನಿಯೋಗಿಸಲಾಗುತ್ತಿದೆ.. ದೇಶದ ಪ್ರತಿ ತೆರಿಗೆದಾರರ ಕೊಡುಗೆ ಇದರಲ್ಲಿದೆ. ಪ್ರತಿ ತೆರಿಗೆದಾರರಿಗೆ ನನ್ನ ಹೃದಯಪೂರ್ವಕ ನಮನ ಸಲ್ಲಿಸುತ್ತೇನೆ ಎಂದು ಮೋದಿ

ಆತ್ಮನಿರ್ಭರ ಯೋಜನೆಯನ್ನು ಇನ್ನಷ್ಟು ಯಶಸ್ವಿಗೊಳಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಲೋಕಲ್‌ ಸೇ ವೋಕಲ್‌ಗೆ ಎಲ್ಲರೂ ಕೈ ಜೋಡಿಸಿ. ಇದರಿಂದ ಸ್ಥಳೀಯ ಮಟ್ಟದಲ್ಲಿ ಸಾವಿರಾರು ಮಂದಿಗೆ ಅನುಕೂಲವಾಗಲಿದೆ.
ಕೊರೋನಾ ವಿರುದ್ಧ ನಾವು ಹೋರಾಡುತ್ತಲೇ ಅನ್​ಲಾಕ್​ ಎರಡನೇ ಹಂತಕ್ಕೆ ಪ್ರವೇಶಿಸುತ್ತಿದ್ದೇವೆ. ಬೇರೆ ದೇಶಗಳಿಗೆ ಹೋಲಿಸಿದರೆ, ಭಾರತದ ಸ್ಥಿತಿ ಉತ್ತಮವಾಗಿದೆ. ಸರಿಯಾದ ಸಮಯಕ್ಕೆ ಲಾಕ್​ಡೌನ್​ ಮಾಡಿದ್ದೇವೆ. ಈ ಮೂಲಕ ಲಕ್ಷಾಂತರ ಜನರ ಪ್ರಾಣ ಉಳಿಸಿದ್ದೇವೆ. ನಾವೆಲ್ಲರೂ ಲಾಕ್​ಡೌನ್​ ನಿಯಮ ಪಾಲಿಸಿದ್ದೇವೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್​ ಬಳಸಿದ್ದೇವೆ. ಆದರೂ ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಗ್ರತೆ ತುಂಬಾ ಅವಶ್ಯಕವಾಗಿದೆ. ಕಂಟೈನ್ಮೆಂಟ್​ ಝೋನ್​ಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ ಎಂದು ಕರೆ ನೀಡಿದರು.