News

ನಿಮ್ಮ ಖಾತೆಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಹಣ ಜಮೆಯಾಗಿದೆ ಎಂಬುದನ್ನು ಮನೆಯಲ್ಲಿಯೇ ಕುಳಿತು ನೋಡಿಕೊಳ್ಳಿ

06 May, 2020 7:05 PM IST By:

ಕೇಂದ್ರ ಸರ್ಕಾರ ರೈತರಿಗೆ ಆರ್ಥಿಕವಾಗಿ ಸಹಾಯವಾಗಲಿ ಎಂಬ ಸದುದ್ದೇಶದಿಂದ ವಾರ್ಷಿಕವಾಗಿ  ಘೋಷಿಸಿದ 6,000 ರುಪಾಯಿ ಸಹಾಯ ಧನ ನಿಮ್ಮ ಖಾತೆಯಲ್ಲಿ ಜಮಾವಾಗಿದೆಯೇ ಎಂಬುದನ್ನು ಇನ್ನುಮುಂದೆ ಮನೆಯಲ್ಲಿಯೇ ಕುಳಿತು ನೋಡಿಕೊಳ್ಳಬಹುದು.. ದೇಶದಲ್ಲಿ ಇನ್ನೂ ಹಲವಾರು ರೈತರು ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿಲ್ಲ. ಯಾರು ನೋಂದಣಿ ಮಾಡಿಸಿಕೊಂಡಿಲ್ಲವೋ ಅವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಮೊಬೈಲ್‍ನಲ್ಲಿಯೂ ಅಪ್ಲೋಡ್ ಮಾಡಿ ಕೇಳಿದ ದಾಖಲಾತಿಗಳನ್ನು ಸಲ್ಲಿಸಿ ಸರ್ಕಾರ ನೀಡುತ್ತಿರುವ ಯೋಜನೆಯ ಲಾಭ ಪಡೆಯಬಹುದು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (ಪಿ.ಎಂ. ಕಿಸಾನ್) ರೈತರು ವಾರ್ಷಿಕ 6 ಸಾವಿರ ರುಪಾಯಿ ಪಡೆಯಲು ಕಂದಾಯ ಇಲಾಖೆ ಭೂಮಿ ಉಸ್ತುವಾರಿ ಕೋಶದ ಸಹಯೋಗದೊಂದಿಗೆ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ.

ಈ ಮೊಬೈಲ್ ಆ್ಯಪ್‍ನ್ನು ಗೂಗಲ್ ಪ್ಲೇಸ್ಟೋರ್‍ನಿಂದ ಡೌನ್‍ಲೌಡ್ ಮಾಡಿಕೊಂಡು ಸ್ವಯಂ ದೃಢೀಕರಣ ಪತ್ರದಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ ಮೊಬೈಲ್ ಮೂಲಕವೇ ಫೋಟೋ ತೆಗೆದು ರೈತರೇ ಅಪ್‍ಲೋಡ್ ಮಾಡಬಹುದು.

ಈ ತಂತ್ರಾಂಶದಲ್ಲಿ  ತಮ್ಮ ಜಮೀನು ಇರುವ ಜಿಲ್ಲೆ, ತಾಲೂಕು, ಹೋಬಳಿ, ಮತ್ತು ಗ್ರಾಮವನ್ನು ಆಯ್ಕೆ ಮಾಡಿ ನಂತರ ತಮ್ಮ ಮೊಬೈಲ್  ನಂಬರ್ ಅನ್ನು ದಾಖಲಿಸಿ ಮುಂದುವರಿಯಬೇಕು. ಮುಂದಿನ ಹಂತದಲ್ಲಿ ನಾಲ್ಕು ಸಂಖ್ಯೆಯ ಪಾಸ್‍ವರ್ಡ್ ನಂಬರ್ ದಾಖಲಿಸಬೇಕು. ನಂತರ ಗ್ರಾಮವನ್ನು ಆಯ್ಕೆ ಮಾಡಿ ಅಪ್‍ಲೋಡ್ ಎಂಬ ಬಟನ್ ಒತ್ತಬೇಕು.
ಈ ಹಂತದಲ್ಲಿ ಗ್ರಾಮಕ್ಕೆ ಸಂಬಂಧಿಸಿದ ಭೂ ದಾಖಲೆಗಳ ವಿವರಗಳು ನೇರವಾಗಿ ಭೂಮಿ ದತ್ತಾಂಶದಿಂದ ಮೊಬೈಲ್‍ಗೆ ಡೌನ್‍ಲೋಡ್ ಆಗುತ್ತದೆ. ಸರ್ವೆ ಸಂಖ್ಯೆ ದಾಖಲಿಸಿ ಸ್ವಾಧೀನದಾರರ ಹೆಸರನ್ನು ಆಯ್ಕೆ ಮಾಡಬೇಕು. ವರ್ಗ, ಸಣ್ಣ, ಅತೀ ಸಣ್ಣ ಹಿಡುವಳಿದಾರರ ಮಾಹಿತಿಯನ್ನು ಆಯ್ಕೆ ಮಾಡಿ ದೃಢೀಕರಿಸಿದ ನಂತರ ಆಧಾರ್  ಮಾಹಿತಿಯನ್ನು ದಾಖಲಿಸಬೇಕು. ಅಥವಾ ಆಧಾರ್ ಮಾಹಿತಿಯನ್ನು ನೇರವಾಗಿ ಆಧಾರ್ ಕಾರ್ಡ್‍ನಲ್ಲಿರುವ ಕ್ಯೂ  ಆರ್ ಕೋಡ್ ಅನ್ನು ಮೊಬೈಲ್‍ನಿಂದ ಸ್ಕ್ಯಾನ್ ಮಾಡುವ ಮೂಲಕವೂ ಸ್ವಯಂಚಾಲಿತವಾಗಿ ಆಧಾರ್ ವಿವರ ದಾಖಲಿಸುವ ಸೌಲಭ್ಯವೂ ಇದೆ.
ಮೊಬೈಲ್ ಸಂಖ್ಯೆ, ಬ್ಯಾಂಕ್ ವಿವರ, ಐಎಫ್‍ಸಿ ಸಂಖ್ಯೆ ನಮೂದಿಸುವ ಮೂಲಕ ಸ್ವಯಂ ಚಾಲಿತವಾಗಿ ಬ್ಯಾಂಕ್ ಮತ್ತು ಬ್ರಾಂಚ್ ಹೆಸರು ಆಯ್ಕೆಯಾಗುವಂತೆ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ದತ್ತಾಂಶವನ್ನು ಉಳಿಸಿ ಮುಂದಿನ ಸರ್ವೆ ನಂಬರ್ ದಾಖಲಿಸಬಹುದು. ಅಂತಿಮ ಹಂತದಲ್ಲಿ ಎಲ್ಲಾ ದತ್ತಾಂಶವನ್ನು ಅಪ್‍ಲೋಡ್ ಬಟನ್ ಒತ್ತುವ ಮೂಲಕ ಸಂಗ್ರಹಿಸಿದ ಮತ್ತು ಛಾಯಾಚಿತ್ರಗಳನ್ನು ಕೇಂದ್ರ ಸರ್ವರ್‍ಗೆ ರವಾನೆಯಾಗಲಿದೆ. ಪಹಣಿಯಲ್ಲಿರುವ ಜಂಟಿ ಸ್ವಾಧೀನದಾರರು ಪ್ರತ್ಯೇಕವಾಗಿಯೇ ಮಾಹಿತಿಯನ್ನು ಸಲ್ಲಿಸಬೇಕು. ರೈತರು ರಾಜ್ಯದಲ್ಲಿ ಯಾವುದೇ ಭಾಗದಲ್ಲಿ ಹೊಂದಿರುವ ಜಮೀನಿನ ವಿವರಗಳನ್ನು ಸಲ್ಲಿಸಬಹುದು.  ಪ್ಲೇಸ್ಟೋರ್ ಲಿಂಕ್ನಿಂದ ಪಿಎಂ ಕಿಸಾನ್ ಆ್ಯಪ್ ಡೌಲ್ಡೋಡ್ ಮಾಡಿಕೊಳ್ಳಬಹುದು.

ಈ ಯೋಜನೆ ಮಾಹಿತಿ, ಸಹಾಯ ಧನ, ಬೇಕಾಗುವ ದಾಖಲಾತಿ, ಹಣ ಪಡೆಯಲು ರೈತರು ಏನು ಮಾಡಬೇಕು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
ಗುರುತಿನ ದಾಖಲಾತಿ ಪಿಎಂ ಕಿಸಾನ್ ಯೋಜನೆಯಡಿ ಸಹಾಯ ಧನವನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಆಧಾರ್ ಇಲ್ಲದ ರೈತರು ತಾತ್ಕಾಲಿಕವಾಗಿ ಬೇರೆ ಗುರುತಿನ ದಾಖಲೆ ಒದಗಿಸಬೇಕಿದೆ. ಮೊದಲನೇ ಕಂತಿನ ಸಹಾಯ ಧನ ಪಡೆಯಲು ಆಧಾರ್ ಇಲ್ಲದ ರೈತರು ಮತದಾರರ ಗುರುತಿನ ಚೀಟಿ, ಡಿಎಲ್ ಇಲ್ಲವೇ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನೀಡಿರುವ ಫೋಟೋ ಸಹಿತ ಯಾವುದಾದರೂ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಒದಗಿಸಬೇಕಿದೆ.

ಆಧಾರ್ ಕಾರ್ಡ್ ಕಡ್ಡಾಯ:

ಆಧಾರ್ ಕಡ್ಡಾಯ ರೈತರು 2 ನೇ ಕಂತಿನಿಂದ ಸಹಾಯ ಧನ ಪಡೆಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಆಧಾರ್ ಕಾರ್ಡ್ ಅನ್ನು ಒದಗಿಸಬೇಕೆಂದು ತಿಳಿಸಲಾಗಿದೆ. ರೈತರಿಗೆ ನೀಡಲಾಗುವ ನೇರ ಆದಾಯ ಬೆಂಬಲ ದುರ್ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಸಣ್ಣ ಹಿಡುವಳಿದಾರರು ಮಧ್ಯಂತರ ಬಜೆಟ್ ನಲ್ಲಿ ಘೋಷಿಸಿರುವಂತೆ 5 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಸಣ್ಣ ಹಿಡುವಳಿದಾರ ರೈತರಿಗೆ ವಾರ್ಷಿಕ ರೂ. 6,000 ಸಹಾಯ ಧನ ನೀಡಲಾಗುವುದು. ಅಂದರೆ ತಿಂಗಳಿಗೆ  500 ಸಿಗಲಿದೆ. ಪ್ರತಿ 4 ತಿಂಗಳಿಗೊಮ್ಮೆ 2000 ರುಪಾಯಿ ಸಹಾಯ ಧನ ನೀಡಲಾಗುವುದು. ಮೂರು ಕಂತುಗಳಲ್ಲಿ ತಲಾ ರೂ. 2000 ಸಹಾಯಧನ ನೀಡಲಾಗುತ್ತದೆ.

ಯಾರು ಫಲಾನುಭವಿಗಳು?

ಗಂಡ, ಹೆಂಡತಿ ಹಾಗು 18 ವರ್ಷದೊಳಗಿನ ಮಕ್ಕಳು ಇರುವ ಕುಟುಂಬ ಇರಬೇಕು. - ಎರಡು ಹೆಕ್ಟೇರ್ ಜಮೀನು ಇರಬೇಕು. - ಫೆಬ್ರವರಿ 1, 2019ರ ಕ್ಕಿಂತ ಮೊದಲಿನ ಭೂ ದಾಖಲೆಗಳಲ್ಲಿ ಹೆಸರು ಇರುವ ರೈತರನ್ನು ಮಾತ್ರ ಪರಿಗಣಿಸಲಾಗುತ್ತದೆ. ಫೆಬ್ರವರಿ 1ರ ನಂತರ ಬದಲಾವಣೆ ಮಾಡಲಾದ ಭೂ ದಾಖಲಾತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. - ಕುಟುಂಬವೊಂದಕ್ಕೆ ಸೇರಿದ ಜಮೀನು ವಿವಿಧ ಹಳ್ಳಿಗಳಲ್ಲಿ ಅಥವಾ ಕಂದಾಯ ದಾಖಲೆಗಳಲ್ಲಿ ಹಂಚಿ ಹೋಗಿದ್ದರೂ ಪರಿಗಣಿಸಲಾಗುತ್ತದೆ.