News

ಮುಂಗಾರು ಹಂಗಾಮಿನ ಬೆಳೆಗಳ ವಿಮಾ ನೋಂದಣಿ ಪ್ರಕ್ರಿಯೆ ಆರಂಭ

03 July, 2021 9:32 PM IST By:

2021-22ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೆಳೆಗಳ ಘೋಷಣೆ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅದರಂತೆ ರೈತರು ಘೋಷಿತ ಬೆಳೆಗಳ ವಿಮೆಗಾಗಿ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಮುಂಗಾರು ಹಂಗಾಮಿಗೆ ಆಯ್ದ ಹೋಬಳಿಗಳಲ್ಲಿ ರಾಗಿ (ಮಳೆ ಆಶ್ರಿತ) ಹಾಗೂ ಜೋಳ (ಮಳೆ ಆಶ್ರಿತ) ಮತ್ತು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಭತ್ತ (ನೀರಾವರಿ/ ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ/ಮಳೆ ಆಶ್ರಿತ) ಬೆಳೆಗಳು ಆಯ್ಕೆ ಯಾಗಿರುತ್ತವೆ. ಶಿಇವಮೊಗ್ಗ ಜಿಲ್ಲೆಯಲ್ಲಿ ಬೆಳೆ ವಿಮಾ ಯೋಜನೆಯನ್ನು ಸರ್ಕಾರದಿಂದ ಆಯ್ಕೆಯಾದ ಅಗ್ರಿಕಲ್ಚರ್ ಇನ್‌ಶ್ಯೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ, ಸಂಸ್ಥೆಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ.

ಮುಂಗಾರು ಹಂಗಾಮಿನ ಬೆಳೆ ವಿಮೆಗಾಗಿ ಬೆಳೆ ಸಾಲ ಪಡೆದ ಮತ್ತು ಪಡೆಯದ ರೈತರು ಈ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬಹುದು. ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಮುಸುಕಿನ ಜೋಳ (ನೀರಾವರಿ/ ಮಳೆ ಆಶ್ರಿತ) ಬೆಳೆಗೆ ಜುಲೈ 31, ಭತ್ತ (ನೀರಾವರಿ/ ಮಳೆ ಆಶ್ರಿತ), ಜೋಳ (ಮಳೆ ಆಶ್ರಿತ) ಮತ್ತು ರಾಗಿ (ಮಳೆ ಆಶ್ರಿತ) ಬೆಳೆಗಳಿಗೆ ಆಗಸ್ಟ್ 16 ಅಂತಿಮ ದಿನವಾಗಿದೆ.

ಬೆಳೆ ವಿಮೆ ನೋಂದಣಿಗಾಗಿ ನಇಗದಿ ಮಾಡಿರುವ ಅಂತಿಮ ದಿನಾಂಕದ ಒಳಗಾಗಿ ಹೆಚ್ಚಿನ ಸಂಖ್ಯೆಯ ರೈತರು ತಮ್ಮ ಬೆಳೆಗಳನ್ನು ವಿಮೆ ವ್ಯಾಪ್ತಿಗೆ ಒಳಪಡಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳು ಕೋರಿದ್ದಾರೆ. ಬಿತ್ತನೆ, ನಾಟಿ ಮಾಡುವುದಕ್ಕಿಂತ ಮುಂಚಿತವಾಗಿಯೇ ನೋಂದಣಿ ಮಾಡಿಕೊಳ್ಳಲು ಸಹ ಅವಕಾಶವಿರುತ್ತದೆ. ಬೆಳೆ ಸಾಲ ಪಡೆಯುವ ರೈತರನ್ನು ಬೆಳೆ ವಿಮೆ ಯೋಜನೆಯಡಿ ಕಡ್ಡಾಯವಾಗಿ ಒಳಪಡಿಸಲಾಗುವುದು. ಇನ್ನು ಬೆಳೆ ಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸದೇ ಇದ್ದರೆ ಬೆಳೆ ನೋಂದಣಿಗೆ ನಿಗದಿ ಮಾಡಿರುವ ಅಂತಿಮ ದಿನಾಂಕಕ್ಕೆ 7 ದಿನ ಮುಂಚಿತವಾಗಿ ಲಿಖಿತ ಮುಚ್ಚಳಿಕೆ ನೀಡಬೇಕು. ಮುಚ್ಚಳಿಕೆ ನೀಡಿದ ರೈತರನ್ನು ಮಾತ್ರ ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುವುದು. ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ ಮತ್ತು ಆಧಾರ್ ಸಂಖ್ಯೆ ಸಹಿತ ತಮಗೆ ಹತ್ತಿರವಿರುವ ಬ್ಯಾಂಕ್/ ಆರ್ಥಿಕ ಸಂಸ್ಥೆಗಳು/ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ (ಸಿಎಸ್‌ಸಿ) ನೋಂದಣಿ ಮಾಡಿಕೊಳ್ಳಬೇಕು.

ಹೆಚ್ಚಿನ ವಿವರಗಳಿಗೆ ಕೃಷಿ ಇಲಾಖೆ, ಕಂದಾಯ ಇಲಾಖೆ, ಸಹಕಾರ ಇಲಾಖೆ, ಸಮೀಪದ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಕಿರಣ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.